ಅಬಕಾರಿ ಅಧಿಕಾರಿಗಳ ಕೌನ್ಸೆಲಿಂಗ್ ರದ್ದುಗೊಳಿಸಬೇಡಿ:ಸರ್ಕಾರಕ್ಕೆ ವೈನ್ ಮರ್ಚಂಟ್ಸ್ ಅಸೋಸಿಯೇಷನ್, ನಿರೀಕ್ಷಕರ ಸಂಘ ಮನವಿ- Don't cancel counseling

ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ
ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ
Published on
ಬೆಂಗಳೂರು: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಳೆದ ವರ್ಷ ಅಬಕಾರಿ ಇಲಾಖೆಯಲ್ಲಿ ಜಾರಿಗೆ ಬಂದಿರುವ ಕೌನ್ಸೆಲಿಂಗ್ (Don't cancel counseling) ಮೂಲಕ ಅಧಿಕಾರಿಗಳ ವರ್ಗಾವಣೆ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಹಾಗೂ ರಾಜ್ಯ ಅಬಕಾರಿ ನಿರೀಕ್ಷಕರ ಸಂಘ, ಸರ್ಕಾರಕ್ಕೆ ಮನವಿ ಮಾಡಿದೆ.
ಅಬಕಾರಿ ನಿರೀಕ್ಷಕರ ಸಂಘದ ಅಧ್ಯಕ್ಷ ಬಿ. ಜ್ಞಾನಪ್ರಕಾಶ್, ಉಪಾಧ್ಯಕ್ಷ ಸದಾಶಿವಕೊರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಎಂ. ಸುಧೀರ್‌ಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ನೂರಾರು ಅಬಕಾರಿ ನಿರೀಕ್ಷಕರು ಸಚಿವ ಕೆ.ಎಂ.ಶಿವಲಿಂಗೇಗೌಡ ಅವರನ್ನು ಭೇಟಿ ಮಾಡಿ ಕೌನ್ಸೆಲಿಂಗ್ ತರುವ ಮುನ್ನ ವರ್ಗಾವಣೆಯಲ್ಲಿ ಹೇಗೆಲ್ಲ ಭ್ರಷ್ಟಾಚಾರ ನಡೆಯುತ್ತಿತ್ತು ಹಾಗೂ ಕೌನ್ಸೆಲಿಂಗ್ ಜಾರಿಗೆ ಬಂದ ಬಳಿಕ ಭ್ರಷ್ಟಾಚಾರ ರಹಿತವಾಗಿ ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಗಮನಕ್ಕೆ ತಂದರು.
2025ರಲ್ಲಿ ಜಾರಿಗೆ ತರಲಾದ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ಪದ್ಧತಿಯು ಅತ್ಯಂತ ಪಾರದರ್ಶಕವಾಗಿದೆ. ಸಿಬ್ಬಂದಿ ಜ್ಯೇಷ್ಠತೆ ಮತ್ತು ಕಾರ್ಯಕ್ಷಮತೆಗೆ ತಕ್ಕಂತೆ ಅರ್ಹ ಸ್ಥಳ ಆಯ್ಕೆ ಮಾಡಲು ನ್ಯಾಯಯುತ ಅವಕಾಶ ನೀಡಿದೆ. ಹಳೆಯ ವರ್ಗಾವಣೆ ಪದ್ಧತಿಯಲ್ಲಿದ್ದ ಅನಿಶ್ಚಿತತೆ, ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರಕ್ಕೆ ಕೌನ್ಸೆಲಿಂಗ್ ವ್ಯವಸ್ಥೆಯು ಸಂಪೂರ್ಣವಾಗಿ ತಡೆ ನೀಡಿದೆ. ಹೀಗಿರುವಾಗ, ಸರ್ಕಾರವು ಮತ್ತೆ ಹಳೆಯ ಪದ್ಧತಿಯನ್ನು ಮರುಜಾರಿಗೊಳಿಸಲು ಪರಿಶೀಲಿಸುತ್ತಿರುವುದು ನಮಗೆ ತೀವ್ರ ಆತಂಕ ತಂದಿದೆ ಎಂದು ಬಿ.ಜ್ಞಾನಪ್ರಕಾಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರೂಪ್ ‘ಸಿ’ ವೃಂದದ ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯಪೇದೆ ಮತ್ತು ಪೇದೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಹಿಂದಿನ ಸರ್ಕಾರವು ಕ್ರಾಂತಿಕಾರಿ ತೀರ್ಮಾನ ತೆಗೆದುಕೊಂಡಿತ್ತು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯೂ ಅಬಕಾರಿ ಉಪ ಅಧೀಕ್ಷಕ ಮತ್ತು ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಸ್ತಾಪಿಸಲಾಗಿತ್ತು. ಹಾಗಾಗಿ, ಯಾವುದೇ ಕಾರಣಕ್ಕೂ ಕೌನ್ಸೆಲಿಂಗ್ ರದ್ದುಗೊಳಿಸದಂತೆ ಸಿಎಂ ಡಿ.ಕೆ.ಶಿವಕುಮಾರ್, ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ.
- ಎಸ್.ಗುರುಸ್ವಾಮಿ, ಫೆಡರೇಷನ್ ಆಫ್​​ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net