ಹುಳಿಯಾರು:ಇಂದಿನ ವಿದ್ಯಾವಂತ ಸಮಾಜದಲ್ಲಿ ಜನ್ಮ ನೀಡಿದ ತಂದೆ&-ತಾಯಿಯರನ್ನು ಸರಿಯಾಗಿ ಕಾಳಜಿ ವಹಿಸದೇ ಇರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ ಎಂದು ಹುಳಿಯಾರು ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಿ.ವೀರಣ್ಣ ತಿಳಿಸಿದರು.
ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಾಲಕ&ಶಿಕ್ಷಕ ಸಭೆ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದ ಕೊನೆಯ ಘಟ್ಟದಲ್ಲಿ ಪಾಲಕರನ್ನು ಗೌರವದಿಂದ ಪೋಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಪಾಲಕರ ಸಭೆಯಲ್ಲಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಪ್ರಾಂಶುಪಾಲರು,"ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ಕಾಲೇಜಿನಲ್ಲಿ ಲಭ್ಯವಿರುವ ಹಾಗೂ ಹೊಸದಾಗಿ ಆರಂಭಿಸಲಾಗಿರುವ ಕೋರ್ಸ್ಗಳು, ಉಚಿತ ಕಂಪ್ಯೂಟರ್ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಕಾಲೇಜಿಗೆ ಲಭಿಸಿರುವ ರ್ಯಾಂಕುಗಳ ಬಗ್ಗೆ ವಿವರಿಸಿದರು.
ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ದೊಡ್ಡದಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನಡೆಯಲು ಪಾಲಕರ ಸಹಕಾರ ಅತ್ಯಗತ್ಯ ಎಂದರು.
ವಿಶ್ವ ತಾಯಂದಿರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ತಾಯಿಯ ಕುರಿತ ಚಿತ್ರಕಲೆ, ಕವನ ವಾಚನ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಕರ ಕಾರ್ಯ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್, ಕಾರ್ಯದರ್ಶಿ ಗಿರಿಜಾ, ಪೋಷಕ ಶಿಕ್ಷಕ ಸಮಿತಿಯ ಸಂಚಾಲಕ ಧನಂಜಯ, ಐಕ್ಯೂಎಸಿ ಸಂಚಾಲಕಿ ಡಾ.ಸರಸ್ವತಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಯೋಗೇಶ್, ಮುಖ್ಯ ಶೈಕ್ಷಣಿಕ ಸಲಹೆಗಾರ್ತಿ ಡಾ.ಸುಷ್ಮಾ ಎಲ್. ಬಿರಾದರ್ ಇದ್ದರು.