ಚನ್ನರಾಯಪಟ್ಟಣ: ಹಿರೀಸಾವೆ-ಜುಟ್ಟನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಬಹುತೇಕ ಕೆರೆಗಳಿಗೆ ಇನ್ನೂ ನೀರು ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಿಡಿಸಿ ಶನಿವಾರ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಶನಿವಾರ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಿರೀಸಾವೆ ಶ್ರವಣಬೆಳಗೊಳ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳ ಕೆರೆಗಳಿಗೆ ನೀರು ಹರಿಸಬೇಕಿದ್ದರೂ, ಕಳೆದ 15 ದಿನಗಳಿಂದ ಕೆಲವೇ ಕೆರೆಗಳಿಗೆ ನೀರು ಹರಿಯುತ್ತಿದ್ದು, ಯೋಜನೆಯಡಿ ಬರುವ ಬಹುತೇಕ ಕೆರೆಗಳಿಗೆ ನೀರು ತಲುಪಿಲ್ಲ. ಶೀಘ್ರ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯೋಜನೆಯ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳಿಗೂ ಅವುಗಳ ಅಚ್ಚುಕಟ್ಟು ಪ್ರದೇಶಕ್ಕೆ ಅನುಗುಣವಾಗಿ ನ್ಯಾಯಯುತವಾಗಿ ನೀರು ಹಂಚಿಕೆ ಮಾಡಬೇಕು. ಆದರೆ ಯೋಜನೆಯಡಿ ಬರುವ ಕೆರೆಗಳನ್ನು ಕಡೆಗಣಿಸಿ ಬೇರೆ ಕೆರೆಗಳಿಗೆ ನೀರು ಹರಿಸಿ, ಯೋಜನೆಯಡಿ ಬರುವ ಕೆರೆಗಳನ್ನು ಕಡೆಗಣಿಸಿರುವುದರಿಂದ ನೀರು ತಲುಪದ ಗ್ರಾಮಗಳ ರೈತರಿಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು.
ಏತ ನೀರಾವರಿ ನೀರನ್ನು ಅಧಿಕಾರಿಗಳು ಕ್ರಮಬದ್ಧವಾಗಿ ಹಾಗೂ ಅಚ್ಚುಕಟ್ಟು ಪ್ರದೇಶದ ಆಧಾರದ ಮೇಲೆ ಹಂಚಿಕೆ ಮಾಡದಿರುವುದರಿಂದ ಅಕ್ಕಪಕ್ಕದ ಗ್ರಾಮಗಳ ರೈತರ ನಡುವೆ ನೀರಿನ ವಿಚಾರವಾಗಿ ಅಸಮಾಧಾನ ಮತ್ತು ಗೊಂದಲ ನಿರ್ಮಾಣವಾಗಿದೆ. ಎಲ್ಲರೂ ರೈತರೇ. ಎಲ್ಲ ಕೆರೆಗಳಿಗೂ ಸಮರ್ಪಕವಾಗಿ ನೀರು ಹಂಚಿಕೆ ಮಾಡಬೇಕು. ಯಾವುದೇ ಗ್ರಾಮದ ರೈತರಿಗೆ ಅನ್ಯಾಯವಾಗಬಾರದು. ಅಧಿಕಾರಿಗಳು ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು. ಯೋಜನೆಯಡಿ ಬರುವ ಕೆರೆಗಳಿಗೆ ಮೊದಲ ಆದ್ಯತೆ ನೀಡಿ ನೀರು ಹರಿಸಬೇಕು. ಇಲ್ಲದಿದ್ದರೆ, ನೀರಾವರಿ ಇಲಾಖೆ ಕಚೇರಿ ಮುಂಭಾಗ ನಮ್ಮ ಹಕ್ಕಿನ ನೀರಿಗಾಗಿ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಿರೀಸಾವೆಯಲ್ಲಿ ನಡೆದ ಪ್ರತಿಭಟನೆ ವೇಳೆ ಎರಡು ದಿನದಲ್ಲಿ ನೀರು ಹರಿಸುತ್ತೇವೆ ಎಂದು ಆಶ್ವಾಸನೆ ನೀಡಿ ಇದುವರೆಗೆ ನೀರು ಹರಿಸಲು ಕ್ರಮ ಕೈಗೊಂಡಿಲ್ಲ. ಕೂಡಲೇ ನೀರು ಹಂಚಿಕೆಯಲ್ಲಿನ ಗೊಂದಲ ನಿವಾರಿಸಿ, ಯೋಜನೆಯಡಿ ಬರುವ ಎಲ್ಲ ಕೆರೆಗಳಿಗೂ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕಾವೇರಿ ನೀರಾವರಿ ನಿಗಮದ ಇಇ ದೀಪು ಮಾತನಾಡಿ, ಮುಂದಿನ ಎರಡು ದಿನಗಳೊಳಗೆ ಯೋಜನೆಯ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳಿಗೂ ನೀರು ಹರಿಸಲು ಅಗತ್ಯ ಕ್ರಮ ಕೈಗೊಂಡು, ನೀರು ಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಕಾರ್ಯದರ್ಶಿ ಎಂ.ಎಲ್. ಹರೀಶ್, ತಾಲೂಕು ಅಧ್ಯಕ್ಷ ರಾಮಚಂದ್ರ, ತಾಲೂಕು ಗೌರವಾಧ್ಯಕ್ಷ ಸೋಮೇಗೌಡ, ಉಪಾಧ್ಯಕ್ಷ ಕೆ.ಎಂ. ಮುರಳಿ ಗೌಡ, ಕಾರ್ಯದರ್ಶಿ ಗೋವಿಂದ, ರೈತ ಮುಖಂಡರಾದ ಕುಮಾರ್ ಹೊಸೂರು, ರಮೇಶ್, ರಂಗಸ್ವಾಮಿ, ಶಿವರಾಮು, ಮಂಜು, ಪುಟ್ಟಸ್ವಾಮಿ ಇತರರು ಇದ್ದರು.