ದುಲೀಪ್ ಟ್ರೋಫಿಯೊಂದಿಗೆ ದೇಶೀಯ ಕ್ರಿಕೆಟ್ ಋತು ಆರಂಭ: ಈ ಸಲವೂ ರಣಜಿ 2 ಹಂತ

ಕರ್ನಾಟಕ ತಂಡ
ಕರ್ನಾಟಕ ತಂಡ
Published on
ಬೆಂಗಳೂರು: ಮುಂಬರುವ 2026-27ನೇ ಸಾಲಿನ ದೇಶೀಯ ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಬಿಡುಗಡೆಗೊಳಿಸಿದೆ. ಆಗಸ್ಟ್ 23ರಂದು ದುಲೀಪ್ ಟ್ರೋಫಿಯೊಂದಿಗೆ ಹೊಸ ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ ಸಿಗಲಿದೆ. ಮುಂಬರುವ ಋತುವಿನಲ್ಲಿ ಎಲ್ಲ ವಯೋಮಿತಿ, ಕ್ರಿಕೆಟ್ ಪ್ರಕಾರ ಮತ್ತು ಪುರುಷರ-ಮಹಿಳಾ ವಿಭಾಗಗಳಲ್ಲಿ ಒಟ್ಟಾರೆ 1,788 ಪಂದ್ಯಗಳು ನಡೆಯಲಿವೆ. ಇದರಲ್ಲಿ ಸೀನಿಯರ್, 23, 19, 16 ವಯೋಮಿತಿ ಪುರುಷರ ಟೂರ್ನಿಗಳು ಮತ್ತು ಸೀನಿಯರ್, 23, 19, 15 ವಯೋಮಿತಿ ಮಹಿಳಾ ಟೂರ್ನಿಗಳು ಸೇರಿವೆ.
ದುಲೀಪ್ ಟ್ರೋಫಿ ರೆಡ್‌ಬಾಲ್ ಟೂರ್ನಿಯಲ್ಲಿ ಒಟ್ಟು 6 ವಲಯಗಳ ತಂಡಗಳು ಆಡಲಿವೆ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ದುಲೀಪ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಬಳಿಕ ಅಕ್ಟೋಬರ್ 1ರಿಂದ 5ರವರೆಗೆ ಶ್ರೀನಗರ ಅಥವಾ ಜಮ್ಮುವಿನಲ್ಲಿ ನಡೆಯಲಿರುವ ಇರಾನಿ ಕಪ್ ಪಂದ್ಯದಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು-ಕಾಶ್ಮೀರ ಮತ್ತು ಶೇಷ ಭಾರತ ತಂಡಗಳು ಮುಖಾಮುಖಿ ಆಗಲಿವೆ. 
2 ಹಂತಗಳಲ್ಲಿ ರಣಜಿ: ಪ್ರತಿಷ್ಠಿತ ರಣಜಿ ಟ್ರೋಫಿಯ 92ನೇ ಆವೃತ್ತಿಯೂ ಎರಡು ಹಂತಗಳಲ್ಲಿ ನಡೆಯಲಿದೆ. ಅಕ್ಟೋಬರ್ 11ರಿಂದ ನವೆಂಬರ್ 5ರವರೆಗೆ ಎಲೈಟ್ ವಿಭಾಗದ ಮೊದಲ ಹಂತದ ಟೂರ್ನಿ ನಡೆಯಲಿದೆ. ಬಳಿಕ 2027ರ ಜನವರಿ 17ರಿಂದ ಫೆಬ್ರವರಿ 4ರವರೆಗೆ 2ನೇ ಹಂತದಲ್ಲಿ ಲೀಗ್ ಪಂದ್ಯಗಳು ನಡೆಯಲಿದ್ದರೆ, ಫೆಬ್ರವರಿ 9ರಿಂದ ಮಾರ್ಚ್ 3ರವರೆಗೆ ನಾಕೌಟ್ ಪಂದ್ಯಗಳು ನಡೆಯಲಿವೆ. ಇದರ ನಡುವೆ ನವೆಂಬರ್ 14ರಿಂದ ಡಿಸೆಂಬರ್ 6ರವರೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಮತ್ತು ಡಿಸೆಂಬರ್ 14ರಿಂದ ಜನವರಿ 8ರವರೆಗೆ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನಡೆಯಲಿದೆ. ರಣಜಿ ಎಲೈಟ್‌ನಲ್ಲಿ 32 ತಂಡಗಳನ್ನು ತಲಾ 8ರಂತೆ 4 ವಿಭಾಗಗಳಲ್ಲಿ ವಿಂಗಡಿಸಿದರೆ, ಪ್ಲೇಟ್ ಗುಂಪಿನಲ್ಲಿ 6 ತಂಡಗಳು ಆಡಲಿವೆ. ‘
ಐಪಿಎಲ್ 20ನೇ ಆವೃತ್ತಿಗೆ ಪೂರ್ವಭಾವಿಯಾಗಿ ಫ್ರಾಂಚೈಸಿಗಳಿಗೆ ಪ್ರತಿಭಾಶೋಧಕ್ಕೆ ನೆರವಾಗುವ ಸಲುವಾಗಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಯೋಜಿಸಲಾಗಿದ್ದು, ಡಿಸೆಂಬರ್‌ನಲ್ಲಿ ಐಪಿಎಲ್ ಹರಾಜು ನಡೆಯುವ ನಿರೀಕ್ಷೆ ಇದೆ.
ಬೆಂಗಳೂರು-ಮೈಸೂರಿನಲ್ಲಿ ಕೂಚ್ ಬೆಹಾರ್ ಟ್ರೋಫಿ ಬೆಂಗಳೂರು ಮತ್ತು ಮೈಸೂರು ನಗರಗಳು 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿಯ ಎಲೈಟ್ ವಿಭಾಗದ ನಾಕೌಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ನವೆಂಬರ್ 26ರಿಂದ ಡಿಸೆಂಬರ್ 29ರವರೆಗೆ ಲೀಗ್ ಪಂದ್ಯಗಳು, ತವರು-ಎದುರಾಳಿ ನೆಲ ಮಾದರಿಯಲ್ಲಿ ನಡೆದರೆ, ಜನವರಿ 3ರಿಂದ 30ರವರೆಗೆ ನಾಕೌಟ್ ಪಂದ್ಯಗಳು ಬೆಂಗಳೂರು-ಮೈಸೂರಿನಲ್ಲಿ ನಡೆಯಲಿವೆ. ಇದಲ್ಲದೆ ಡಿಸೆಂಬರ್ 14ರಿಂದ 29ರವರೆಗೆ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಒಂದು ಗುಂಪಿನ ಪಂದ್ಯಗಳಿಗೂ ಬೆಂಗಳೂರು ಆತಿಥ್ಯ ವಹಿಸಲಿದೆ. 
ರಣಜಿ ಬಿ ಗುಂಪಿನಲ್ಲಿ ಕರ್ನಾಟಕ
ಎಂಟು ಬಾರಿಯ ಚಾಂಪಿಯನ್ ಹಾಗೂ ಹಾಲಿ ರನ್ನರ್‌ಅಪ್ ಕರ್ನಾಟಕ ತಂಡ ಮುಂದಿನ ರಣಜಿ ಟ್ರೋಫಿಯಲ್ಲಿ ಬಿ ಗುಂಪಿನಲ್ಲಿ ಆಂಧ್ರ, ಸೌರಾಷ್ಟ್ರ, ಛತ್ತೀಸ್‌ಗಢ, ಹೈದರಾಬಾದ್, ತ್ರಿಪುರ, ಪಂಜಾಬ್ ಮತ್ತು ಅಸ್ಸಾಂ ಜತೆ ಸ್ಥಾನ ಪಡೆದಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಕರ್ನಾಟಕ ತಂಡ ಎ ಗುಂಪಿನಲ್ಲಿ ಜಾರ್ಖಂಡ್, ರಾಜಸ್ಥಾನ, ಬರೋಡ, ಬಂಗಾಳ, ಉತ್ತರ ಪ್ರದೇಶ, ಚಂಡೀಗಢ, ಮಿಜೋರಾಂ ಜತೆ ಸ್ಥಾನ ಪಡೆದಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಡಿ ಗುಂಪಿನಲ್ಲಿ ಉತ್ತರ ಪ್ರದೇಶ, ಕೇರಳ, ಬಂಗಾಳ, ತ್ರಿಪುರ, ಒಡಿಶಾ, ಅಸ್ಸಾಂ ಜತೆ ಸ್ಥಾನ ಪಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net