_1772277562420.webp?w=480&auto=format%2Ccompress&fit=max)
_1772277562420.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ವಿಜಯಪುರ: ಮಾದಕ ವಸ್ತುಗಳು ಯುವಶಕ್ತಿಯ ಚೈತನ್ಯ ಕಸಿಯುತ್ತಿವೆ. ಅಂತಹ ದುಶ್ಚಟಗಳಿಂದ ಯುವಜನರನ್ನು ಉಳಿಸಲು ಚಳವಳಿ ರೂಪದ ಪ್ರಯತ್ನಗಳು ನಡೆಯಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ದುಶ್ಚಟಗಳ ಅಡ್ಡಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಅವರು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದು, ಇಂತಹ ಪ್ರಯತ್ನಗಳಿಂದ ವಿದ್ಯಾರ್ಥಿಗಳಲ್ಲಿ ಶಿಸ್ತಿನ ವಾತಾವರಣ ಮೂಡುತ್ತದೆ. ಅವರ ಈ ಪ್ರಯತ್ನ ಅಭಿನಂದನಾರ್ಹ ಎಂದರು. ಅಂಗಾಂಗ ದಾನದ ಮಹತ್ವದ ಬಗ್ಗೆ ಮಾತನಾಡಿದ ಯತ್ನಾಳ, ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಒಬ್ಬ ವ್ಯಕ್ತಿ ಎಂಟು ಜನರಿಗೆ ಮರುಜೀವ ನೀಡಬಹುದು. ಈ ಬಗ್ಗೆ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲೇ ಆಲೋಚಿಸಿ ಮರಣಾನಂತರದ ಅಂಗಾಂಗ ದಾನದ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಇದು ಕೇವಲ ಒಂದು ಅಭಿಯಾನವಲ್ಲ, ಯುವ ಸಮುದಾಯಕ್ಕೆ ಮಾದರಿ ಪಥವನ್ನು ತೋರಿಸುವ ಮಹಾನ್ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ರಾಜೀವ್ ಗಾಂಧಿ ವಿವಿಯ ಈ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಬಾಲ ವಿಕಾಸ ಅಕಾಡೆಮಿಯಿಂದ ಈ ಅಭಿಯಾನಕ್ಕೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ಘೋಷಿಸಿದರು.