

ಬೆಂಗಳೂರು: ಪೆಟ್ರೋಲ್ನಲ್ಲಿ ಶೇಕಡ 20ರ ಬದಲು 30ಕ್ಕೂ ಅಧಿಕ ಪ್ರಮಾಣದಲ್ಲಿ ಎಥೆನಾಲ್ ಬಳಸಲಾಗುತ್ತಿದೆ ಎಂಬ ಆರೋಪವನ್ನು ಸಂಪೂರ್ಣ ಅಲ್ಲಗೆಳೆದಿರುವ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ( Rizwan Arshad ) ಆಕ್ರೋಶ ಹೊರಹಾಕಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವ ರಿಜ್ವಾನ್ ಅರ್ಷದ್, ಕೇಂದ್ರ ಸರ್ಕಾರವೇ ಅಧಿಕೃತವಾಗಿ ನಿಗದಿಪಡಿಸಿರುವ ಎನ್‌ಎಬಿಎಲ್ (NABL) ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ಗ್ಯಾಸ್ ಕ್ರೋಮೇಟೋಗ್ರಫಿ ತಂತ್ರಜ್ಞಾನವನ್ನು ಬಳಸಿ ಒಟ್ಟು 63 ಇಂಧನ ಮಾದರಿಗಳನ್ನು (ಸ್ಯಾಂಪಲ್ಸ್) ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷಾ ವರದಿಗೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ತಾಂತ್ರಿಕ ನೆಪಗಳನ್ನು ಒಡ್ಡಿ ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ನಡೆಸಿದ ತಜ್ಞ ಮಟ್ಟದ ಪರೀಕ್ಷಾ ವಿಧಾನವನ್ನೇ ತಪ್ಪೆಂದು ಪ್ರತಿಪಾದಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು, ತೀರಾ ಕಳಪೆ ಮಟ್ಟದ ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ಸಚಿವರು ಲೇವಡಿ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಇಂಡಿಯನ್, ಹಿಂದೂಸ್ಥಾನ್ ಹಾಗೂ ಭಾರತ್ ಸೇರಿದಂತೆ ವಿವಿಧ ತೈಲ ಕಂಪನಿಗಳ ಅಧಿಕಾರಿಗಳು ಅವರವರ ಪೆಟ್ರೋಲ್ ಬಂಕ್ಗೆ ಭೇಟಿ ನೀಡಿ, ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ನಲ್ಲಿ ಸಿಗುವ ಸಾಮಾನ್ಯ ಹೈಡ್ರೋಮೀಟರ್ ಬಳಸಿ ಇಂಧನ ಪರೀಕ್ಷೆ ನಡೆಸಿ, ಎಲ್ಲವೂ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಒತ್ತಡ ಹಾಕಿ ಅವರ ಡೀಲರ್ಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಸಚಿವರು ಅಣಕಿಸಿದ್ದಾರೆ.
ನಾವು ಪ್ರಾಮಾಣಿಕೃತ ಲ್ಯಾಬ್ನಿಂದ ಟೆಸ್ಟ್ ಮಾಡಿಸಿದರೆ, ನಮ್ಮನ್ನು ನಂಬುತ್ತಿಲ್ಲ ಆದರೆ, ನಾವು ವರದಿಗೆ ಬದ್ದರಾಗಿದ್ದೇವೆ. ಸ್ವತಃ ಬಿಎಂಡಬ್ಲ್ಯೂ (BMW) ಕಂಪನಿಯ ಸಿಇಒ ಅವರೇ ತಮ್ಮ ವಾಹನಗಳಿಗೆ ಇ20 (E-20) ಇಂಧನ ಸೂಕ್ತವಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ನಾವು 63 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ರವಾನಿಸಿದಾಗ ಮೌನಕ್ಕೆ ಶರಣಾಗಿದ್ದ ಕೇಂದ್ರ ಸರ್ಕಾರ ಹಾಗೂ ಆಯಿಲ್ ಕಂಪನಿಗಳು, ವರದಿ ಹೊರಬಿದ್ದ ತಕ್ಷಣವೇ ಜಂಟಿ ಸರ್ವೆಗೆ ಕರೆಯುತ್ತಿರುವುದು ಅವರಲ್ಲಿರುವ ಅನುಮಾನಗಳನ್ನು ಸ್ಪಷ್ಟಪಡಿಸುತ್ತದೆ. ಸಾರ್ವಜನಿಕರ ವಾಹನಗಳ ಭದ್ರತೆ ಮತ್ತು ಇಂಧನದ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ರಿಜ್ವಾನ್ ಅರ್ಷದ್, ಈ ವಿಚಾರದಲ್ಲಿ ಸತ್ಯಾಸತ್ಯತೆಯನ್ನು ಹೊರತರಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.