ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ: ಜೂನ್ 3ರ ಸಂಜೆ 4:05ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ | DK Shivakumar

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ: ಜೂನ್ 3ರ ಸಂಜೆ 4:05ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ: ಜೂನ್ 3ರ ಸಂಜೆ 4:05ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
Published on
ಬೆಂಗಳೂರು: ರಾಜ್ಯ ರಾಜಕಾರಣದ ಸುದೀರ್ಘ ಕುತೂಹಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಜೂನ್ 3ರ ಸಂಜೆ 4 ಗಂಟೆ 05 ನಿಮಿಷಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶನಿವಾರ ನಡೆದ ಶಾಸಕಾಂಗ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಬೆನ್ನಲ್ಲೇ, ನೂತನ ಸರ್ಕಾರ ರಚನೆಯ ಪ್ರಕ್ರಿಯೆ ನಡೆದಿವೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕೃತವಾಗಿ ಸರ್ಕಾರ ರಚಿಸಲು ಹಸಿರು ನಿಶಾನೆ ತೋರಿಸಿದ್ದಾರೆ.
ಇದರೊಂದಿಗೆ ಸೃಷ್ಟಿಯಾಗಿದ್ದ ಎಲ್ಲ ಊಹಪೋಹಗಳು ಮತ್ತು ಚರ್ಚೆಗಳೂ ಅಂತ್ಯವಾಗಿದ್ದು, ಇನ್ನೇನಿದ್ದರೂ ಜೂನ್ 3ರ ಸಂಜೆ 4 ಗಂಟೆಗೆ ಭವ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭವೊಂದೇ ಬಾಕಿ ಉಳಿದಿದೆ.

ಶಾಸಕಾಂಗ ಸಭೆ ಮುಗಿಸಿ ನೇರ ಲೋಕಭವನಕ್ಕೆ; ಒಂದೇ ಕಾರಿನಲ್ಲಿ ಬಂದ ಘಟಾನುಘಟಿಗಳು!

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದೀರ್ಘ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಸಭೆಯ ಬಳಿಕ ನೂತನ ಸಿಎಲ್‌ಪಿ ನಾಯಕ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಪ್ರಮುಖ ನಾಯಕರೊಂದಿಗೆ ನೇರವಾಗಿ ಲೋಕಭವನಕ್ಕೆ ತೆರಳಿದರು. ವಿಶೇಷವೆಂದರೆ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಒಂದೇ ಕಾರಿನಲ್ಲಿ ಲೋಕಭವನಕ್ಕೆ ತೆರಳಿದರು.
ಲೋಕಭವನ ತಲುಪಿದ ನಾಯಕರ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿತು. ಈ ವೇಳೆ ತಮಗೆ ನೂತನ ಶಾಸಕರ ಸಂಪೂರ್ಣ ಒಪ್ಪಿಗೆ ಇರುವುದನ್ನು ಸಾಬೀತುಪಡಿಸಿದ ಡಿಕೆಶಿ, ಪಕ್ಷವು ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಅಧಿಕೃತ ಪತ್ರವನ್ನು ಗವರ್ನರ್‌ಗೆ ಹಸ್ತಾಂತರಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ಜೂನ್ 3ರ ಸಂಜೆ 4:05ಕ್ಕೆ ಮಹೂರ್ತ; ರಾಜ್ಯಪಾಲರಿಂದ ಅಧಿಕೃತ ಆಹ್ವಾನ!

ಕಾಂಗ್ರೆಸ್ ನಾಯಕರು ನೀಡಿದ ಪತ್ರ ಹಾಗೂ ಶಾಸಕರ ಬೆಂಬಲದ ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಕ್ಷಣವೇ ಸ್ಪಂದಿಸಿದರು. ನಿಯಮಾವಳಿಗಳ ಅನ್ವಯ ಗೆಹ್ಲೋಟ್ ಅವರು ಸಿಎಲ್‌ಪಿ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡಲು ಅಧಿಕೃತವಾಗಿ ಆಹ್ವಾನ ನೀಡಿದರು.
ರಾಜಭವನದ ಒಪ್ಪಿಗೆ ಸಿಗುತ್ತಿದ್ದಂತೆಯೇ ಪ್ರಮಾಣ ವಚನ ಸ್ವೀಕಾರದ ಭವ್ಯ ಮುಹೂರ್ತವೂ ನಿಗದಿಯಾಗಿದೆ. ಬರುವ ಜೂನ್ 3 ರಂದು ಬುಧವಾರ ಮಧ್ಯಾಹ್ನ ಸರಿಯಾಗಿ 4:05 ಗಂಟೆಗೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಕೆಲವು ಪ್ರಮುಖ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕನಕಪುರ ಕ್ಷೇತ್ರದಿಂದ ಸತತವಾಗಿ ಗೆದ್ದು ಬಂದು, ಪಕ್ಷ ಸಂಘಟನೆಯಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಡಿ.ಕೆ.ಶಿವಕುಮಾರ್ ಕೊನೆಗೂ ಕರ್ನಾಟಕದ ಅತ್ಯುನ್ನತ ಸಿಎಂ ಗದ್ದುಗೆಯನ್ನು ಅಲಂಕರಿಸುತ್ತಿದ್ದು, ಇಡೀ ರಾಜ್ಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net