ಜಿಲ್ಲಾ ಉತ್ಸವವು ನಿರುದ್ಯೋಗಿಗಳಿಗೆ ನೆರಳಾದ ಉದ್ಯೋಗ ಮೇಳ

ರಾಯಚೂರಿನ ಕೃಷಿ ವಿವಿಯ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳವನ್ನು ಶುಕ್ರವಾರ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಸಂಸದ ಜಿ.ಕುಮಾರ ನಾಯಕ, ಶಾಸಕ ಬಸನಗೌಡ ದದ್ದಲ್, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾ ಅಧಿಕಾರಿ ಡಾ.ಟಿ.ರೋಣಿ, ಉದ್ಯೋಗ ಅಧಿಕಾರಿ ನವೀನ್ ಕುಮಾರ, ಕೌಶಲ ಅಧಿಕಾರಿ ಜಿ.ಯು.ಹುಡೇದ್ ಇದ್ದರು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಯುವ ಸಮೂಹ.
ರಾಯಚೂರಿನ ಕೃಷಿ ವಿವಿಯ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳವನ್ನು ಶುಕ್ರವಾರ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಸಂಸದ ಜಿ.ಕುಮಾರ ನಾಯಕ, ಶಾಸಕ ಬಸನಗೌಡ ದದ್ದಲ್, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾ ಅಧಿಕಾರಿ ಡಾ.ಟಿ.ರೋಣಿ, ಉದ್ಯೋಗ ಅಧಿಕಾರಿ ನವೀನ್ ಕುಮಾರ, ಕೌಶಲ ಅಧಿಕಾರಿ ಜಿ.ಯು.ಹುಡೇದ್ ಇದ್ದರು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಯುವ ಸಮೂಹ.
Published on

ಪ್ರಮುಖ ಮುಖ್ಯಾಂಶಗಳು

  • ಬಹುರಾಷ್ಟ್ರೀಯ ಕಂಪನಿಗಳಿಂದ ಪ್ರತಿಭಾನ್ವೇಷಣೆ
  • 14,901 ಯುವಜನರಿಂದ ನೋಂದಣಿ
ರಾಯಚೂರು: ರಾಯಚೂರಿನ ಸೊಗಡು ಸಾರುವ ಜಿಲ್ಲಾ ಉತ್ಸವವು ಸಾಂಸ್ಕೃತಿಕ ವೈಭವಕ್ಕೆ ಸೀಮಿತವಾಗದೆ, ಸಾವಿರಾರು ನಿರುದ್ಯೋಗಿ ಯುವಕರ ಬದುಕಿಗೆ ದಾರಿದೀಪವಾಯಿತು. ಉದ್ಯೋಗದ ಕನಸು ಹೊತ್ತು ಬಂದ ಸಾವಿರಾರು ಅಭ್ಯರ್ಥಿಗಳ ಆಶಾಕಿರಣವಾಗಿ ಉದ್ಯೋಗಮೇಳ ಮಾರ್ಪಟ್ಟಿತ್ತು. ಅತ್ತ ಸಾಂಸ್ಕೃತಿಕ ವೇದಿಕೆಗಳಲ್ಲಿ ಜನಪದ ಕಲೆಗಳ ರಂಗು ಮೇಳೈಸುತ್ತಿದ್ದರೆ, ಇತ್ತ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಯುವಜನತೆ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತಿದ್ದರು.
ಈ ಬೃಹತ್ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 14,901 ಯುವಜನರು ನೋಂದಾಯಿಸಿಕೊಳ್ಳುವ ಮೂಲಕ ನಿರುದ್ಯೋಗದ ತೀವ್ರತೆ ಸಾಬೀತಾಯಿತು. ನೋಂದಣಿಯಲ್ಲಿ ಯುವಕರನ್ನು (6,874) ಮೀರಿಸಿದ ಯುವತಿಯರು (8,026), ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣುಮಕ್ಕಳು ಸಬಲರಾಗುತ್ತಿರುವುದಕ್ಕೆ ಸಾಕ್ಷಿಯಾದರು. ಸರ್ಕಾರದ ಮಹತ್ವಾಕಾಂಕ್ಷೆಯ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 5,245 ಅಭ್ಯರ್ಥಿಗಳು ಈ ಮೇಳದ ಸದುಪಯೋಗ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ಡಿಜಿಟಲ್ ಕ್ರಾಂತಿ-ಪಾರದರ್ಶಕ ನೇಮಕಾತಿ

ಈ ಮೇಳದ ಅತ್ಯಂತ ಆಕರ್ಷಕ ಅಂಶವೆಂದರೆ ಅದರ ಡಿಜಿಟಲ್ ರೂಪ. ನೋಂದಣಿಯಿಂದ ಹಿಡಿದು ಅಂತಿಮ ಆಯ್ಕೆಯವರೆಗೆ ಎಲ್ಲವೂ ಡಿಜಿಟಲ್ ತಂತ್ರಜ್ಞಾನದ ಮೂಲಕವೇ ನಡೆಯಿತು. ಇದು ಕೇವಲ ಸಮಯ ಉಳಿತಾಯ ಮಾಡುವುದಲ್ಲದೆ, ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತಂದಿತು. ಇಲ್ಲಿ ಸಂಗ್ರಹವಾದ ದತ್ತಾಂಶವು ಭವಿಷ್ಯದಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.

ಒಂದೇ ಸೂರಿನಡಿ 63 ಕಂಪನಿಗಳು

ಐಟಿ, ಬಿಪಿಒ, ಬ್ಯಾಂಕಿಂಗ್‌ನಿಂದ ಹಿಡಿದು ಕೃಷಿ ಆಧಾರಿತ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್‌ವರೆಗೆ ಒಟ್ಟು 63 ಕಂಪನಿಗಳು ಪ್ರತಿಭಾನ್ವೇಷಣೆಯಲ್ಲಿ ತೊಡಗಿದ್ದವು. ಎಸ್ಸೆಸ್ಸೆಲ್ಸಿಯಿಂದ ಹಿಡಿದು ಸ್ನಾತಕೋತ್ತರ ಪದವೀಧರರವರೆಗೆ ಎಲ್ಲರಿಗೂ ಅವರವರ ಅರ್ಹತೆಗೆ ತಕ್ಕಂತೆ ಅವಕಾಶಗಳ ಮಹಾಪೂರವೇ ಇತ್ತು. ಅನೇಕ ಅಭ್ಯರ್ಥಿಗಳು ಸಂದರ್ಶನ ಮುಗಿಸಿ ಸ್ಥಳದಲ್ಲಿಯೇ ನೇಮಕಾತಿ ಪತ್ರ ಪಡೆದು ಸಂಭ್ರಮಿಸಿದ ದೃಶ್ಯಗಳು ಮೇಳದ ಯಶಸ್ಸನ್ನು ಸಾರಿದವು.
"

ನಾನು ಬಿಎ ಮುಗಿಸಿದ್ದೇನೆ. ಎಲ್ಲ ಕಡೆ ಕೆಲಸ ಹುಡುಕುತ್ತಿದ್ದೆ. ಆದರೆ, ಎಲ್ಲಿಯೂ ಸಿಕ್ಕಿರಲಿಲ್ಲ. ಸರ್ಕಾರದಿಂದ ನಡೆಯುತ್ತಿರುವ ಉದ್ಯೋಗ ಮೇಳದಲ್ಲಾದರೂ ಸಿಗಬಹುದು ಎಂಬ ಆಕಾಂಕ್ಷೆಯಿಂದ ಬಂದಿದ್ದೇನೆ. ಇಂತಹ ಮೇಳಗಳನ್ನು ಆಯೋಜಿಸುವುದು ಒಳ್ಳೆಯದು.

"

ರಾಜ್ಯ ಸರ್ಕಾರವು ನಿರುದ್ಯೋಗ ನಿವಾರಣೆಗಾಗಿ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದ್ದು, ಯುವಜನರ ಭವಿಷ್ಯಕ್ಕೆ ಆಸರೆಯಾಗುತ್ತಿದೆ. 2023ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡಲು ಈ ಯೋಜನೆಯಡಿ ನಿರುದ್ಯೋಗ ಭತ್ಯೆ ವಿತರಿಸಲಾಗುತ್ತಿದೆ. ನಿರುದ್ಯೋಗಿಗಳು ಇಂತಹ ಮೇಳಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಬೇಕು.

"

ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೆಐಎಡಿಬಿ ಅಡಿಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ಸ್ಥಾಪಿಸಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹೆಚ್ಚಾಗಿ ಸ್ಥಾಪನೆಯಾದಲ್ಲಿ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net