ನವದೆಹಲಿಯಲ್ಲಿ ಬುಧವಾರ (ಮೇ 27ರಂದು) ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಅತಿ ಹಿಂದುಳಿದ ಮಠಾಧೀಶರು ಭೇಟಿ ಮಾಡಿ 2019ರಲ್ಲಿ ತಿಪ್ಪಣ್ಣಪ್ಪ ಕಮಕನೂರು ಒಂದು ವರ್ಷದ ಅವಧಿಗೆ ಮಾತ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಂತರ 2023ರಲ್ಲಿ ಮೂರು ವರ್ಷದ ಅವಧಿಗೆ ವಿಧಾನ ಪರಿಷತ್ ಸದಸ್ಯರಿದ್ದರು. ಅವರ ಅವಧಿ ಇದೇ ಜೂನ್ 30ಕ್ಕೆ ಪೂರ್ಣಗೊಳ್ಳಲಿದೆ. ಕಮಕನೂರು ಗಂಗಾಮತಸ್ಥರಾದರೂಹಿಂದುಳಿದ ಸಮಾಜದವರ ಆರ್ಥಿಕ ಸಾಮಾಜಿಕ,ಶೈಕ್ಷಣಿಕ, ಮತ್ತು ಧಾರ್ಮಿಕ ಅಭಿವೃದ್ಧಿಗಾಗಿ ಶ್ರಮಿಸಿದ ಒಬ್ಬ ನಿಷ್ಠಾವಂತ ನಾಯಕರು. ಅನೇಕ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ತಿನಲ್ಲಿ ಸಮರ್ಥವಾಗಿ ಗಮನಸೆಳೆದು ಪರಿಹಾರಕ್ಕೆ ಪ್ರಯತ್ನಿಸಿ, ಅಭಿವೃದ್ಧಿಗೆ ಶ್ರಮಿಸಿದವರು. ಹಿಂದುಳಿದವರ ಮತ ಕ್ರೋಢೀಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದವರು ಎಂದು ನಿಯೋಗವು ಖರ್ಗೆಯವರಿಗೆ ಮನವರಿಕೆ ಮಾಡಿದೆ.ಕಮಕನೂರ ಅವರನ್ನು ಪೂರ್ಣಾವಧಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮರು ಆಯ್ಕೆ ಮಾಡಬೇಕೆಂದು ನವದೆಹಲಿಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೂ ಕೂಡಾ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಸ್ವಾಮೀಜಿ,ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ರಾಜ್ಯ ಉಪಾಧ್ಯಕ್ಷರಾದ ಕುಂಬಾರ ಸಮಾಜದ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲಂಬಾಣಿ ಸಮಾಜದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ರಾಜ್ಯ ಉಪಾಧ್ಯಕ್ಷರಾದ ಮಾದರ ಚೆನ್ನಯ್ಯ ಸಮಾಜದ ಮಹಾಂತ ಮಹಾಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.