ತುರುವೇಕೆರೆ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ನಡೆಸುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯಿಂದ ಹೊರಗುಳಿದು ನಾವೇ ಪ್ರತ್ಯೇಕವಾಗಿ ಜಯಂತಿ ಆಚರಿಸುತ್ತೇವೆ ಎಂದು ಹಿರಿಯ ದಲಿತ ಮುಖಂಡ ವಿಠಲದೇವರಹಳ್ಳಿಯ ವಿ.ಟಿ.ವೆಂಕಟರಾಮಯ್ಯ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ವರ್ಷಗಳಿಂದ ಮಾದಿಗ ಸಮುದಾಯ ತಮ್ಮ ಅಸ್ಥಿತ್ವಕ್ಕಾಗಿ ಹೋರಾಡುತ್ತಿದೆ. ನಮ್ಮ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಘೋಷಿಸಿತ್ತು. ಇನ್ನೇನು ನಮ್ಮ ಹೋರಾಟಕ್ಕೆ ಸಿಕ್ಕಿತು ಎಂದು ಅಂದುಕೊಳ್ಳುವ ಹೊತ್ತಿಗೆ ರಾಜ್ಯ ಸರ್ಕಾರದಲ್ಲಿರುವ ಕೆಲವು ಪಟ್ಟಭದ್ರ ಮಂತ್ರಿಗಳು ನಮ್ಮ ಆಶಯಕ್ಕೆ ಕೊಳ್ಳಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ನಡೆ ಖಂಡಿಸಿ ಏ.14ರಂದು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಆಡಳಿತ ಸೌಧದವರೆಗೂ 101 ತಮಟೆ ಬಾರಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದೇವೆ ಎಂದರು.
ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್, ದಲಿತ ಮುಖಂಡರಾದ ಮಾವಿನಹಳ್ಳಿ ಮಂಜಯ್ಯ, ಆನೇಕೆರೆ ಶಿವನಂಜಪ್ಪ, ಸಂಚಾಲಕ ಬೋರಪ್ಪ, ಪಪಂ ಮಾಜಿ ಸದಸ್ಯ ಚಿದಾನಂದ್, ಗುರುದತ್, ತೊರೆಮಾವಿನಹಳ್ಳಿಯ ಡಾ. ಚಂದ್ರಯ್ಯ, ಕೆಂಪಣ್ಣ, ಪುಟ್ಟಯಲ್ಲಯ್ಯ ಇದ್ದರು.