ದ್ವಿಭಾಷಾ ನೀತಿ ಹೆಸರಿನಲ್ಲಿ ಕನ್ನಡ ಹಿನ್ನೆಲೆಗೆ: ರಾಜ್ಯಲರಿಗೆ ದೂರು

complaint-to-governor--aganist-to-state-government
complaint-to-governor--aganist-to-state-government
Published on

ಪ್ರಮುಖ ಮುಖ್ಯಾಂಶಗಳು

  • * ಸರ್ಕಾರದ ಕ್ರಮಕ್ಕೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಕ್ರೋಶ
  • * ದ್ವಿಭಾಷಾ ನೀತಿ ಕ್ರಮದಿಂದ ಹಿಂದೆ ಸರಿಯದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರ್ಕಾರವು ದ್ವಿಭಾಷಾ ನೀತಿಯ ಹೆಸರಿನಲ್ಲಿ ಕನ್ನಡವನ್ನು ಹಿನ್ನೆಲೆಗೆ ಸರಿಸುವ ಹುನ್ನಾರ ಮಾಡಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ದೂರು ನೀಡಿದೆ.
ಈ ಸಂಬಂಧ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್.ಜಿ. ಕೋಟಿ ಅವರ ನೇತೃತ್ವದ ನಿಯೋಗದ ಸದಸ್ಯರು ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ, ಅವರೊಂದಿಗೆ ಈ ವಿಚಾರ ಕುರಿತು ಚರ್ಚಿಸಿದರು.
ರಾಜ್ಯಪಾಲರ ಭೇಟಿ ನಂತರ ಸುದ್ದಿಗೋಷ್ಠಿ ನಡೆಸಿದ ಎಸ್.ಜಿ. ಕೋಟಿ ಅವರು, ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯವರೆಗೆ ದ್ವಿಭಾಷಾ ಶಿಕ್ಷಣ ನೀತಿಯನ್ನು ಅಳವಡಿಸುವ ಮೂಲಕ, ಕನ್ನಡದ ಕತ್ತು ಹಿಸುಕುವ ಕೆಲಸ ಮಾಡಿದೆ. ದ್ವಿಭಾಷಾ ಕಲಿಕೆಯೆಂಬ ಪದ ಪ್ರಯೋಗದ ಮೂಲಕ ಪರೋಕ್ಷವಾಗಿ ಕನ್ನಡವನ್ನು ಪೂರ್ತಿಯಾಗಿ ಕಡೆಗಣಿಸುವ ಕೆಲಸಕ್ಕೆ ಕೈ ಹಾಕಿದೆ. ರಾಜ್ಯ ಸರ್ಕಾರದ ಕ್ರಮ ಕನ್ನಡಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹದಿನೈದು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಕಲಿಸುವ ದ್ವಿಭಾಷಾ ಬೋಧನೆಯೆಂಬ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಹಾಡುಗಳು ಸೇರಿ ಕೆಲವು ಅಧ್ಯಾಯಗಳು ಆಂಗ್ಲಭಾಷೆಯಲ್ಲಿ ಮಾತ್ರ ಇವೆ. ಇನ್ನು ಪರೀಕ್ಷೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಸರಿ ಉತ್ತರ ಬರೆದ ವಿದ್ಯಾರ್ಥಿಗಳಿಗೆ ಎ+ ಶ್ರೇಣಿ, ಕನ್ನಡದಲ್ಲಿ ಬರೆದ ವಿದ್ಯಾರ್ಥಿಗಳಿಗೆ ಬಿ+ ಶ್ರೇಣಿ ನೀಡಬೇಕೆಂದು ಸುತ್ತೋಲೆಯಲ್ಲಿಯೇ ಸೂಚಿಸಲಾಗಿದೆ. ಈ ಮೂಲಕ ಎಲ್ಲರೂ ಕನ್ನಡದ ಬದಲಾಗಿ, ಆಂಗ್ಲಭಾಷೆಯಲ್ಲಿಯೇ ಕಲಿಯಬೇಕು ಮತ್ತು ಬರೆಯಬೇಕೆಂದು ಪರೋಕ್ಷವಾಗಿ ಒತ್ತಡ ಹೇರುತ್ತಿದೆ ಎಂದು ಅಸಮಾಧಾನಗೊಂಡರು.
ಮಕ್ಕಳ ಮನಸ್ಸಿನಲ್ಲಿ ಆಲೋಚನೆಯನ್ನು ಬೆಳೆಸುವುದಕ್ಕೆ, ಕಲ್ಪನೆಯ ವಿಕಾಸಕ್ಕೆ ಮಾತೃಭಾಷೆಯೇ ಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಜತೆಗೆ ಪ್ರಾಂತೀಯ ಭಾಷೆಗಳಲ್ಲಿ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ನೀಡಲು, ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಪಠ್ಯಕ್ರಮಗಳು ಪ್ರಾಂತೀಯ ಭಾಷೆಗಳಲ್ಲಿ ಸಿದ್ಧವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಇಂಗ್ಲೀಷ್‌ನಲ್ಲಿ ಕೊಡಬೇಕು ಎಂದು ರಾಜ್ಯ ಸರ್ಕಾರವು ನಿರ್ದೇಶಿಸಿರುವುದು ಆಘಾತಕಾರಿ ನಿರ್ಧಾರ. ಸರ್ಕಾರ ಈ ಕ್ರಮದಿಂದ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪರಿಷತ್ತಿನ ಉಪಾಧ್ಯಕ್ಷ ರಮೇಶ ಭಟ್ ಬೆಳಗೋಡು, ರಾಜ್ಯ ಸಂಪರ್ಕ ಪ್ರಮುಖ ವಿ. ರಂಗನಾಥ, ಜಾನಪದ ಪ್ರಕಾರ ಪ್ರಮುಖ ಶ್ರೀರಂಜಿನಿ ದತ್ತಾತ್ರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net