ಬರ ಘೋಷಣೆ ಅವೈಜ್ಞಾನಿಕ-ಅಸಮರ್ಪಕ, ಬಿಜೆಪಿ ರೈತ ಮೋರ್ಚಾದಿಂದ ‘ಗ್ರಾಮ ಚಲೋ’ ಹೋರಾಟಕ್ಕೆ ಸಿದ್ಧ ಎಂದ ನಡಹಳ್ಳಿ

ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ ಇದ್ದಾರೆ.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ
  • ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ
  • ತ್ವರಿತ ಪರಿಹಾರಕ್ಕಾಗಿ ಬಿಜೆಪಿ ಆಗ್ರಹ
  • ಸಂಪೂರ್ಣ ಕರ್ನಾಟಕ ಬರಪೀಡಿತ ಘೋಷಣೆಗೆ ಒತ್ತಾಯ

ವಿಜಯಪುರ: ರಾಜ್ಯದ 239 ತಾಲೂಕುಗಳಲ್ಲಿಯೂ ಬರ ಇದೆ ಎಂದು ಒಪ್ಪಿಕೊಂಡ ಸರ್ಕಾರವೇ ಕೇವಲ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಖೇದಕರ. ಸ್ವತಃ ಕಂದಾಯ ಸಚಿವರೇ ರಾಜ್ಯದಲ್ಲಿ ಶೇ. 30 ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳಿದ್ದಾರೆ. ಅಂಥದರಲ್ಲಿ ಕಾಟಾಚಾರಕ್ಕೆ, ಯಾವುದೇ ಮಾನದಂಡವಿಲ್ಲದೇ, ಬೇಕಾಬಿಟ್ಟಿಯಾಗಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸದೇ ಬರ ಘೋಷಣೆ ಮಾಡಿರುವುದು ಖಂಡನೀಯ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಇಡೀ ರಾಜ್ಯದಲ್ಲಿ ಸುಮಾರು 90 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 84.4 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೇವಾಂಶದ ಕೊರತೆಯಿಂದ ಬೆಳೆ ಹಾನಿಯಾಗುವ ಹಂತದಲ್ಲಿದೆ ಎಂದು ಕಂದಾಯ ಸಚಿವರೇ ಹೇಳಿದ್ದಾರೆ. ಒಟ್ಟು ಬಿತ್ತನೆ ಪ್ರದೇಶ 1.20 ಕೋಟಿ ಹೆಕ್ಟರ್ ಪೈಕಿ ಮುಂಗಾರಿಗೆ 90 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. ಆಶ್ಚರ್ಯ ಎಂದರೆ ಉತ್ತರ ಕರ್ನಾಟಕದ 91 ತಾಲೂಕು ಬರ ಎದುರಿಸುತ್ತಿದ್ದರೆ ಕೇವಲ 22 ತಾಲೂಕುಗಳಲ್ಲಿ ಬರ ಘೋಷಿಸಲಾಗಿದೆ. ಕಲಬುರಗಿ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಬರ ಘೋಷಣೆ ಮಾಡಿಲ್ಲ. ಮಂಡ್ಯ, ತುಮಕೂರ, ಚಾಮರಾಜ ನಗರ, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಬಹುತೇಕ ಘೋಷಣೆಯಾಗಿದೆ. ಇದು ಯಾವ ಮಾನದಂಡ ? ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಬರ ಘೋಷಣೆ ವಿಚಾರದಲ್ಲಿ ಮಂತ್ರಿಗಳಿರುವ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ರಾಜೀನಾಮೆ ಕೊಡುತ್ತೇನೆ ಎನ್ನುವವರು, ಸಿಎಂ, ಉಸ್ತುವಾರಿ ಸಚಿವರನ್ನು ಭೇಟಿಯಾಗದೇ ಇರುವ ಶಾಸಕರ ಕ್ಷೇತ್ರ ಕೈ ಬಿಡಲಾಗಿದೆ. ಅವರು ಬಂದು ಭೇಟಿ ಮಾಡಲಿ ಎಂಬ ಕಾರಣಕ್ಕಾಗಿಯೋ ಏನೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ

ನಾವಿಂದು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ನೀಡದೇ ಕೇಂದ್ರ ಸರ್ಕಾರ ಬರ ಘೋಷಿಸಲು ಆಗಲ್ಲ. ಮೊದಲು ರಾಜ್ಯ ಸರ್ಕಾರ ತನ್ನ ಪಾತ್ರ ನಿಭಾಯಿಸಲಿ. ಬಳಿಕ ಕೇಂದ್ರ ಸರ್ಕಾರ ಪರಿಹಾರ ಕೊಡಲಿದೆ. ಅದಕ್ಕೆ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ. ಇದರಲ್ಲಿ ರಾಜಕೀಯ ಮಾಡಲು ನಾವು ತಯಾರಿಲ್ಲ. ಅದಕ್ಕೂ ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಲಿ. ಬಳಿಕ ಕೇಂದ್ರ ಸರ್ಕಾರ ತಂಡ ಕಳುಹಿಸಿ ಪರಿಶೀಲನೆ ನಡೆಸಿ ಪರಿಹಾರ ನೀಡಲಿದೆ. ಈ ವರ್ಷವೇ ಪರಿಹಾರ ಬಿಡುಗಡೆ ಮಾಡಲಿದೆ. ಆದರೆ, ರಾಜ್ಯ ಸರ್ಕಾರ ತಯಾರಿಸಿದ ವರದಿಯೇ ಅವೈಜ್ಞಾನಿಕವಾಗಿದೆ ಎಂದರು.
ಮಾತೆತ್ತಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋದು ನಿಲ್ಲಿಸಿ. ಮಾನದಂಡ ಬದಲಾವಣೆ ಮಾಡಲಿ ಎನ್ನುವುದನ್ನು ಬಿಡಿ. ಮೊದಲು ನಿಮ್ಮ ಜವಾಬ್ದಾರಿ ಏನೆಂಬುದನ್ನು ಸಾಬೀತುಪಡಿಸಿ. ಈ ಹಿಂದೆ ಬಿಎಸ್‌ವೈ ಸಿಎಂ ಆಗಿದ್ದಾಗ ಕೇಂದ್ರದ ತಂಡ ಬರಲಿ ಎಂದು ಕಾಯುತ್ತಾ ಕೂರಲಿಲ್ಲ. 20 ಸಾವಿರ ಕೋಟಿ ತಕ್ಷಣಕ್ಕೆ ಪರಿಹಾರ ಬಿಡುಗಡೆಗೊಳಿಸಲಾಯಿತು. ಸುಮಾರು 19 ಲಕ್ಷ ಹೆಕ್ಟರ್ ಪ್ರದೇಶದ ಬೆಳೆ ಹಾನಿಗೆ ಕೇಂದ್ರದ ಹಣದ ಜೊತೆಗೆ 10 ಸೇರಿಸಿ 30 ದಿನದಲ್ಲಿ ಪರಿಹಾರ ನೀಡಲಾಯಿತು. ಈ ಸರ್ಕಾರ ಬಂದ ಮೇಲೆ ನಿಯಮಾವಳಿ ಬದಲಾವಣೆ ಮಾಡಿ ಎನ್ನುವುದನ್ನು ರೂಢಿಸಿಕೊಂಡಿದೆ. ಯುಪಿಎ ಸರ್ಕಾರ ಇದ್ದಾಗ ಗರಿಷ್ಠ ಪರಿಹಾರ 4800 ರೂಪಾಯಿ ಪ್ರತಿ ಎಕರೆಗೆ ನೀಡಲಾಗಿತ್ತು. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಕಾರಕ್ಕೆ ಬಂದ ಮೇಲೆ ಸಕಾಲಕ್ಕೆ ಸಮರ್ಪಕವಾಗಿ ಪರಿಹಾರ ನೀಡಿದೆ. ಸಂಸತ್ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ನೀಡಿದ 4047 ಕೋಟಿ ಪರಿಹಾರ ಮೊತ್ತದಲ್ಲಿ 3454 ಕೋಟಿ ರೂಪಾಯಿ ಕೇಂದ್ರದ ಪಾಲು ಆಗಿತ್ತು. ಕೇವಲ 500ಕ್ಕೂ ಅಧಿಕ ಕೋಟಿ ಮಾತ್ರ ರಾಜ್ಯ ಸರ್ಕಾರ ಕೊಟ್ಟಿತ್ತು. ಆದರೆ ಯಡಿಯೂರಪ್ಪ ಅವರು 2019ರಲ್ಲಿ 20 ಸಾವಿರ ಕೋಟಿ ಪರಿಹಾರವನ್ನು ರಾಜಸ್ವ ಖಾತೆಯಿಂದ ಕೊಟ್ಟಿದ್ದರು ಎಂದು ನಡಹಳ್ಳಿ ತಿಳಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬರ

2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ದೊಡ್ಡ ಮಟ್ಟದಲ್ಲಿ ಬರ ಬಂತು. ಈ ಬಾರಿಯೂ ಬರ ಬಂದಿದೆ. ಆಗ 195 ತಾಲೂಕು ಬರ ಎಂದು ಘೋಷಿಸಲಾಗಿತ್ತು. ಆ ಸಂದರ್ಭದಲ್ಲಿ ಏಕಕಾಲಕ್ಕೆ ಘೋಷಣೆ ಮಾಡಲಾಗಿತ್ತು. ಆಗಲೂ ಇದೇ ಮಾನದಂಡ ಇದ್ದವು. ಆದರೆ ಈ ಬಾರಿ ನಿಷ್ಕಾಳಜಿ ಬೇಜವಾಬ್ದಾರಿಯಿಂದ ಮಾಹಿತಿ ಸಂಗ್ರಹಿಸದೇ ಬೇಕಾಬಿಟ್ಟಿಯಾಗಿ ಮಾನದಂಡ ಸರಿಯಾಗಿ ಪರಿಗಣಿಸದೇ 101 ತಾಲೂಕು ಬರ ಘೋಷಿಸಲಾಗಿದೆ ಎಂದರು.
2023ರಲ್ಲಿ ಇದೇ ಸರ್ಕಾರ 195 ತಾಲೂಕುಗಳನ್ನು ಘೋಷಣೆ ಮಾಡಿತ್ತು. ಆಗಲೂ ಇದೇ ನಿಯಮಾವಳಿಗಳು ಇದ್ದವಲ್ಲವೇ? ಸರ್ಕಾರ ಸಂಪೂರ್ಣವಾಗಿ ಬರಗಾಲ ತಾಲೂಕು ಗುರುತಿಸುವಲ್ಲಿ ವಿಫಲವಾಗಿದೆ. ಸಮೀಕ್ಷೆ ಅಸಮರ್ಪಕವಾಗಿದೆ. ಪೂರ್ವ ತಯಾರಿಯೂ ಇಲ್ಲ. ಬರ ಆರಂಭವಾಗಿ ಆಗಲೇ ಮೂರು ತಿಂಗಳಾಯಿತು. ಇಡೀ ರಾಜ್ಯದಲಿ ಸಿಎಂ ಒಂದು ವಿಡಿಯೋ ಸಂವಾದ ಮಾಡಿದ್ದು ಬಿಟ್ಟರೆ ಕಾಟಾಚಾರಕ್ಕ ಉಸ್ತುವಾರಿಗಳು ಒಂದು ಗ್ರಾಮಕ್ಕೆ ಹೋಗಿದ್ದು ಬಿಟ್ಟರೆ ಬರಕ್ಕೆ ಸಂಬಂಧಿಸಿದ ಒಂದೇ ಒಂದು ಸಭೆ ನಡೆಸಿಲ್ಲ. ಸಕಾಲಕ್ಕೆ ಕೆಡಿಪಿ ಸಭೆಗಳಾಗಿಲ್ಲ. ಜನರಿಗೆ ಭರವಸೆ ಕೊಡುವ ಕೆಲಸ ಮಾಡಿಲ್ಲ. ಘೋಷಿತ 101 ಬರಪೀಡಿತ ತಾಲೂಕುಗಳಲ್ಲಿಯೂ ಪೂರ್ವ ತಯಾರಿ ನಡೆಸಿಲ್ಲ. ಈಗಾಗಲೇ ರೈತರು ಮುಂಗಾರಿ ಬರಲ್ಲ ಎಂದು ಗೊತ್ತಾದ ತಕ್ಷಣ ಬೆಳೆ ತೆಗೆದಿದ್ದಾರೆ. ಶೇ.90 ರಷ್ಟು ಬೆಳೆ ತೆಗೆದು ಹಾಕಿದ್ದಾರೆ. ಇಂಥ ಸ್ಥಿತಿಯಲ್ಲಿ ಯಾವ ರೀತಿ ಬೆಳೆ ಸಮೀಕ್ಷೆ ಮಾಡುತ್ತೀರಿ. ಸರ್ಕಾರ ಬರುತ್ತದೆಂದು ಕಾಯ್ದುಕೊಂಡು ಕೂರಲಾಗುತ್ತದಾ? ಎಂದು ಪ್ರಶ್ನಿಸಿದರು.

ತಕ್ಷಣಕ್ಕೆ ಪರಿಹಾರ ಒದಗಿಸಿ

ರಾಜ್ಯ ಸರ್ಕಾರ ಕೇಂದ್ರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ತಕ್ಷಣಕ್ಕೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಹಣ ತಕ್ಷಣಕ್ಕೆ ಪಾವತಿಸಬೇಕು. ರಾಜ್ಯದ ಬಜೆಟ್ ಗಾತ್ರಕ್ಕೆ ಅನುಗುಣವಾಗಿ ತಕ್ಷಣಕ್ಕೆ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಕೊಡಬೇಕು. ರಾಜ್ಯ ಸರ್ಕಾರದ ಬಜೆಟ್ ಗಾತ್ರ ಸುಮಾರು 4.44 ಲಕ್ಷ ಕೋಟಿ ಇದೆ. ಕೇಂದ್ರ ಸರ್ಕಾರದ ಅನುದಾನ ಸೇರಿ 50 ಸಾವಿರ ಪರಿಹಾರ ಕೊಡಬೇಕು. ತಕ್ಷಣಕ್ಕೆ ತನ್ನ 25 ಸಾವಿರ ಪರಿಹಾರ ಖಾತೆಗೆ ಜಮಾ ಮಾಡಬೇಕು. ಇದರಿಂದ ಹಿಂಗಾರಿಗಾದರೂ ಅನುಕೂಲವಾಗಲಿದೆ ಎಂದು ಆಗ್ರಹಿಸಿದ ನಡಹಳ್ಳಿ ಅವರು, ಪರಿಹಾರಕ್ಕಾಗಿ ರೈತ ಮೋರ್ಚಾದಿಂದ ಗ್ರಾಮ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಸ್ವಪ್ನಾ ಕಣಮುಚನಾಳ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net