ಸಿಂಧನೂರು: ಕುಡಿವ ನೀರು ಪೂರೈಕೆಗೆ ಆಸರೆಯಾಗಿದ್ದ ಕೆರೆ ಬತ್ತಿರುವುದರಿಂದ ಗಣೇಶನಗರ ಕ್ಯಾಂಪಿನಲ್ಲಿ ಪರ್ಯಾಯ ಜಲಮೂಲವಿಲ್ಲದೆ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.
ಜನರು ಸುಮಾರು ಮೂರ‌್ನಾಲ್ಕು ಕಿಮೀ ದೂರ ತೆರಳಿ ನೀರು ತರುವ ಸನ್ನಿವೇಶ ನಿರ್ಮಾಣವಾಗಿದೆ. ಕಳೆದ ವರ್ಷದಂತೆ ನೀರಿನ ಸಮಸ್ಯೆ ತಲೆದೋರಿದೆ. ಸಮರ್ಪಕ ನೀರು ಪೂರೈಸುವಂತೆ ಗ್ರಾಪಂ ಆಡಳಿತ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಜನರ ಜತೆಗೆ ಜಾನುವಾರುಗಳಿಗೂ ಬಿಸಿ ತಟ್ಟತೊಡಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿವ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಬೇಕೆಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಗೋಪಿ, ನಿವಾಸಿಗಳಾದ ಶ್ರೀನಿವಾಸ, ಕೃಷ್ಣ, ಗೋವಿಂದ, ಶ್ರೀರಾಮ, ಶೇಖರ, ಶಿವಾಜಿ ಒತ್ತಾಯಿಸಿದ್ದಾರೆ.
ಗಣೇಶನಗರ ಕ್ಯಾಂಪಿನಲ್ಲಿ ಕುಡಿವ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿಲ್ಲ. ಪಿಡಿಒಗೆ ಹೇಳಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಪರಿಶೀಲಿಸುವೆ.
— ಪ್ರಕಾಶ ಎಇಇ, ಗ್ರಾಮೀಣ ಕುಡಿವ ನೀರು-ನೈರ್ಮಲ್ಯ ಇಲಾಖೆ, ಉಪವಿಭಾಗ, ಸಿಂಧನೂರು
ಗಣೇಶನಗರ ಕ್ಯಾಂಪ್ ನಿವಾಸಿಗಳಿಗೆ ಕುಡಿಯಲು, ದಿನ ಬಳಕೆಗೆ ನೀರು ಇಲ್ಲ ಎಂದು ಗಮನಕ್ಕೆ ತಂದಿದ್ದಾರೆ. ಅಲ್ಲಿನ ಕೆರೆ ಖಾಲಿಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ನೀರನ್ನು ಒದಗಿಸಲಾಗುವುದು.