ಡಿಕೆಶಿಗಿದೆ ಸಿಎಂ ಆಗುವ ಅರ್ಹತೆ

DK Shivakumar
Published on
ಚಿಕ್ಕಬಳ್ಳಾಪುರ:ಮುಖ್ಯಮಂತ್ರಿಯಾಗುವ ಅರ್ಹತೆಯು ಡಿ.ಕೆ.ಶಿವಕುಮಾರ್​ಗೆ ಇದೆ. ಯಾರಾದರೂ ಪಿಎಂ, ಸಿಎಂನಂತಹ ಉನ್ನತ ಹುದ್ದೆಯು ಸಿಗುವಾಗ ಬೇಡ ಎನ್ನುತ್ತಾರೆಯೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್​ನಲ್ಲಿ ಕ್ರಾಂತಿ ನಡೆಯುವುದಿಲ್ಲ. ಮೊದಲಿನಿಂದಲೂ ಊಹಾಪೋಹಗಳ ಮೇಲೆ ಚರ್ಚೆಗಳು ನಡೆಯುತ್ತಿವೆ. ಆದರೆ ಎಲ್ಲ ನಿರ್ಧಾರ ಹೈಕಮಾಂಡ್​ ತೆಗೆದುಕೊಳ್ಳುತ್ತದೆ. ಇದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಪ್ರಸ್ತುತ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಹೈಕಮಾಂಡ್​ ಹಂತದಲ್ಲಿ ರ್ನಿಣಯ ಎಂಬುದರ ಅರಿವಿನ ನಡುವೆಯೂ ಸ್ಥಳಿಯವಾಗಿ ನಿರಂತರ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಅನವಶ್ಯಕ. ಡಿ.ಕೆ.ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಇಲ್ಲ ಎನ್ನಲು ಆಗುವುದಿಲ್ಲ ಎಂದರು.
ಕೇಳುವುದಕ್ಕೆ ಯೋಗ್ಯತೆ ಇರಬೇಕು
ಸಚಿವ ಸಂಪುಟ ಪುನರಾಚನೆಯ ಬಗೆಗಿನ ಚರ್ಚೆಯ ನಡುವೆ ಸಚಿವ ಸುಧಾಕರ್​ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸಚಿವ ಇಲ್ಲವೇ ಪದವಿ ಸ್ಥಾನ ಕೇಳುವುದಕ್ಕೆ ಯೋಗ್ಯತೆ ಇರಬೇಕು. ಇದನ್ನು ಕೇಳಿಕೊಳ್ಳುವವರು ಅರ್ಥ ಮಾಡಿಕೊಳ್ಳಬೇಕು. ನನಗೆ ಅರ್ಹತೆ ಇದೆಯೇ? ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. ಇದರ ಬದಲಿಗೆ ಸ್ಥಾನ ಕೊಡಿ ಎಂಬುದಾಗಿ ಯಾರ್ಯಾರೋ ಕೇಳಿಕೊಳ್ಳುವುದಲ್ಲ. ಹಿಂದೆ ರಾಜ್ಯ ಸರ್ಕಾರ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವುದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಪಕ್ಷದ ಹೈಕಮಾಂಡ್​ ಎಲ್ಲದರ ಆಯಾಮ ನೋಡಿ, ಅವಕಾಶ ನೀಡಿದೆ. ಈಗ ಮತ್ತೆ ಸಚಿವ ಸಂಪುಟ ಪುನಾರಚನೆಯ ವಿಚಾರದಲ್ಲೂ ಪಕ್ಷವು ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ಕೆಲವರು ಯೋಗ್ಯತೆ ಅರಿಯದೇ ಪದವಿ ಸ್ಥಾನ ಬೇಕು ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಪಕ್ಕದಲ್ಲಿಯೇ ಇದ್ದ ಶಾಸಕ ಪ್ರದಿಪ್​ ಈಶ್ವರ್​ ಅಯ್ಯರ್​ ನಗುವಿನ ಮೂಲಕ ಮೌನ ಪ್ರತಿಕ್ರಿಯೆ ನೀಡಿದರು.
ಸಚಿವ ಸ್ಥಾನಕ್ಕೆ ಕಸರತ್ತು
ರಾಜ್ಯದ ಮಾದರಿಯಲ್ಲಿ ಜಿಲ್ಲೆಯಲ್ಲೂ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆಯಾಗುತ್ತಿದೆ. ಇದರ ನಡುವೆ ಬಾಗೇಪಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಪ್ರದಿಪ್​ ಈಶ್ವರ್​ ಅಯ್ಯರ್​ ಸಚಿವ ಸ್ಥಾನದ ಆಕಾಂಗಳಾಗಿದ್ದಾರೆ. ಹೊಸಬರಿಗೆ ಅವಕಾಶ ಸಿಕ್ಕಿದಲ್ಲಿ ಸುಧಾಕರ್​ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಪ್ರತಿಬಾರಿ ಪ್ರಸ್ತಾಪವಾದಾಗಲೆಲ್ಲ ಸ್ಪಷ್ಟನೆ ನೀಡುವ ಸಂದರ್ಭದಲ್ಲಿ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದ ಸಚಿವರು, ರಾಜ್ಯೋತ್ಸವದಲ್ಲಿ ಕಿಡಿಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net