ಕರ್ತವ್ಯ ಲೋಪವೆಸಗಿದ 35 BLOಗಳಿಗೆ ಶೋಕಾಸ್ ನೋಟಿಸ್: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳಿಕೆ! V Anbu Kumar

ಕರ್ತವ್ಯ ಲೋಪವೆಸಗಿದ 35 BLOಗಳಿಗೆ ಶೋಕಾಸ್ ನೋಟಿಸ್: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳಿಕೆ! V Anbu Kumar
ಕರ್ತವ್ಯ ಲೋಪವೆಸಗಿದ 35 BLOಗಳಿಗೆ ಶೋಕಾಸ್ ನೋಟಿಸ್: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳಿಕೆ! V Anbu Kumar
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಮಾಡಿದ 35 ಬಿಎಲ್​ಒಗಳಿಗೆ ಶೋಕಾಸ್​ ನೋಟಿಸ್​
  • ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್​ರಿಂದ ನೋಟಿಸ್​ ಜಾರಿ
  • ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದಾರೆ ಎಂದು ಭೌತಿಕ ಫಾರಂ ತಿರಸ್ಕರಿಸುವಂತಿಲ್ಲ ಎಂದ ಚುನಾವಣಾ ಆಯೋಗ
  • ಶಾಶ್ವತ ನಿವಾಸ ಪ್ರಮಾಣ ಪತ್ರ ಪರಿಗಣಿಸುವ ಬಗ್ಗೆ ಆಗಸ್ಟ್ 5ರ ಅರ್ಜಿ ಪರಿಶೀಲನಾ ಹಂತದಲ್ಲಿ ಅಂತಿಮ ತೀರ್ಮಾನ
ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ಫಾರಂ ವಿತರಣಾ ಕಾರ್ಯದಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ 35 ಬಿಎಲ್‌ಒ (ಮತಗಟ್ಟೆ ಮಟ್ಟದ ಅಧಿಕಾರಿಗಳು) ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ( V Anbu Kumar ) ತಿಳಿಸಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಹತ್ವದ ವಿಷಯವನ್ನು ಹಂಚಿಕೊಂಡ ಅನ್ಬುಕುಮಾರ್​, ಮತದಾರರ ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಫಾರಂ ತಲುಪಿಸಬೇಕು ಎಂದು ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಮರುಸೂಚನೆ ನೀಡಿದ್ದಾರೆ. ಸಾರ್ವಜನಿಕರಿಂದ ಬರುವ ಯಾವುದೇ ದೂರುಗಳನ್ನು ಕಡೆಗಣಿಸುವುದಿಲ್ಲ, ಪ್ರತಿ ದೂರುಗಳನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಆನ್‌ಲೈನ್ ಮತ್ತು ಭೌತಿಕ ಅರ್ಜಿ ಸಲ್ಲಿಕೆಯ ಗೊಂದಲಗಳ ಕುರಿತು ಮಾತನಾಡಿದ ಮುಖ್ಯ ಚುನಾವಣಾಧಿಕಾರಿಗಳು, ಮತದಾರರು ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೆ, ಅವರು ಮತ್ತೊಮ್ಮೆ ಭೌತಿಕ ಫಾರಂ ಭರ್ತಿ ಮಾಡಿಕೊಡುವ ಅಗತ್ಯವಿಲ್ಲ. ಅದೇ ರೀತಿ, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದಾರೆ ಎಂಬ ಕಾರಣಕ್ಕೆ ಭರ್ತಿ ಮಾಡಿದ ಭೌತಿಕ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಯಾವುದೇ ಬಿಎಲ್‌ಒ ಹೇಳುವಂತಿಲ್ಲ. ಆದರೆ, ಗೊಂದಲಗಳನ್ನು ತಪ್ಪಿಸಲು ಮತದಾರರು ಎರಡರ ಪೈಕಿ ಸಾಧ್ಯವಾದಷ್ಟು ಯಾವುದಾದರೂ ಒಂದು ವಿಧಾನವನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎಂದು ಸ್ಪಷ್ಟಪಡಿಸಿದರು.
ವೆಬ್‌ಸೈಟ್‌ನಲ್ಲಿ ಬಿಎಲ್‌ಒಗಳ ಮೊಬೈಲ್ ನಂಬರ್‌ಗಳನ್ನು ಪ್ರಕಟಿಸಲಾಗಿದ್ದು, ಅಗತ್ಯ ಇರುವ ಮತದಾರರು ಅವರಿಗೆ ನೇರವಾಗಿ ಕರೆ ಮಾಡಬಹುದು. ಯಾರ ಮನೆಗೆ ಇದುವರೆಗೆ ಫಾರಂ ತಲುಪಿಲ್ಲವೋ, ಅವರ ಮನೆಗೆ ಮುಂದಿನ ದಿನಗಳಲ್ಲಿ ಬರಲಿದ್ದು, ಜುಲೈ 29ರವರೆಗೆ ಇದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ದಾಖಲಿಸಿದ್ದರೆ ಅದನ್ನು ಸರಿಪಡಿಸಲು ಬಿಎಲ್‌ಒಗಳಿಗೆ ಜುಲೈ 29ರ ವರೆಗೆ ಎಡಿಟ್ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಭೌತಿಕ ಅರ್ಜಿಯಲ್ಲಿ ದೋಷಪೂರಿತ ಹೆಸರು, ವಿಳಾಸ ಸರಿಪಡಿಸಿಕೊಳ್ಳಲು 'ಫಾರಂ 8' ಅನ್ನು ಬಳಸಬಹುದಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಸಾರ್ವಜನಿಕರು ಈ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಇನ್ನೂ ಸರ್ಕಾರವು ಅರ್ಜಿದಾರರಿಗೆ ನೀಡಲು ಉದ್ದೇಶಿಸಿರುವ 'ಶಾಶ್ವತ ನಿವಾಸ ಪ್ರಮಾಣ ಪತ್ರ'ವನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸುವ ಕುರಿತು ಆಗಸ್ಟ್ 5ರಂದು ನಡೆಯಲಿರುವ ಅರ್ಜಿ ಪರಿಶೀಲನಾ ಹಂತದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅರ್ಜಿಗಳ ವಿತರಣೆಯನ್ನು ಬಿಎಲ್‌ಒಗಳೇ ನೇರವಾಗಿ ಮಾಡಬೇಕಾಗಿದ್ದರೂ, ಮತದಾರರು ಭರ್ತಿ ಮಾಡಿದ ಅರ್ಜಿಗಳನ್ನು ರಾಜಕೀಯ ಪಕ್ಷಗಳ ಬಿಎಲ್ಎ (ಮತಗಟ್ಟೆ ಮಟ್ಟದ ಏಜೆಂಟರು) ಗಳು ಕೂಡ ಸಂಗ್ರಹಿಸಿ ಬಿಎಲ್‌ಒಗಳಿಗೆ ತಲುಪಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳ ಮೇಲ್ವಿಚಾರಣೆಗಾಗಿ ದೆಹಲಿಯಿಂದ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಆಗಮಿಸಿದ್ದು, ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸುತ್ತಿದೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.
ರಾಜ್ಯಾದ್ಯಂತ ಸದ್ಯ 5.40 ಕೋಟಿ ಎನ್ಯುಮರೇಷನ್ (ಮತದಾರರ ಗಣತಿ) ತಲುಪಿಸುವ ಬೃಹತ್ ಕಾರ್ಯ ಭರದಿಂದ ಸಾಗಿದ್ದು, ಒಟ್ಟು ಶೇ. 81 ರಷ್ಟು ಫಾರಂಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಬಿಎಲ್‌ಒಗಳು ನಿರಂತರವಾಗಿ ಡೇಟಾವನ್ನು ಅಪ್ಡೇಟ್ ಮಾಡುತ್ತಿದ್ದು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರಗತಿಯಾಗಿದೆ. ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ 112 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ವಿತರಣೆಯಾಗಿದೆ. ದೇವದುರ್ಗ, ಕುಮಟಾ ಮತ್ತು ಮಾಯಕೊಂಡ ಕ್ಷೇತ್ರಗಳಲ್ಲಿ ಶೇ. 100 ರಷ್ಟು ವಿತರಣೆಯಾಗಿದ್ದು, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಹಾಗೂ ಹೆಬ್ಬಾಳ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಪ್ರಗತಿ ದಾಖಲಾಗಿದೆ. ಇದರೊಂದಿಗೆ ಡಿಜಿಟೈಸೇಷನ್ ಕಾರ್ಯವೂ ವೇಗವಾಗಿ ಸಾಗುತ್ತಿದ್ದು, ಹಲವು ಕ್ಷೇತ್ರಗಳಲ್ಲಿ ಶೇ. 30 ಕ್ಕಿಂತ ಹೆಚ್ಚು ಪ್ರಗತಿ ಕಂಡಿದೆ ಎಂದು ಅನ್ಬುಕುಮಾರ್​ ಅವರು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net