ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ?

ಅರುಣಕುಮಾರ್ ಬಡಿಗೇರ ಮತ್ತು ಭಾಗ್ಯಶ್ರೀ
ಅರುಣಕುಮಾರ್ ಬಡಿಗೇರ ಮತ್ತು ಭಾಗ್ಯಶ್ರೀ
Published on

ಪ್ರಮುಖ ಮುಖ್ಯಾಂಶಗಳು

  • ಊಟದಲ್ಲಿ ನಿದ್ದೆ ಮಾತ್ರೆ ನೀಡಿ ಉಸಿರುಗಟ್ಟಿಸಿ ಕೊಲೆ ಆರೋಪ
  • ಮೊಬೈಲ್‌ನಿಂದ ಬಯಲಾಯಿತು ನೀಚ ಕೃತ್ಯ
ಇಂಡಿ: ಕೈಹಿಡಿದ ಪತ್ನಿಯೇ ಪ್ರಿಯಕರನ ಮಾತು ಕೇಳಿ ತನ್ನ ಗಂಡನಿಗೆ ಊಟದಲ್ಲಿ ನಿದ್ದೆ ಮಾತ್ರೆ ನೀಡಿ, ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕಿತ ಪ್ರಕರಣವೊಂದು ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ವಿವರ: ಪಟ್ಟಣದಲ್ಲಿ ಮೇ 6ರ ಮುಂಜಾನೆ ಅರುಣಕುಮಾರ್ ಬಡಿಗೇರ (28) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪತಿಯನ್ನು ಕಳೆದುಕೊಂಡ ಪತ್ನಿ ಭಾಗ್ಯಶ್ರೀ ಕಣ್ಣೀರು ಹಾಕುತ್ತಾ ಎಲ್ಲರನ್ನೂ ನಂಬಿಸಿದ್ದಳು. ಅಷ್ಟೇ ಅಲ್ಲ, ಯಾರೂ ಶಂಕಿಸದಂತೆ ಯಾವುದೇ ವೈದ್ಯಕೀಯ ಪರೀಕ್ಷೆ ನಡೆಸದೇ ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು.
ಅರುಣಕುಮಾರ್ ಸಾವು ಕೇವಲ ಒಂದು ದುರಂತ ಅಂತ್ಯ ಎಂದೇ ಕುಟುಂಬದವರೆಲ್ಲರೂ ಭಾವಿಸಿದ್ದರು. ಆದರೆ ಕಳೆದೊಂದು ತಿಂಗಳಿನಿಂದ ಭಾಗ್ಯಶ್ರೀಯ ನಡವಳಿಕೆಯಲ್ಲಿ ಕುಟುಂಬಸ್ಥರಿಗೆ ಸಣ್ಣದೊಂದು ಅನುಮಾನ ಮೂಡತೊಡಗಿತ್ತು. ಆ ಅನುಮಾನದ ಬೆನ್ನತ್ತಿದ ಮೃತನ ಸಹೋದರಿ ಮತ್ತು ಕುಟುಂಬದವರು ಆಕೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಬೆಚ್ಚಿ ಬೀಳುವ ಸತ್ಯ ಸಂಗತಿ ಹೊರಬಿದ್ದಿದೆ.
ಭಾಗ್ಯಶ್ರೀ ಮೂಲತಃ ಅಜಲಪೂರ ತಾಲೂಕಿನ ಮಣೂರ ಗ್ರಾಮದವಳಾಗಿದ್ದು, ತನ್ನ ಕಾಲೇಜು ದಿನಗಳ ಕ್ಲಾಸ್‌ಮೇಟ್ ದೀಪಕ್ ನಾವಾದಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾದ ಫೋನ್‌ನಲ್ಲಿ ಚಾಟಿಂಗ್ ಇತಿಹಾಸ, ಮಾತನಾಡಿದ್ದ ಮಾತುಗಳು ರೆಕಾರ್ಡ್ ಆಗಿದ್ದು ಮತ್ತು ಪ್ರಿಯಕರನೊಂದಿಗೆ ಮಾಡಿದ್ದ ವಿಡಿಯೋ ಕಾಲ್‌ಗಳ ಸ್ಕ್ರೀನ್‌ಶಾಟ್‌ಗಳು ಅರುಣಕುಮಾರ್ ಸಾವಿನ ಅಸಲಿ ರಹಸ್ಯವನ್ನು ಬಿಚ್ಚಿಡಲು ಸಹಾಯವಾಗಲಿವೆ. ಅಸಲಿಗೆ ಅದು ಹದಯಾಘಾತವಾಗಿಲ್ಲದೆ ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದ ಕೊಲೆಯಾಗಿದೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.
ಈ ಅಕ್ರಮ ಮೋಹಕ್ಕೆ ಪತಿ ಅರುಣಕುಮಾರ್ ಅಡ್ಡಿಯಾಗಿದ್ದ. ಪ್ರಿಯಕರನೊಂದಿಗೆ ಒಂದಾಗಲು ಸಂಚು ರೂಪಿಸಿದ್ದ ಭಾಗ್ಯಶ್ರೀ ಮೇ 5ರ ರಾತ್ರಿ ಪತಿಗೆ ಊಟದಲ್ಲಿ ನಿದ್ರೆ ಮಾತ್ರೆ ನೀಡಿದ್ದಳು. ಮೇ 6ರ ಮುಂಜಾನೆ ಪತಿ ಗಾಢ ನಿದ್ರೆಯಲ್ಲಿದ್ದಾಗ ಉಸಿರುಗಟ್ಟಿಸಿ ಜೀವ ತೆಗೆದಿದ್ದಾಳೆ ಎಂಬ ಗಂಭೀರ ಆರೋಪ ಕುಟುಂಬಸ್ಥರಿಂದ ವ್ಯಕ್ತವಾಗಿದೆ. ಈ ಘೋರ ಕತ್ಯದ ಸಂಪೂರ್ಣ ವಿವರಗಳು ಮೊಬೈಲ್ ಚಾಟಿಂಗ್ ಮೂಲಕ ಅಕಸ್ಮಾತ್ ಆಗಿ ಕುಟುಂಬದವರ ಕೈಗೆ ಸಿಕ್ಕಿಬಿದ್ದಿವೆ. ಇದೀಗ ಈ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಜುಲೈ 19ರಂದು ಮತನ ಕುಟುಂಬಸ್ಥರು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿ ಪತ್ನಿ ಭಾಗ್ಯಶ್ರೀಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ಸಜ್ಜಾಗುತ್ತಿದ್ದಾರೆ. ಪತಿಯನ್ನೇ ಅಕ್ರಮ ಸಂಬಂಧಕ್ಕಾಗಿ ನಿದ್ದೆ ಮಾತ್ರೆ ನೀಡಿ ಕೊಲೆ ಮಾಡಿದ ಬಗ್ಗೆ ಆರೋಪ ಕೇಳಿ ಬಂದಿದ್ದು, ಈ ಪ್ರಕರಣ ಇಡೀ ಇಂಡಿ ಪಟ್ಟಣವನ್ನು ಅಚ್ಚರಿಗೆ ದೂಡಿದೆ.
"

ನನ್ನ ಸಹೋದರನಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಇರಲಿಲ್ಲ. ಒಮ್ಮೆಲೆ ಹದಯಾಘಾತವಾಗಿದೆ ಎಂದು ಆತನ ಪತ್ನಿ ಭಾಗ್ಯಶ್ರೀ ತಿಳಿಸಿದ್ದಳು. ಎಲ್ಲರೂ ಅವಳ ಮಾತನ್ನೇ ನಂಬಿಕೊಂಡು ಸಹೋದರ ಅರುಣ್‌ಕುಮಾರ್ ಆತನಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸದೆ ಅಗ್ನಿಸ್ಪರ್ಶ ಮಾಡಲಾಗಿತ್ತು. ಎರಡು ತಿಂಗಳ ನಂತರ ಮೊಬೈಲ್‌ನಲ್ಲಿ ಚಾಟಿಂಗ್, ವಿಡಿಯೋ ಕರೆ ಮಾಡಿದ್ದು ಗೊತ್ತಾಗಿದೆ. ಆಕೆಯೇ ನನ್ನ ಸಹೋದರನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಅವಳನ್ನು ಕೂಡಲೇ ಪೊಲೀಸರು ಬಂಧಿಸಿ ನನ್ನ ಸಹೋದರನ ಸಾವಿಗೆ ನ್ಯಾಯ ನೀಡಬೇಕು.

ಅಶ್ವಿನಿ ಸುತಾರಮತನ ಸಹೋದರಿ.

ಈಗಾಗಲೇ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತನ ಪತ್ನಿಯನ್ನು ಶೀಘ್ರವೇ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತೇವೆ. ದಾಖಲೆಗಳ ಆಧಾರದ ಮೇಲೆ ಸತ್ಯಾಸತ್ಯತೆ ಹೊರಬರಲಿದೆ.

ಸದಾಶಿವ ಕಟ್ಟಿಮನಿಡಿವೈಎಸ್‌ಪಿ ಇಂಡಿ ಉಪವಿಭಾಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net