ಸಾಹಿತ್ಯ ಪರಿಷತ್ತಿಗೂ ಆವರಿಸಿದ ಮೂಲಭೂತವಾದಿತನ: ಡಾ.ಎಲ್. ಹನುಮಂತಯ್ಯ ಬೇಸರ

ಜಾಣಗೆರೆ ವೆಂಕಟರಾಮಯ್ಯ-75 ಅಭಿನಂದನಾ ಸಮಾರಂಭ
ಜಾಣಗೆರೆ ವೆಂಕಟರಾಮಯ್ಯ-75 ಅಭಿನಂದನಾ ಸಮಾರಂಭ
Published on

ಪ್ರಮುಖ ಮುಖ್ಯಾಂಶಗಳು

  • ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ-75 ಅಭಿನಂದನಾ ಸಮಾರಂಭ
  • ಕನ್ನಡದ ಹೋರಾಟವು ಯಾವತ್ತೂ ಮೂಲಭೂತವಾದಿಗಳ ಹೋರಾಟವಾಗಿಲ್ಲ. ಇಂದು ಅಧಿಕಾರಕ್ಕಾಗಿ ಮೂಲಭೂತವಾದಿಗಳತ್ತ ವಾಲುತ್ತಿದೆ
  • ಕುವೆಂಪು ಕನ್ನಡ ಚಳವಳಿಯ ಕಲ್ಪನೆ ‘ಸರ್ವಂ ಕನ್ನಡಮಯ’ವಾಗಬೇಕು ನಿಜ. ಆದರೆ, ಮೂಲಭೂತಿಯಾಗಬಾರದು, ಅವೈಜ್ಞಾನಿಕ- ಅವೈಚಾರಿಕವಾಗಿರಬಾರದು
ಬೆಂಗಳೂರು:

ಕನ್ನಡ ಹೋರಾಟಗಾರರನ್ನು ಧರ್ಮದ ಜತೆ ಬೆರೆಸಿ ಮೂಲಭೂತವಾದಿಯಂತೆ ನೋಡುವುದು ಮಾತ್ರವಲ್ಲದೆ, ಆ ಭಾವವು ಕನ್ನಡ ಸಾಹಿತ್ಯ ಪರಿಷತ್ತಿಗೂ ಆವರಿಸುವಂತೆ ಮಾಡಿರುವುದು ಆಘಾತಕಾರಿ ಸಂಗತಿ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ-75 ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕನ್ನಡದ ಹೋರಾಟವು ಯಾವತ್ತೂ ಮೂಲಭೂತವಾದಿಗಳ ಹೋರಾಟವಾಗಿಲ್ಲ. ಇಂದು ಅಧಿಕಾರಕ್ಕಾಗಿ ಮೂಲಭೂತವಾದಿಗಳತ್ತ ವಾಲುತ್ತಿದೆ ಎಂದರು.
ನಮ್ಮೆಲ್ಲರ ಆದರ್ಶವಾಗಬೇಕಾದ ಕುವೆಂಪು ಅವರು ಎಂದಿಗೂ ಮೂಲಭೂತಿತನದ ಕನಸು ಕೂಡ ಕಂಡವರಲ್ಲ. ಅವರು ಇದರಾಚೆಗಿನ ‘ಅನಿಕೇತನ’ ತತ್ವವನ್ನು ಸಾರಿದರು. ಅಂತಹ ಕುವೆಂಪು ಹೋರಾಟವನ್ನು ಕಟ್ಟಲು ಜಾಣಗೆರೆ ಸೇರಿ ಹಲವರಿದ್ದಾರೆ. ಕುವೆಂಪು ಕನ್ನಡ ಚಳವಳಿಯ ಕಲ್ಪನೆ ‘ಸರ್ವಂ ಕನ್ನಡಮಯ’ವಾಗಬೇಕು ನಿಜ. ಆದರೆ, ಮೂಲಭೂತಿಯಾಗಬಾರದು, ಅವೈಜ್ಞಾನಿಕ- ಅವೈಚಾರಿಕವಾಗಿರಬಾರದು ಎಂದು ಹೇಳಿದರು.
ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಸರ್ಕಾರವು ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸುಪ್ರಿಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮತ್ತು ರಾಜಹನ್ಸ್ ಪ್ರಿಂಟರ್ಸ್‌ನ ಮಾಲೀಕ ವಿ. ಬಾಲಚಂದ್ರ ಉಪಸ್ಥಿತರಿದ್ದರು.
"

ಕನ್ನಡದ ದನಿಯಾಗಿ ಕೆಲಸ ಮಾಡಿರುವುದಕ್ಕಾಗಿ ಜಾಣಗೆರೆ ಅವರನ್ನು ಅಭಿನಂದಿಸಲಾಗುತ್ತಿದೆ. ಲೇಖನ ಯೋಗಿಯಾಗಿರುವ ಅವರು, ಸ್ಥಾನಮಾನಗಳಿಗಾಗಿ ಎಂದಿಗೂ ಹಂಬಲಿಸಲಿಲ್ಲ. ರಾಜಕಾರಣಿಗಳನ್ನು ಎಂದಿಗೂ ಓಲೈಸಿಲ್ಲ.

— - ಡಾ. ಬಂಜಗೆರೆ ಜಯಪ್ರಕಾಶ್, ಜಾಣಗೆರೆ-75 ಅಭಿನಂದನಾ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net