

ದಾಬಸ್ಪೇಟೆ :
ಹೈನುಗಾರಿಕೆಯಿಂದಾಗಿ ರೈತ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ ಎಂದು ನೆಲಮಂಗಲ ಬಮುಲ್ ನಿರ್ದೇಶಕ ಬೈರೇಗೌಡ ತಿಳಿಸಿದರು.
ಸೋಂಪುರ ಹೋಬಳಿ ಬರಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಒಕ್ಕೂಟ 14 ಕೋಟಿ ರೂ. ನಷ್ಟದಲ್ಲಿತ್ತು. ಈಗ 50 ಕೋಟಿ ರೂ. ಲಾಭದಲ್ಲಿದ್ದು, ಇದಕ್ಕೆ ರೈತರು ಗುಣಮಟ್ಟದ ಹಾಲು ಪೂರೈಸುತ್ತಿರುವುದೇ ಕಾರಣ ಎಂದು ಸ್ಮರಿಸಿದರು.
ಸಹಕಾರ ಸಂಘದ ನಿರ್ದೇಶಕ ಪುಟ್ಟ ಗಂಗಯ್ಯ ಮಾತಾಡಿ, ನಮಗೆ ಸರಿಯಾದ ಫೀಡ್ ಸಿಗುವುದಿಲ್ಲ ಹಾಗೂ ಹಸುಗಳಿಗೆ ಗರ್ಭ ಕಟ್ಟುವಿಗೆ ಸರಿಯಾಗಿ ಮಾಡುತ್ತಿಲ್ಲ ಎಂದು ಬಮುಲ್ ನಿರ್ದೇಶಕರಿಗೆ ತಿಳಿಸಿದರು.
ಬರಗೇನಹಳ್ಳಿ ಡೇರಿ ಅಧ್ಯಕ್ಷ ಬಿ.ಸಿ.ಕುಮಾರಸ್ವಾಮಿ ಮಾತನಾಡಿ, ಸಂಘವು 1.95 ಲಕ್ಷ ರೂ. ಲಾಭಗಳಿಸಿದೆ. ಲಾಭದಿಂದ ಕಟ್ಟಡ ಕಟ್ಟಿದ್ದೇವೆ. ಸಂಘದಲ್ಲಿ ಪ್ರಸ್ತುತ ಹೈನುಗಾರಿಕೆ ಮಾಡುವ ಸದಸ್ಯರಿಗೆ ಬಮುಲ್ ವಿಮಾ ಯೋಜನೆ ಮಾಡಿಕೊಡಲಾಗುತ್ತದೆ. ಸದಸ್ಯರು ಹಾವು ಕಡಿದು ಸತ್ತರೆ, ಷೇರುದಾರರು ಅಪಘಾತಕ್ಕೀಡಾದರೆ ಸಂದಿಂದ ಪರಿಹಾರ ನಿಡಲಾಗುವುದು. 84 ರೈತರಿಗೆ ಹಾಲಿನ ಕ್ಯಾನ್ ವಿತರಿಸಲಾಗುವುದು ಎಂದರು.
ಸಂದ ಮುಖ್ಯ ಕಾರ್ಯನಿರ್ವಾಹಕ ಬಿ.ಎಚ್.ನಾಗೇಶ್, ಹಾಲು ಪರೀಕ್ಷಕಿ ಮೆಹರ್ ಉನಿಸಾ, ಸಹಾಯಕ ಬಿ.ಜಿ.ರವಿಕುಮಾರ್, ಮುಖಂಡರಾದ ಜಗದೀಶ್ ಚೌಧರಿ, ಕೆ.ಕೆ.ಮಧೂಸೂದನ, ಜಿ.ಜಯಣ್ಣ, ಸತೀಶ್ ಕುಮಾರ್ ಇದ್ದರು.