ಸ್ಲೀಪರ್​ ಬಸ್​ ಓವರ್​ಟೇಕ್​ ಮಾಡಿದ್ದೇ... ತಪ್ಪಿದ ಮತ್ತೊಂದು ದುರಂತ, ಘಟನೆ ವಿವರಿಸಿದ ಸ್ಕೂಲ್​ ಬಸ್​ ಚಾಲಕ

ಘಟನೆ ವಿವರಿಸಿದ ಸ್ಕೂಲ್ ಬಸ್​ ಚಾಲಕ ಸಚಿನ್​
ಘಟನೆ ವಿವರಿಸಿದ ಸ್ಕೂಲ್ ಬಸ್​ ಚಾಲಕ ಸಚಿನ್​
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಬಸ್​-ಲಾರಿ ಅಪಘಾತ
  • ಚಿತ್ರದುರ್ಗದ ಹಿರಿಯೂರಿನ ಗೊರ್ಲತ್ತು ಕ್ರಾಸ್​ ಬಳಿ ಅಪಘಾತ
  • ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಬೆಂಕಿಗೆ ಆಹುತಿ
  • ದುರಂತದಲ್ಲಿ 5ಕ್ಕೂ ಹೆಚ್ಚು ಮಂದಿ ಸಜೀವ ದಹನ
ಚಿತ್ರದುರ್ಗ: ಇಂದು (ಡಿ.25) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತದಲ್ಲಿ ಸುಮಾರು 5 ಪ್ರಯಾಣಿಕರು ಸಜೀವ ದಹನವಾಗಿದ್ದರೆ ಎಂಬ ಮಾಹಿತಿ ಲಭಿಸಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿ ಎಚ್​ಪಿ ಪೆಟ್ರೋಲ್ ಬಂಕ್ ಬಳಿ ದುರಂತ ಸಂಭವಿಸಿದ್ದು, ಲಾರಿ ಗುದ್ದಿದ ರಭಸಕ್ಕೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು, ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಡಿವೈಡರ್​ ಹಾರಿ ಎದುರಿನಿಂದ ಬರುತ್ತಿದ್ದ ಬಸ್​ಗೆ ಲಾರಿ ಡಿಕ್ಕಿ ಹೊಡೆದ ಕೂಡಲೇ ಬಸ್ಸಿನಲ್ಲಿ ಬೆಂಕಿ ಸ್ಫೋಟಿಸಿದೆ. ಅಪಫಾತದಲ್ಲಿ ಲಾರಿ ಚಾಲಕ ಉತ್ತರ ಪ್ರದೇಶ ಮೂಲದ ಕುಲದೀಪ್​ ಸಾವಿಗೀಡಾಗಿದ್ದು, ಬಸ್​ ಡ್ರೈವರ್​ ರಫೀಕ್​ ಮತ್ತು ನಿರ್ವಾಹಕ ಪವಾಡದಂತೆ ಪಾರಾಗಿದ್ದಾರೆ.

ಸಂಪೂರ್ಣ ಸುಟ್ಟು ಕರಕಲಾದ ಬಸ್​, 5 ಮೃತದೇಹಗಳು ಹೊರಗೆ

ಇಲ್ಲಿಯವರೆಗೆ ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರಲ್ಲಿ ಲಾರಿ ಚಾಲಕನ ಪತ್ತೆ ದೃಢವಾಗಿದೆ ಎಂದು ವರದಿಯಾಗಿದೆ. ಬಸ್​ ಪ್ರಯಾಣಿಕರ ಪೈಕಿ ಇನ್ನೂ ಹಲವರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ, ಸಿಕ್ಕಿರುವ ದೇಹಗಳ ಡಿಎನ್​ಎ ನಡೆಸಿ, ಸಾವಿಗೀಡಾದವರ ಗುರುತು ಪತ್ತೆಹಚ್ಚುವ ಕೆಲಸಗಳು ನಡೆಯುತ್ತಿವೆ. 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಯಾನಕ ಅನುಭವ ಬಿಚ್ಚಿಟ್ಟ ಮಕ್ಕಳಿದ್ದ ಬಸ್​ ಚಾಲಕ

ಇನ್ನು ಈ ಅಪಘಾತ ಹೇಗಾಯಿತು? ಎಂಬ ಭಯಾನಕ ಅನುಭವ ಬಿಚ್ಚಿಟ್ಟ ಅದೇ ರಸ್ತೆಯಲ್ಲಿ 42 ಮಕ್ಕಳನ್ನು ದಾಂಡೇಲಿ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್​ ಚಾಲಕ ಸಚಿನ್​, "ನಾವು ಸ್ಕೂಲ್​ ಟ್ರಿಪ್​ ಹೋಗ್ತಿದ್ವಿ. ನಮ್ಮ ಬಸ್​ ಅನ್ನು ಸ್ಲೀಪರ್​ ಕೋಚ್​ ಬಸ್​ ಓವರ್​ಟೇಕ್ ಮಾಡಿತು. ಇದೇ ವೇಳೆಗೆ ಎದುರಿನಿಂದ ಬರುತ್ತಿದ್ದ ಲಾರಿ ಚಾಲಕ, ಡಿವೈಡರ್​ ಹಾರಿಸಿ, ನೇರವಾಗಿ ಬಸ್​ಗೆ ಗುದ್ದಿದ. ಡೀಸೆಲ್​ ಟ್ಯಾಂಕ್​ಗೆ ಡಿಕ್ಕಿಯಾದ ಕಾರಣದಿಂದ ಬಸ್ಸಿನಲ್ಲಿ ಬೆಂಕಿ ಸ್ಫೋಟಿಸಿತು" ಎಂದಿದ್ದಾರೆ.

ಲಾರಿ ಚಾಲಕನದ್ದೇ ತಪ್ಪು!

"ಲಾರಿ ಗುದ್ದಿದ ಕೂಡಲೇ ಸ್ಲೀಪರ್​ ಕೋಚ್​ ಬಸ್​ ನಮ್ಮ ಬಸ್ಸಿಗೂ ಡಿಕ್ಕಿಯಾಯಿತು. ಗ್ಲಾಸ್​ ಹೊಡೆದ ಕಾರಣ, ನನ್ನೊಬ್ಬನಿಗೆ ಸಣ್ಣ-ಪುಟ್ಟ ಗಾಯಾಗಳು ಆಗಿವೆ. ಮಕ್ಕಳಲ್ಲಿ ಯಾರೊಬ್ಬರಿಗೂ ತೊಂದರೆ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆ ನಂತರ ಇನ್ನೊಂದು ಬಸ್​ ಮಾಡಿ, ಅಲ್ಲಿಂದ ಮಕ್ಕಳನ್ನು ಕಳುಹಿಸಿದೆವು" ಎಂದು ಸಚಿನ್ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net