ಆರೋಗ್ಯ ಉಪ ಕೇಂದ್ರ ಕಾಮಗಾರಿಗೆ ಕುಡಿವ ನೀರು ಬಳಕೆ

ಮಂಗಲ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಉಪ ಕೇಂದ್ರ ಕಟ್ಟಡ ಕಾಮಗಾರಿಗೆ ನೀರಿನ ಸಂಪರ್ಕ ಕಲ್ಪಿಸಿರುವುದು.
ಮಂಗಲ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಉಪ ಕೇಂದ್ರ ಕಟ್ಟಡ ಕಾಮಗಾರಿಗೆ ನೀರಿನ ಸಂಪರ್ಕ ಕಲ್ಪಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನೆಲ್ಲೆಡೆ ಜನರು ಕುಡಿಯುವ ನೀರಿಗೆ ಪರದಾಟ
  • ಮಂಗಲ ಗ್ರಾಮದಲ್ಲಿ ತೊಂಬೆಗಳಿಗೆ ಪೂರೈಕೆಯಾಗುವ ನೀರು

ಹನೂರು:

ತಾಲೂಕಿನೆಲ್ಲೆಡೆ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದು, ಇತ್ತ ಮಂಗಲ ಗ್ರಾಮದಲ್ಲಿ ತೊಂಬೆಗಳಿಗೆ ಪೂರೈಕೆಯಾಗುವ ನೀರು ಆರೋಗ್ಯ ಉಪ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ದುರ್ಬಳಕೆಯಾಗುತ್ತಿದೆ ಎಂದು ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ 1,439 ಕುಟುಂಗಳಿದ್ದು, 4,258 ಜನಸಂಖ್ಯೆ ಇದೆ. ಆದರೆ ಇಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲ. ಇದರಿಂದ ಇಲ್ಲಿನ ಜನರು ಸಾಮಾನ್ಯ ಚಿಕಿತ್ಸೆಗಾಗಿ ಕಾಮಗೆರೆ ಹಾಗೂ ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತುರ್ತು ಚಿಕಿತ್ಸೆಗಾಗಿ ಕಾಮಗೆರೆ ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ. ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಸ್ಥಾಪನೆಯಾಗಬೇಕು ಎನ್ನುವುದು ಗ್ರಾಮಸ್ಥರು ಹಲವು ವರ್ಷಗಳ ಬೇಡಿಕೆ. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆರೋಗ್ಯ ಉಪ ಕೇಂದ್ರ ಮಂಜೂರಾಗಿದ್ದು, ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ ಜನರ ಕುಡಿಯುವ ನೀರನ್ನು ಕಟ್ಟಡ ಕಾಮಗಾರಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ?. ಇದರಿಂದ ಕೆಲವು ತೊಂಬೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಉಪ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವುದು ಅದರ ಜವಾಬ್ದಾರಿ ಹೊತ್ತ ಸಂಬಂಧಪಟ್ಟವರದ್ದಾಗಿದೆ. ಆದರೆ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜಾರೋಷವಾಗಿ ತೊಂಬೆಗಳಿಗೆ ನೀರು ಪೂರೈಕೆಯಾಗುವ ಪೈಪ್‌ಗೆ ಗ್ರಾಪಂ ಕಟ್ಟಡಕ್ಕೆ ಹೊಂದಿಕೊಂಡಂತೆ ನಲ್ಲಿಯನ್ನು ಅಳವಡಿಸುವ ಮೂಲಕ ಕಟ್ಟಡ ನಿರ್ಮಾಣದ ಕಾಮಗಾರಿಗೆ ನೀರು ಒದಗಿಸಿಕೊಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ತೊಂಬೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿರುವ ಪರಿಣಾಮ ತಾಲೂಕಿನ 25 ಗ್ರಾಪಂಗಳ ಪೈಕಿ ಸದ್ಯದ ಮಟ್ಟಿಗೆ ಮಂಗಲ, ಕಣ್ಣೂರು ಗ್ರಾಮವನ್ನು ಹೊರತುಪಡಿಸಿದರೆ ಉಳಿದೆಲ್ಲ ಗ್ರಾಪಂ ವ್ಯಾಪ್ತಿಯ 56 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ನಡುವೆ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಟಾಸ್‌‌ಕೆೆರ್ಸ್ ಸಮಿತಿ ಸಭೆಯಲ್ಲಿ ಚರ್ಚೆಯೂ ನಡೆದಿದ್ದು, ಪರ್ಯಾಯ ವ್ಯವಸ್ಥೆಯ ಮೂಲಕ ನೀರೊದಗಿಸುವಂತೆ ಸೂಚಿಸಿದ್ದಾರೆ.

ಬೋರ್ ಕೊರೆಸುವುದು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಿರುವಾಗ ಮಂಗಲ ಗ್ರಾಮದಲ್ಲಿ ಜನರ ಕುಡಿಯುವ ನೀರು ಕಟ್ಟಡ ಕಾಮಗಾರಿಗೆ ದುರ್ಬಳಕೆಯಾಗುತ್ತಿದೆ. ಸಂಪರ್ಕ ಕಲ್ಪಿಸಿರುವ ನೀರಿನ ಪೂರೈಕೆಯನ್ನು ಕೂಡಲೇ ಸ್ಥಗಿತಗೊಳಿಸಿ ತೊಂಬೆಗಳಿಗೆ ಪೂರೈಕೆ ಮಾಡಬೇಕು. ಈ ಕಾರ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.
ತೊಂಬೆಗಳಿಗೆ ಪೂರೈಕೆಯಾಗುವ ಕುಡಿಯುವ ನೀರನ್ನು ಮಂಗಲ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರದ ಕಟ್ಟಡ ಕಾಮಗಾರಿಗೆ ನೀಡುತ್ತಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು.
ಉಮೇಶ್, ಇಒ ತಾಲೂಕು ಪಂಚಾಯಿತಿ ಹನೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net