ರೈಲಿನಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಡ್ರಗ್ಸ್ ಸಾಗಣೆ

drug-smuggling
drug-smuggling
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ,ರಾಜಸ್ಥಾನದಿಂದ 30.58 ಕೋಟಿ ರೂ. ಮಾದಕ ವಸ್ತು
  • ವಿದೇಶಿ ಪ್ರಜೆ ಸೇರಿ ಹೊರ ರಾಜ್ಯದ 10 ಮಂದಿ ಬಂಧನ
  • ಚೂಡಿದಾರ, ನೈಟಿಯಲ್ಲಿ ಅಡಗಿಸಿದ್ದ 1 ಕೋಟಿ ರೂ.ಕೊಕೇನ್
ಬೆಂಗಳೂರು: ದೆಹಲಿ, ರಾಜಸ್ಥಾನದಿಂದ ರೈಲಿನಲ್ಲಿ ಮಹಿಳೆಯರು ಚೂಡಿದಾರ, ನೈಟಿಯಲ್ಲಿ ಮರೆಮಾಚಿ ಕೋಟ್ಯಂತರ ರೂ.ಮೌಲ್ಯದ ಎಂಡಿಎಂಎ, ಕೊಕೇನ್, ಹೆರಾಯಿನ್ ಸಾಗಣೆ ಮಾಡುತ್ತಿದ್ದ ಜಾಲವನ್ನು ಬೇದಿಸಿರುವ ಸಿಸಿಬಿ ಪೊಲೀಸರು 30.58 ಕೋಟಿ ರೂ.ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಿ, 17 ಮಂದಿಯನ್ನು ಬಂಧಿಸಿದ್ದಾರೆ. 
ಸಿಸಿಬಿ ಮಾದಕ ವಸ್ತು ನಿಗ್ರಹ ದಳ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್‌ಫೀಲ್ಡ್, ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ, ದೆಹಲಿ ಮೂಲದ ಖಾಲಿಮ್ (19), ಕನ್ನಯ್ಯ(20), ಸತ್ಯಂ(19), ಶಾಹಿಲ್ ಕುಮಾರ್ (22), ರಾಜಸ್ಥಾನದ ಲುಂಬಾರಂ ವಿಷ್ಣೋಯಿ(25), ಅನುಪ್ ರಾಮ್ ಚೌದರಿ (23) ಸೇರಿ ಕೇರಳ, ತಮಿಳುನಾಡು ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳಾದ 13 ಕೆ.ಜಿ 135 ಗ್ರಾಂ ಎಂಡಿಎಂಎ, 181.3 ಗ್ರಾಂ ಕೋಕೇನ್, 15 ಗ್ರಾಂ ಹೆರಾಯಿನ್, 59.322 ಕೆ.ಜಿ ಗಾಂಜಾ, 7 ಕೆ.ಜಿ ಅಫೀಮು, 225 ಗ್ರಾಂ ಮೆಫೆಡ್ರೋನ್, 6 ಮೊಬೈಲ್ ಪೋನ್, 1 ಕಾರು, 1 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. 
ಬಟ್ಟೆ ಬಂಡಲ್‌ನಲ್ಲಿ ಡ್ರಗ್ಸ್:
ಪ್ರಯಾಣಿಕರ ಹಾಗೂ ವ್ಯಾಪಾರಿಗಳ ಸೋಗಿನಲ್ಲಿ ದೆಹಲಿ, ರಾಜಸ್ಥಾನ, ಒಡಿಶಾ ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿದ್ದ ಪೆಡ್ಲರ್ಸ್‌ಗಳು ಬಟ್ಟೆಗಳ ಮೂಟೆಯಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದರು.  ವಾರದ ಹಿಂದೆ 10 ಕೆಜಿ ಡ್ರಗ್ಸ್ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ತನಿಖೆ ವೇಳೆ ದೆಹಲಿಯಿಂದ ಬೆಂಗಳೂರು ನಗರಕ್ಕೆ ಡ್ರಗ್ಸ್ ಸಾಗಣೆಯಾಗುತ್ತಿರುವುದನ್ನು ಪತ್ತೆ ಮಾಡಿತ್ತು. ಪಡ್ಲರ್ಸ್‌ಗಳ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ್ದ ಅಧಿಕಾರಿಗಳು ದೆಹಲಿ ಸೇರಿ ವಿವಿಧ ರಾಜ್ಯಗಳ ಆರೋಪಿಗಳು ಪಾಲ್ಗೊಂಡಿರುವುದನ್ನು ಪತ್ತೆ ಮಾಡಿದೆ. 
ದೇಶ, ವಿದೇಶಗಳಿಂದ ದೆಹಲಿ ಮೂಲಕ ವಿವಿಧ ರಾಜ್ಯಗಳಿಂದ ಬರುತ್ತಿರುವ ಡ್ರಗ್ಸ್ ದೆಹಲಿ ಮೂಲಕ ಬೆಂಗಳೂರು ನಗರಕ್ಕೆ ತಲುಪುತ್ತಿದೆ. ಅಲ್ಲದೇ ಬಸ್ ಮೂಲಕ ಮಾದಕ ವಸ್ತು ಸಾಗಣೆಯಾಗುತ್ತಿರುವುದರ ಬಗ್ಗೆ ವಿಶೇಷ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಬಂಧಿತರಿಂದ ಹಲವು ಮಾಹಿತಿಗಳು ಲಭ್ಯವಾಗಿದ್ದು, ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net