ಕಿದ್ವಾಯಿ ಆಸ್ಪತ್ರೆಯಲ್ಲಿ ಮಕ್ಕಳೊಂದಿಗೆ ಸಿಎಂ ಭಾವನಾತ್ಮಕ ಕ್ಷಣ: ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಡಿಕೆಶಿ ಸಾಂತ್ವನದ ಸಾಥ್!

ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್
ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್
Published on: 
  • ಏನೂ ಆಗಲ್ಲ ಎಲ್ಲವೂ ಸರಿಯಾಗಲಿದೆ- ಸಿಎಂ ಮಾತುಗಳಿಗೆ ನಗು ಅರಳಿಸಿದ ಕಂದಮ್ಮಗಳು

  • ಕಿದ್ವಾಯಿ ಆಸ್ಪತ್ರೆಯಲ್ಲಿ 200 ಹೆಚ್ಚುವರಿ ಹಾಸಿಗೆ

  • ಮಕ್ಕಳೊಂದಿಗೆ ಬರುವ ತಾಯಂದಿರು, ಸಂಬಂಧಿಕರಿಗೆ ವಸತಿಗಾಗಿ 3 ಎಕರೆ ಜಾಗದ ಬೇಡಿಕೆ ಪರಿಶೀಲನೆ

  • ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ, ರಾಯಚೂರಿಗೂ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ವಿಸ್ತರಣೆ

ಬೆಂಗಳೂರು: ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಕೆಳಗಿದ್ದ ಮೊದಲ ವಾರ್ಡಿಗೆ ಸಿಎಂ ಕಾಲಿಟ್ಟಾಗ ಕ್ಯಾನ್ಸರ್ ಪೀಡಿತ ಬಾಲಕ ಧನುಷ್ ರೋಜಾ ಹೂ ಕೊಟ್ಟು ಸ್ವಾಗತಿಸಿದನು. ಯಾವೂರು ಎಂದು ಸಿಎಂ ಕೇಳಿದರು, ಆತ ನಂದು ಮಾಗಡಿ ಸಾರ್ ಎಂದಾಗ ಸುತ್ತಲಿದ್ದವರ ಮುಖದಲ್ಲಿ ನಗು ಅರಳಿತ್ತು. ಮಾಗಡಿ, ಓಹೋ ಕೆಂಪೇಗೌಡರ ಊರು. ಧನುಷ್ ಅಂದರೆ ಏನು ಗೊತ್ತಾ? ಬಾಣ ಅಂತ. ನೀನು ಬಾಣದಂತಿರಬೇಕು. ಬಾಣ ಹೊಡೀತೀಯ?, ನಿನಗೆ ಏನು ಆಗಲ್ಲ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದಾಗ ಸುತ್ತಲಿದ್ದವರ ಕಣ್ಣಲ್ಲಿ ತಮಗರಿವಿಲ್ಲದೆ ಕಣ್ಣೀರು ಜಾರಿತ್ತು.

ಕಣ್ಣಲ್ಲಿ ನಿರೀಕ್ಷೆ, ಮನದಲ್ಲಿ ಹಾರೈಕೆ. ಕಿದ್ವಾಯಿ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಕಪೂರ್ ವಿಭಾಗಕ್ಕೆ ಮಕ್ಕಳ ದಿನಾಚರಣೆ ನಿಮಿತ್ತ ಮಕ್ಕಳಿಗೆ ಶುಭಾಶಯ ಹೇಳಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಕಾಲಿಡುತ್ತಿದ್ದಂತೆ ಮಕ್ಕಳಲ್ಲಿ ಕಾಯಿಲೆ ಗುಣವಾಗುವ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಅವರ ಹಾರೈಕೆ, ಮಾತುಗಳು ಆತ್ಮವಿಶ್ವಾಸದ ಬೆಳಕನ್ನು ಹರಿಸಿತು.

ಹಾಸಿಗೆಯಲ್ಲಿ ಮಲಗಿದ್ದ ಪುಟಾಣಿಯನ್ನು, "ಏನಪ್ಪ ಯಾವೂರು?" ಅಂದರು. ಮಗು ಎದ್ದು ಕೂತು, "ಹೊಸೂರು" ಅಂದ. "ಏನು ನಿನ್ನ ಹೆಸರು?" ಅಂದರು, "ಪಾರ್ಥಸಾರಥಿ" ಅಂದ. "ಓಹೋ, ಪಾರ್ಥ ಅಂದರೆ ಏನು ಗೊತ್ತಾ? ಅರ್ಜುನ ಅಂತ. ಅಂದರೆ ನೀನು ಅರ್ಜುನ. ನಿನಗೆ ಏನೂ ಆಗೋಲ್ಲ. ಶಾಲೆಗೆ ಹೋಗಿ, ಚೆನ್ನಾಗಿ ಓದು. ತಲೆ ಕೆಡಿಸಿಕೊಳ್ಳಬೇಡ" ಎಂದು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹುಡುಗನಿಗೆ ಧೈರ್ಯ ತುಂಬಿದರು.

ನಾನ್ಯಾರು ಗೊತ್ತಾ? ಡಿ.ಕೆ. ಶಿವಕುಮಾರ್

ಹುಮನಾಬಾದ್‌ನ ಬಾಲಕಿ ಪೂಜಾ ಬಳಿ ಬಂದವರೇ, ನಾನ್ಯಾರು ಗೊತ್ತಾ? ಅಂದರು. ಆ ಮಗು ಪ್ರತಿಯಾಗಿ, ನನಗೆ ಗೊತ್ತು ನೀವು ಡಿಕೆ ಶಿವಕುಮಾರ್. ಮುಖ್ಯಮಂತ್ರಿ ಅಂದಳು. ಪೂಜಾ ಮುಂದೆ ನೀನು ಏನಾಗಬೇಕು ಅಂತಿದ್ದೀಯ? ಎಂದು ಮಗುವಿನ ಕನಸನ್ನು ಕೆದಕಿದರು.

ಸಾರ್ ನಾನು ಟೀಚರ್ ಆಗಬೇಕು ಅಂದುಕೊಂಡಿದ್ದೇನೆ ಅಂದಳು. ಟೀಚರ್ ಆಗಿ ದೇಶಕ್ಕೆ ಸೇವೆ ಮಾಡು ಎಂದು ಸಿಎಂ ಹರಸಿದರು.

ವಾರ್ಡಿನ ಮೂಲೆಯಲ್ಲಿದ್ದ ಸರೋಜಮ್ಮನ ಹತ್ತಿರ ಬಂದು, ಏನು ಮಗು ಹೆಸರು? ಅಂದರು. ಅಷ್ಟರಲ್ಲಿ ಹಾಸಿಗೆಯ ಮೇಲೆ ಕುಳಿತವಳೇ ಗಂಗೋತ್ರಿ ಅಂದಳು. ಗಂಗೋತ್ರಿ ಪವಿತ್ರವಾದ ನದಿ. ನಮ್ಮ ಮನೆಗೂ ಇದೇ ಹೆಸರನ್ನು ಇಡಬೇಕು ಅಂದುಕೊಂಡಿದ್ದೇನೆ ಎಂದು ಚಾಕೊಲೇಟ್, ಡ್ರಾಯಿಂಗ್ ಪುಸ್ತಕಗಳನ್ನು ಹಂಚಿದರು.

ಎದುರಿಗಿದ್ದ ಹಾಸಿಗೆ ಬಳಿ ಬಂದರು. ಮಗುವಿಗೆ 2 ವರ್ಷ ಸಾರ್. ಹೆಸರು ಜಯಲಕ್ಷ್ಮಿ ಅಂತ ತಾಯಿ ಅನಿತಾ ಹೇಳಿದರು. ಆಕೆಯ ಕಣ್ಣಲ್ಲಿ ಹಿಂಜರಿಕೆ.

ಏನಾಗಿತ್ತು? ಸಿಎಂ ಮತ್ತೆ ಪ್ರಶ್ನೆ ಕೇಳಿದರು. ಬ್ಲಡ್... ಅಂತ ಮಾತು ಹೊರಬಂತು, ಕ್ಯಾನ್ಸರ್ ಅನ್ನೋ ಪದ ಅನಿತಾ ಗಂಟಲಲ್ಲೇ ನಿಂತು ಹೋಯಿತು. ಅನಿತಾ ಮಗಳು ಜಯಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಗುಲ್ಬರ್ಗಾದಿಂದ ಬೆಂಗಳೂರಿಗೆ ಬಂದು, ಸಂಬಂಧಿಕರಿಗೆ ಮಾತ್ರ ರೋಗದ ಹೆಸರು ಹೇಳಿ, ಕಿದ್ವಾಯಿ ಆಸ್ಪತ್ರೆಗೆ ತಿಂಗಳುಗಟ್ಟಲೆ ಸೇರಿಸಿದ್ದರಿಂದ ಈಗ ಮಗು ಕೈಗೆ ದಕ್ಕಿದೆ. ಈಗ ಪರವಾಗಿಲ್ಲ ಸಾರ್, ಮಗು ಸುಧಾರಿಸುತ್ತಿದೆ ಸಿಎಂಗೆ ಅನಿತಾ ವರದಿ ಕೊಟ್ಟ ಮೇಲೆ ಮುಂದೆ ಹೋದರು.

ಪಕ್ಕದ ಹಾಸಿಗೆಯಲ್ಲಿದ್ದ ಪುಟಾಣಿ ಹುಡುಗಿ, ನನ್ನ ಹೆಸರು ಲೇಖನ. ನಂದು ರಾಯಚೂರು, ಡಿಸೆಂಬರ್ ಬಂದರೆ 10 ವರ್ಷ ಅಂತ ಚುಟುಕುರಳಿ ರೀತಿ ಹೇಳಿದಳು. ಈಕೆ ಬೆಳಗ್ಗೆಯಿಂದಲೇ ಇವತ್ತು ಆಸ್ಪತ್ರೆಗೆ ದೊಡ್ಡ ಡಾಕ್ಟರ್ ಬರ್ತಾರೆ ಅಂತ ರೋಜಾ ಹೂ ಕೈಯಲ್ಲಿ ಹಿಡಿದು ನಿಂತಿದ್ದಳು. ಅಜ್ಜಿ ಆಂಜನಮ್ಮ ಆರೈಕೆಯಲ್ಲಿ ಬದುಕುವ ಹೋರಾಟ ಮುಂದುವರಿಸಿದ್ದಳು.

ಹೀಗೆ ಸಿಎಂ ಕಿದ್ವಾಯಿ ಕೆಳಗಿನ ಎರಡೂ ವಾರ್ಡ್‌ಗಳ ಮಕ್ಕಳಿಗೆ ಕೈಕುಲುಕಿ, ಧೈರ್ಯತುಂಬಿ ಮೊದಲನೇ ಕಟ್ಟಡದ ಜನರಲ್ ವಾರ್ಡ್‌ಗೆ ಹೋಗಿ, ವಿಜಯಪುರ, ಶಹಾಪುರ, ಹುಮನಾಬಾದ್ ಹೀಗೆ ನಾಡಿನ ನಾನಾ ಭಾಗಗಳಿಂದ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಪಕ್ಕ ಕುಳಿತು, ಸರಿಯಾಗಿ ನೋಡಿಕೊಳ್ಳುತ್ತಾ ಇದ್ದಾರಾ? ಊಟ ಕೊಡ್ತಾ ಇದ್ದಾರಾ? ಎಂದು ವಿಚಾರಿಸಿದರು.

ಬ್ಲಡ್ ಕ್ಯಾನ್ಸರ್‌ನಿಂದ ನರಳುತ್ತಿದ್ದ ಶಾಪುರದ ಭವ್ಯಳ ತಲೆಸವರಿ, ಸರಿಹೋಗುತ್ತದೆ. ಭಯ ಬೇಡ ಎಂದು ಸಮಾಧಾನ ಮಾಡಿದರು. ಅವರ ತಾಯಿ ಸಂಗೀತಾಗೆ, ಗೃಹಜ್ಯೋತಿ, ಗೃಹಲಕ್ಷ್ಮಿ ಸೌಲಭ್ಯಗಳು ಸಿಗುತ್ತಿದೆಯಾ? ಎಂದು ವಿಚಾರಿಸಿದರು.

ಕನಕಪುರದ ಋತ್ವಿಕ್ ಅವರ ತಾಯಿಯ ಅಚಾನಕ್ಕಾಗಿ ಬದಲಾಗಿದ್ದ ಎಪಿಎಲ್ ಕಾರ್ಡ್ ಅನ್ನು ಬಿಪಿಎಲ್ ಆಗಿ ತಕ್ಷಣ ಬದಲಾಯಿಸಿಕೊಡಿ ಎಂದು ಸ್ಥಳದಲ್ಲೇ ಸೂಚಿಸಿದರು.

ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಮಕ್ಕಳಿಗೂ ಶುಭಾಶಯ ಹೇಳಿ, ಹೃದಯ ತುಂಬಿ ಹರಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಾರ್ಥಕಗೊಳಿಸಿದರು.

ಕಿದ್ವಾಯಿ ಆಸ್ಪತ್ರೆಗೆ ಆಗಮಿಸಿದ ಸಿಎಂ, ಆವರಣದಲ್ಲಿ ರೋಗಿಗಳನ್ನು ನೋಡಿಕೊಳ್ಳಲು ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ತಾಯಂದಿರ ಪಕ್ಕ ಕೂತು ಯೋಗಕ್ಷೇಮ ವಿಚಾರಿಸಿದರು. ಎಲ್ಲಾ ಸೌಲಭ್ಯ ಕೊಡ್ತಾ ಇದ್ದಾರಾ? ಹಣ ಏನಾದರೂ ಕೇಳ್ತಾರಾ? ಎಂದು ವಿಚಾರಿಸಿ, ನಿಮ್ಮ ನಿಮ್ಮ ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

ಮಕ್ಕಳ ಭೇಟಿ ಬಳಿಕ ಮಾಧ್ಯಮ ಪ್ರತಿಕ್ರಿಯೆ ನೀಡಿದ ಸಿಎಂ

ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಪುಟ್ಟ ಕಂದಮ್ಮಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ದೃಶ್ಯ ಎಂಥವರ ಮನವನ್ನೂ ಕಲಕುವಂತದ್ದು. ಮಕ್ಕಳ ನೋವು ಒಂದೆಡೆಯಾದರೆ, ಅವರ ಚಿಕಿತ್ಸೆಗೆ ಹಗಲಿರುಳು ಆಸ್ಪತ್ರೆಯಲ್ಲೇ ಕಳೆಯುವ ತಂದೆ-ತಾಯಿಯ ಸಂಕಟ ಮತ್ತೊಂದೆಡೆ. ಇಂತಹ ಕುಟುಂಬಗಳಿಗೆ ಚಿಕಿತ್ಸೆ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಈ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ (Kidwai Memorial Institute of Oncology) ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳೊಂದಿಗೆ ಬರುವ ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ವಸತಿ ಕಲ್ಪಿಸಲು 3 ಎಕರೆ ಜಾಗದ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಕ್ಕಳ ನೋವು ನೋಡಿದರೆ ಮನಸ್ಸಿಗೆ ಸಂಕಟವಾಗುತ್ತದೆ

ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೇ ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಇಲ್ಲಿಗೆ ಬಂದು ಮಕ್ಕಳ ಪರಿಸ್ಥಿತಿ ನೋಡಬೇಕು ಎಂದು ಬಂದಿದ್ದೆ. ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್‌ನಂತಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ನೋಡಿದಾಗ ಅವರ ನೋವು ಅರ್ಥವಾಗುತ್ತದೆ. ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಆದರೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅವರ ಭವಿಷ್ಯ ಬಹಳ ಮುಖ್ಯ ಎಂದು ಭಾವುಕರಾದರು.

ಒಂದು ಮಗುವಿನ ಜನನದ ಹಿಂದೆ ತಂದೆ-ತಾಯಿ ಸಾಕಷ್ಟು ಕನಸು ಮತ್ತು ಶ್ರಮ ಹೊಂದಿರುತ್ತಾರೆ. ಅಂತಹ ಮಗು ಬಾಲ್ಯದಲ್ಲೇ ಗಂಭೀರ ಕಾಯಿಲೆಗೆ ತುತ್ತಾದಾಗ ಆ ಕುಟುಂಬ ಅನುಭವಿಸುವ ನೋವು ದೊಡ್ಡದು. ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು. ಅವರ ಪೋಷಕರಿಗೂ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇರಬೇಕು ಎಂದು ಸಿಎಂ ಡಿಕೆಶಿ ಹೇಳಿದರು.

ವರ್ಷಕ್ಕೆ 3.5 ಲಕ್ಷ ರೋಗಿಗಳಿಗೆ ಚಿಕಿತ್ಸೆ

ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 3.5 ಲಕ್ಷ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪ್ರತಿದಿನ ಸರಾಸರಿ ಒಂದು ಸಾವಿರ ಮಂದಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ವಿಶೇಷ. ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಯಾನ್ಸರ್ ಚಿಕಿತ್ಸೆಗೆಂದು ಎಲ್ಲರೂ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಬರುವ ಅನಿವಾರ್ಯತೆ ತಪ್ಪಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಿಎಂ ತಿಳಿಸಿದರು.

ಕಿದ್ವಾಯಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಉನ್ನತೀಕರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಒಂದು ರೋಬೋಟಿಕ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ರೋಬೋಟಿಕ್ ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ದೇಶದಲ್ಲೇ ಹೆಸರಾಂತ ಆಸ್ಪತ್ರೆಯಾಗಿರುವ ಕಿದ್ವಾಯಿಯಲ್ಲಿ ಇನ್ನಷ್ಟು ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು ಎಂದರು.

ದಾನಿಗಳ ಸೇವೆಗೆ ಅಭಿನಂದನೆ

ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿಗೆ ಜಿಂದಾಲ್, ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ದಾನಿಗಳು ನೆರವು ನೀಡಿದ್ದಾರೆ. ವಿವಿಧ ಕಟ್ಟಡಗಳು ಮತ್ತು ಚಿಕಿತ್ಸಾ ಘಟಕಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೋಗಿಗಳ ನೆರವಿಗೆ ನಿಂತಿರುವ ದಾನಿಗಳ ಸೇವೆ ಅಭಿನಂದನಾರ್ಹ. ಅವರ ಸಹಕಾರದಿಂದ ಆಸ್ಪತ್ರೆ ಮತ್ತಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಜನರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಡಿಕೆಶಿ, ಯುವಜನರಷ್ಟೇ ಅಲ್ಲ, ಒಂದು, ಎರಡು, ಐದು ಹಾಗೂ ಹತ್ತು ವರ್ಷದೊಳಗಿನ ಪುಟ್ಟ ಮಕ್ಕಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಮಕ್ಕಳಿಗೆ ಅಗತ್ಯವಿರುವ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲು ಸರ್ಕಾರ ಏನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಿಗರೇಟ್, ತಂಬಾಕು ಬಳಕೆ ನಿಯಂತ್ರಣದ ಕುರಿತು ಕೇಳಿದ ಪ್ರಶ್ನೆಗೆ, "ಮಕ್ಕಳನ್ನು ಇಂತಹ ದುಶ್ಚಟಗಳಿಂದ ದೂರವಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾದಕ ವಸ್ತು ಮುಕ್ತ ರಾಜ್ಯ ನಿರ್ಮಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದರು.