ಕ್ಯಾಬಿನೆಟ್‌ನಲ್ಲಿ ಚರ್ಚೆ ದೆಹಲಿಗೆ ನಿಯೋಗ

ವಿಜಯಪುರ ನಗರದ ಗಗನ ಮಹಲ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿ ಮಾತನಾಡಿದರು.  ಜಿಲ್ಲಾಧಿಕಾರಿ ಆನಂದ ಕೆ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಮತ್ತಿತರರಿದ್ದಾರೆ.
ವಿಜಯಪುರ ನಗರದ ಗಗನ ಮಹಲ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿ ಮಾತನಾಡಿದರು. ಜಿಲ್ಲಾಧಿಕಾರಿ ಆನಂದ ಕೆ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ. ಪಾಟೀಲ ಭರವಸೆ
  • ಕಬ್ಬು ಬೆಳೆಗಾರರ ಹಿತ ಕಾಯಲು ಸಿದ್ಧ
ವಿಜಯಪುರ: ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನ. 6ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದಲ್ಲದೇ ಕೇಂದ್ರ ಸರ್ಕಾರದ ಬಳಿ ನಿಯೋಗ ಕೂಡ ಕೊಂಡೊಯ್ಯಲಾಗುವುದೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಇರುವ ಗಗನ ಮಹಲ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರ ಸಮನಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಮತ್ತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ದೂರದೇ ಒಟ್ಟಾಗಿ ಸಮಸ್ಯೆ ಪರಿಹರಿಸಬೇಕು ಎಂದ ಎಂ.ಬಿ. ಪಾಟೀಲರು, ಕೇಂದ್ರ ಸರ್ಕಾರ ಈಗಾಗಲೇ ಟನ್ ಕಬ್ಬಿಗೆ 3,550 ರೂಪಾಯಿ ಘೋಷಣೆ ಮಾಡಿದೆ. ಆದರೆ, ಇಳುವರಿ ಆಧರಿಸಿ ಕಬ್ಬಿನ ದರ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಲಿದೆ. ಕೆಲವು ಕಾರ್ಖಾನೆಗಳು ಹಳೆಯದಾಗಿದ್ದು ಸಾಲದ ಸುಳಿಯಲ್ಲಿದ್ದರೆ ಇನ್ನೂ ಕೆಲವು ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದ ಕೇಂದ್ರ ಸರ್ಕಾರ ಇದೀಗ ಕೇವಲ ಶೇ. 40ರಷ್ಟು ಮಾತ್ರ ಖರೀದಿ ಮಾಡುತ್ತಿದೆ. ಹೀಗಾಗಿ 100ಕ್ಕೆ 100ರಷ್ಟು ಎಥೆನಾಲ್ ಖರೀದಿಯಾಗುವಂತಾಗಬೇಕು. ಅಂದಾಗ ಕಾರ್ಖಾನೆಗಳು ರೈತರಿಗೆ ಉತ್ತಮ ದರ ನೀಡಲು ಸಾಧ್ಯ ಎಂದರು.
ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರ್ಕಾರ ರೈತರ, ಬಡವರ ಪರ ಇದೆ. ಕಬ್ಬು ಬೆಳೆಗಾರರ ಹಿತ ಕಾಪಾಡಲು ಸಿದ್ಧವಿದೆ. ಈ ಹಿಂದೆ ಪ್ರಕಾಶ ಹುಕ್ಕೇರಿ ಸಕ್ಕರೆ ಸಚಿವರಾಗಿದ್ದಾಗ ಯಾವ ಸರ್ಕಾರವೂ ಕೊಡದ ರೀತಿ ಕಬ್ಬಿಗೆ ಬೆಂಬಲ ಬೆಲೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಕೂಡ ಮುತುವರ್ಜಿ ವಹಿಸಬೇಕಿದ್ದು, ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ. ಕಳೆದ ಒಂಬತ್ತು ವರ್ಷಗಳಿಂದ ಸಕ್ಕರೆಯ ಎಂಆರ್‌ಪಿ ಪರಿಷ್ಕರಣೆಯಾಗಿಲ್ಲ. ಹೀಗಾಗಿ ಎಂಆರ್‌ಪಿ ಪರಿಕ್ಷರಣೆಗೊಳಿಸಬೇಕಲ್ಲದೆ ರೈತರು ಉತ್ಪಾದಿಸಿದ ಎಥೆನಾಲ್ ಖರೀದಿಸುವಂತೆ ಒತ್ತಾಯಿಸಬೇಕು. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರಧಾನಮಂತ್ರಿ ಹಾಗೂ ಕೇಂದ್ರ ಸಕ್ಕರೆ ಸಚಿವ ಶಿವರಾಜ್‌ಸಿಂಗ್ ಚವಾಣ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಲಿದ್ದಾರೆ ಎಂದರು.
ರೈತ ಮುಖಂಡ ಪಂಚಪ್ಪ ಕಲಬುರಗಿ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಸಮಸ್ಯೆ ಪರಿಹರಿಸಲು ಈವರೆಗೆ ಪ್ರಯತ್ನ ಮಾಡಿದ ಉದಾಹರಣೆಯೇ ಇಲ್ಲ. ಆಳುವ ವರ್ಗ ಕಾರ್ಖಾನೆಗಳ ಸ್ಥಿತಿಗತಿ ಬಗ್ಗೆ ಮಾತ್ರ ಗಮನ ಹರಿಸುತ್ತಿವೆ. ರೈತರ ಉತ್ಪಾದನೆ ವೆಚ್ಚವನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸದ್ಯಕ್ಕೆ ಕಬ್ಬು ಬೆಳೆಗಾರರ ಸಮಸ್ಯೆಗೆ ತುರ್ತು ಪರಿಹಾರದ ಜೊತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕಾರ್ಖಾನೆಗಳಿಗೆ ತುರ್ತಾಗಿ ಕಬ್ಬು ರವಾನಿಸುವ ಕೆಲಸವಾಗಬೇಕು. ಕಾರ್ಖಾನೆಗಳಿಂದ ದರ ಘೋಷಣೆ ಜೊತೆಗೆ ಸರ್ಕಾರ ಕೂಡ ಬೆಂಬಲ ಬೆಲೆ ದೊರಕಿಸಿಕೊಡಬೇಕೆಂದರು.
ಮುಖಂಡ ಸಂಗಮೇಶ ಸಗರ ಮಾತನಾಡಿ, ಸಕ್ಕರೆ ಕಾಯ್ದೆ ಪ್ರಕಾರ 14 ದಿನದಲ್ಲಿ ಕಬ್ಬು ಬೆಳೆಗಾರರಿಗೆ ಬಿಲ್‌ ಪಾವತಿಯಾಗಬೇಕು. ಹಾಗೊಂದು ವೇಳೆ 14 ದಿನದಲ್ಲಿ ಬಿಲ್ ಪಾವತಿಸದೇ ಹೋದರೆ ಶೇ. 15ರಷ್ಟು ಬಡ್ಡಿ ವಿಧಿಸಿ ಹಣ ಕೊಡಿಸಬೇಕು. ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ 3,500 ರೂಪಾಯಿ ದರ ನೀಡಬೇಕು. ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರಸ್ತೆಗಳು ಹಾಳಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಹಕ್ಕೊತ್ತಾಯ ಮಂಡಿಸಿದರು.
ಕಾರ್ಮಿಕ ಹೋರಾಟಗಾರ ಅಪ್ಪಾಸಾಹೇಬ ಯರನಾಳ ಮಾತನಾಡಿದರು.
ಜಿಲ್ಲಾಧಿಕಾರಿ ಆನಂದ ಕೆ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, -ಫಯಾಜ್ ಕಲಾದಗಿ, ರಾಹುಲ್‌ ಕುಬಕಡ್ಡಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net