_1783188946006.webp?w=480&auto=format%2Ccompress&fit=max)
_1783188946006.webp?w=480&auto=format%2Ccompress&fit=max)
‘ಕರ್ನಾಟಕ ಪ್ರಹಸನ ಪಿತಾಮಹ, ಕನ್ನಡಕ್ಕೊಬ್ಬರೇ ಕೈಲಾಸಂ’ ಎಂದೆಲ್ಲ ಖ್ಯಾತಿಯ ಟಿ.ಪಿ. (ತ್ಯಾಗರಾಜ ಪರಮಶಿವ) ಕೈಲಾಸಂ ಬರೆದ ಕೋಳಿಕೆರಂಗ ಹಾಡು ಅತಿಪ್ರಸಿದ್ಧ. ಅದನ್ನವರು ಇಂಗ್ಲೆಂಡ್ನಲ್ಲಿದ್ದಾಗ ಸಂಗೀತಸಂಜೆ ಕಾರ್ಯಕ್ರಮವೊಂದರಲ್ಲಿ ಪಾಶ್ಚಾತ್ಯ ಹಾಡುಗಾರನ ಸವಾಲಿಗೆ ಉತ್ತರವಾಗಿ ಸ್ಥಳದಲ್ಲೇ ರಚಿಸಿ ಹಾಡಿದರೆಂದು ಪ್ರತೀತಿ. ಹಾಗಲ್ಲದೆ, ಬೆಂಗಳೂರಿನಲ್ಲೇ ‘ವಸಂತಸೇನೆ’ ಚಿತ್ರೀಕರಣದ ಸಂದರ್ಭದಲ್ಲಿ ಒಮ್ಮೆ ಸಹನಟರೊಡನೆ ತಡರಾತ್ರಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಆಂಗ್ಲೇಯರ ಮನೆಕಿಟಕಿಯಿಂದ ಗ್ರಾಮೊಫೋನ್ನಲ್ಲಿ ಕೇಳಿಬಂದ ಹಾಡಿನಿಂದ ಪ್ರೇರಿತರಾಗಿ ತತ್ಕ್ಷಣವೇ ರಚಿಸಿ ಹಾಡಿದರೆಂದು ಕೂಡ ಕೆಲವರೆನ್ನುತ್ತಾರೆ. ಏನಿದ್ದರೂ ಅದು ಸಿಕ್ಕಾಪಟ್ಟೆ ಪ್ರಖ್ಯಾತವಾದದ್ದು ಹೌದು. ಮೂಲ ಇಂಗ್ಲಿಷ್ ಹಾಡು ‘ಕಾಆಆನ್ಸ್ಟೇಂಟಿನೋಪಲ್... ಸಿ ಒ ಎನ್ಎಸ್ಟಿ ಎಎನ್ಟಿ ಐಎನ್ಒ ಪಿಎಲ್ಈ... ಯೂಸ್ ಯುವರ್ ಪ್ಲಕ್ ಏಂಡ್ ಟ್ರೖೆ ಯುವರ್ ಲಕ್ ಏಂಡ್ ಸಿಂಗ್ ಎಲಾಂಗ್ ವಿದ್ ಮೀ...’ ಎಂದು ವಿಚಿತ್ರ ರೀತಿಯದು. Constantinople (ಈಗಿನ ಇಸ್ತಾಂಬುಲ್) ಹೆಸರಿನ ಸ್ಪೆಲ್ಲಿಂಗ್ ಬಿಡಿಸಿದಾಗ ಸಿ ಒ ಎನ್ಎಸ್ಟಿ ಎಎನ್ಟಿ ಐಎನ್ಒ ಪಿಎಲ್ಈ ಆಗುವುದು. ಅದನ್ನನುಸರಿಸಿ ಅದೇ ಧಾಟಿಯಲ್ಲಿ ಕೈಲಾಸಂ ‘ನಾನು ಕೋಳಿಕೆರಂಗ... ಕೋನು ಳಿನು ಕೆನು ರನು ಸೊನ್ನೆ ಗ...’ ಎಂದು ಹಾಡಿದರು. ಕಾನ್ಸ್ಟೇಂಟಿನೋಪಲ್ ಪದದ ಸ್ಪೆಲ್ಲಿಂಗ್ ಬಿಡಿಸಿದಂತೆಯೇ ಕೋಳಿಕೆರಂಗ ಎಂಬ ಪದದ ಒಂದೊಂದು ಅಕ್ಷರವನ್ನೂ ಬಿಡಿಸಿ ಹೇಳಿದರು.
Spelling ಅಂದರೆ ಅದೇ, Action of reading letter by letter ಎಂದರ್ಥ. ಇಂಗ್ಲಿಷ್ನಲ್ಲಿ ಸಾಮಾನ್ಯವಾಗಿ ಪದದ ಉಚ್ಚಾರದಿಂದ ಅದು ಯಾವ್ಯಾವ ಅಕ್ಷರಗಳು ಸೇರಿ ಆಗಿರುವುದೆಂದು ತಿಳಿಯುವುದು ಕಷ್ಟ. ಅದಕ್ಕೆಂದೇ ಸ್ಪೆಲ್ಲಿಂಗ್ ಕ್ರಮ ಇರುವುದು. ಆದ್ದರಿಂದಲೇ ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳಲು ಹೆಣಗಾಡುವುದು. ಆದ್ದರಿಂದಲೇ Spell bee ರೀತಿಯ ಜಾಗತಿಕ ಸ್ಪರ್ಧೆಗಳಿರುವುದು. ಕನ್ನಡದಲ್ಲಿ, ಬಹುತೇಕ ಭಾರತೀಯ ಭಾಷೆಗಳಲ್ಲಿ, ಆ ಸಮಸ್ಯೆಯಿಲ್ಲ. ನಾವು ಬರೆದಂತೆಯೇ ಉಚ್ಚರಿಸುತ್ತೇವೆ; ಉಚ್ಚರಿಸಿದಂತೆಯೇ ಬರೆಯುತ್ತೇವೆ. ಹಾಗಾಗಿ ನಮಗೆ ಸ್ಪೆಲ್ಲಿಂಗ್ನ ಅಗತ್ಯವಿಲ್ಲ. ಆದರೆ ಇಂಗ್ಲಿಷ್ ಸಂದರ್ಭದ Spelling ಅನ್ನೋದಕ್ಕೆ- ಉದಾಹರಣೆಗೆ ‘Elephent ಪದದ ಸ್ಪೆಲ್ಲಿಂಗ್ ಏನು?’ ಎಂಬ ಪ್ರಶ್ನೆಯಲ್ಲಿ ಸ್ಪೆಲ್ಲಿಂಗ್ಗೆ ಬದಲಾಗಿ- ಕನ್ನಡದ್ದೊಂದು ಪದ ಅಗತ್ಯವಿದೆ. ಅತ್ಯಧಿಕ ಸಂಖ್ಯೆಯಲ್ಲಿ ‘ಕಾಗುಣಿತ’ ಎಂಬ ಪದವನ್ನೇ ಸೂಚಿಸಿದ ಪ್ರವೇಶಿಕೆಗಳು ಬಂದಿವೆ. ಈಗಾಗಲೇ ಬಳಕೆಯಲ್ಲಿರುವಾಗ ಹೊಸತೇಕೆ ಬೇಕು ಎಂದು ಕೂಡ ಕೇಳಿದವರಿದ್ದಾರೆ. ಆದರೆ ಸ್ಪೆಲ್ಲಿಂಗ್ಗೆ ಕಾಗುಣಿತ ಸಮಾನಾರ್ಥಕವೇ? ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲವೆಂದು ಗೊತ್ತಾಗುತ್ತದೆ. ಮೇಲೆ ವಿವರಿಸಿದಂತೆ Spelling ಅಂದರೆ ಯಾವ್ಯಾವ ಅಕ್ಷರಗಳು ಸೇರಿ ಪದ ಆಗಿದೆಯೆಂದು ತಿಳಿಸುವುದು. ಕಾಗುಣಿತ ಅಂದರೆ ಒಂದೊಂದು ಅಕ್ಷರವೂ ಹೇಗೆ ರಚನೆಯಾಗಿದೆಯೆಂದು ತಿಳಿಸುವುದು. ‘ಕ ತಲೆಕಟ್ಟು ಕ, ಕ ಗ್ ಇಳಿ ಕಾ, ಕ ಗುಡ್ಸು ಕಿ, ಕ ಗುಡ್ಸಿನ್ದೀರ್ಘ ಕೀ...’ ಎನ್ನುತ್ತೇವಲ್ಲ ಅದು ಕಾಗುಣಿತ. ಇಂಗ್ಲಿಷ್ (ರೋಮನ್) ಅಕ್ಷರಗಳ ಸಂರಚನೆಯಲ್ಲಿ ತಲೆಕಟ್ಟು, ಇಳಿ, ಗುಡಿಸು, ಕೊಂಬು, ದೀರ್ಘ ಮುಂತಾಗಿ ಬಿಡಿಭಾಗಗಳ ಜೋಡಣೆಯಿಲ್ಲ. ಆದ್ದರಿಂದ ಅಲ್ಲಿ ಕಾಗುಣಿತ ಅಪ್ರಸ್ತುತ. Spellig mistake ಎನ್ನುವುದಕ್ಕೆ ಕಾಗುಣಿತ ದೋಷ ಎನ್ನುತ್ತೇವಾದರೂ ಅದು ಅಷ್ಟೊಂದು ಸಮರ್ಪಕವಲ್ಲ.
ಹಾಗಾದರೆ ಸ್ಪೆಲ್ಲಿಂಗ್ಗೆ ಪರ್ಯಾಯಪದ ಯಾವುದು? ಪದದ ಅಕ್ಷರಗಳನ್ನೆಲ್ಲ ತಿಳಿಸುವುದರಿಂದ ‘ಪದಾಕ್ಷರ’ ಸೂಕ್ತವೆನ್ನುವವರು: ಶ್ವೇತಾ ಜಿ.ಎಸ್., ಸೀತಾರಾಮ ರಾವ್, ಸುಬ್ಬಣ್ಣ ಎನ್.ಕೆ., ಜಯಲಕ್ಷ್ಮಿ ಬೆಂಗಳೂರು, ಸಿಂಹ ಕೆ.ಎಸ್., ಸೋಮಶೇಖರ ಸೋಮೇಶ್ವರಪುರ, ಎಂ.ಮಹೇಶ್, ಎಂ.ಟಿ. ಉಪಾಧ್ಯ, ಚೇತನ್ ಬೆಂಗಳೂರು, ಶೈಲಜಾ ಮೋಹನ್, ವಸಂತಕುಮಾರ್ ಕಲ್ಯಾಣಿ, ನರಸಿಂಹಯ್ಯ ಬಾಳಿಲ, ಶ್ಯಾಮರಾಜ ಉಡುಪ, ಎಸ್.ಪದ್ಮಾವತಿ, ಮಮತಾ ಕುಂದಾಪುರ ಮತ್ತು ಮಿಸ್ಕಿನ್ ಕುಟುಂಬ ಸದಸ್ಯರು. ‘ಪದಬರಿಗೆ’ ಆಗಬಹುದೆಂದವರು: ವಿಶ್ವಜ್ಯೋತಿ ಶಿವಮೊಗ್ಗ, ನಂದಾ ಕುಲಕರ್ಣಿ, ಗೋಪಾಲ ಜೋಶಿ, ಎನ್. ದತ್ತಾತ್ರೇಯ, ಸಿದ್ದನಗೌಡ ಮುದಿಗೌಡ್ರ, ಎಂ.ಕೆ. ಬದರಿನಾಥ್, ಶ್ರೀಕಾಂತ ಗೋಡಖಿಂಡಿ, ರಘುಪತಿ ಕೆ.ಸಿ., ವಿಲಾಸ ಹುದ್ದಾರ್, ಉಮಾ ಪ್ರಭು, ಜಿ. ನಾರಾಯಣರಾವ್, ಡಾ.ದಯಾನಂದ ಭಟ್ಟ, ನರೇಂದ್ರನಾಥ ಎಚ್.ಎಂ., ಕೃಷ್ಣ ಎಸ್. ಕುಲಕರ್ಣಿ, ಪ್ರತಿಭಾ ಮಯ್ಯ ಮುಂತಾದವರು. ‘ಪದಕ್ರಮ’ (ಸೌಮ್ಯಾ ಹಿಮಗಿರೀಶ್), ‘ಪದವಿವರ’ (ರೂಪಕಲಾ ಸದಾನಂದ), ‘ವರ್ಣಬಂಧ’ (ನರಸಿಂಹ ಪ್ರಸಾದ), ‘ವರ್ಣಕ್ರಮ’ (ಮಹಾಬಲೇಶ್ವರ ಹೆಗಡೆ), ‘ಶಬ್ದಾಕ್ಷರ’ (ವಿಶುಕುಮಾರ್, ಕೃಷ್ಣದಾಸ ತಂತ್ರಿ, ಸುನೀತಾ ನಿರಂಜನ), ‘ಅಕ್ಷರಜೋಡಣೆ’ (ರಾಜಲಕ್ಷ್ಮಿ ಮೈಸೂರು, ಶಂಭು ಇರಾಣಿ, ಸುಜಯ ಕೊಣ್ಣೂರ್, ಗಣೇಶ ಭಟ್, ಮಾಲತಿ ಬಿ.ಟಿ., ಪ್ರಭಾಕರ ರಾವ್, ಉಮೇಶ ಪ್ರಭು, ನಾಗೇಶ ಫಾಟಕ್, ಗಂಗಾ ಹೆಗಡೆ, ರಶ್ಮಿ ರಾಜೇಂದ್ರ) ಕೂಡ ಅಕ್ಷರಗಳು ಸೇರಿ ಪದ ಆಗಿರುವುದನ್ನು ಸೂಚಿಸುವುದರಿಂದ ಯೋಗ್ಯವಾಗಿವೆ. ಹಾಗೆ ನೋಡಿದರೆ ‘ಕಾಗುಣಿತ’ ಸಹ ತಪ್ಪೇನಲ್ಲ, ಆದರೆ ಪದದಲ್ಲಿ ಪ್ರತ್ಯೇಕ ಅಕ್ಷರವೂ ಹೇಗೆ ರಚನೆಯಾಗಿದೆಯೆಂಬಷ್ಟು ವಿವರಗಳು ಅಪೇಕ್ಷಿತವಿಲ್ಲ ಅಂತಷ್ಟೇ. ಅಂದಹಾಗೆ ಕೈಲಾಸಂ ಆ ಹಾಡಿನಲ್ಲಿ ‘ಕೋನು ಳಿನು ಕೆನು ರನು ಸೊನ್ನೆ ಗ’ ಎಂದು ಪದಾಕ್ಷರಗಳನ್ನೂ ತಿಳಿಸಿದ್ದಾರೆ; ಮುಂದುವರಿದು ‘ಕಕೋತ್ವ ಳಿ ಕಕೆತ್ವ ರ ಮತ್ತ್ ಸೊನ್ನೆಯೂನು ಗ...’ ಎಂದು ಕಾಗುಣಿತವನ್ನೂ ತಿಳಿಸಿದ್ದಾರೆ. ಮಾತ್ರವಲ್ಲ, ‘ಇದ್ನ ಹಾಡೋಕ್ ಬರ್ದೆ ಬಾಯ್ಬಿಡೋವ್ನು ಬೆಪ್ಪು ನನ್ವುಗ’ ಎಂದಿದ್ದಾರೆ!
ಕಳೆದಸಲ ಕೇಳಿದ್ದ ಇನ್ನೊಂದು ಪದ flush. ಇಂಗ್ಲಿಷ್ನಲ್ಲಿ ಬಹಳ ಹಿಂದಿನ ಕಾಲದಿಂದಲೂ, ಅಂದರೆ ಆಧುನಿಕ ಶೌಚಾಲಯ ವ್ಯವಸ್ಥೆ ಬರುವುದಕ್ಕಿಂತಲೂ ಮೊದಲೇ ಬಳಕೆಯಲ್ಲಿತ್ತು, move rapidly or violently ಎಂಬರ್ಥದಲ್ಲಿ. ಮರದ ಕೊಂಬೆಯ ಮೇಲೆ ಕುಳಿತ ಗಿಡುಗದಂಥ ಪಕ್ಷಿಯು ಹಠಾತ್ತನೆ ಹಾರಿದಾಗ ಅದರ ರೆಕ್ಕೆಗಳ ಬಡಿತದ ಶಬ್ದವೇ ಅನುಕರಣವಾಗಿ Flush ಅಂತಾಗಿರಬಹುದೆಂದು ಭಾಷಾಶಾಸ್ತ್ರಜ್ಞರ ಅಭಿಪ್ರಾಯ. ಕ್ರಮೇಣ ಯಾವುದೇ ದ್ರವದ ಹಠಾತ್ ಚಲನೆ ಅಥವಾ rush out suddenly, flow with force ಎಂಬರ್ಥದಲ್ಲೂ flush ಬಳಕೆಯಾಗತೊಡಗಿತು. ರಕ್ತ ಹಠಾತ್ತನೆ ನುಗ್ಗಿ ಮುಖ ಕೆಂಪೇರುವುದು ಕೂಡ flush. ಈಗ ಬಹುಮಟ್ಟಿಗೆ ನೀರನ್ನು ರಭಸವಾಗಿ ಹರಿಬಿಟ್ಟು ಕೊಳವೆಯನ್ನೋ ತೊಟ್ಟಿಯನ್ನೋ ತೊಳೆಯುವ ಪ್ರಕ್ರಿಯೆಗೆ, ಮುಖ್ಯವಾಗಿ ಶೌಚಾಲಯದಲ್ಲಿ flush ಪದ ಬಳಕೆಯಾಗುತ್ತದೆ. ನ್ಯೂಯಾರ್ಕ್ನಲ್ಲಿ flushing ಅಂತೊಂದು ಪ್ರದೇಶವಿದೆ, ಶತಮಾನಗಳ ಹಿಂದೆ ಯುರೋಪ್ನಿಂದ ವಲಸಿಗರು ಅಲ್ಲಿಗೆ ಪ್ರವಾಹದೋಪಾದಿ ಬಂದಿದ್ದರಿಂದಲೇ ಆ ಹೆಸರು ಬಂತೆನ್ನಲಾಗಿದೆ.
Flush ಕ್ರಿಯಾಪದಕ್ಕೆ ಸೂಕ್ತವಾದ ಕನ್ನಡ ಪದ ಕಂಡುಕೊಳ್ಳಲಿಕ್ಕೆ ನಾವು ‘ಉಗ್ಗು’ ಎಂಬ ಪದವನ್ನು ಆಧರಿಸಬಹುದು. ಕಸಾಪ ನಿಘಂಟುವಿನ ಪ್ರಕಾರ ಇದು ತುಳು ಭಾಷೆಯಿಂದ ಬಂದದ್ದು. ಉಗ್ಗು ಎಂದರೆ ತೊದಲು ಅಂತಷ್ಟೇ ಅಲ್ಲ, ಇನ್ನೊಂದು ಅರ್ಥವೂ ಇದೆ- ಚೆಲ್ಲು, ಸಿಂಪಡಿಸು, ಎರಚು ಎಂದು. ‘ಬೆಟ್ಟದೆದೆಯನು ಬಿರಿದು ಬಾಳ ಹಿಗ್ಗಿನ ಬುಗ್ಗೆ ಉಗ್ಗಿಬಹದದು...’, ‘ಅಟ್ಟಹಾಸದ ಬುಗ್ಗೆ ಉಗ್ಗಿಬರಹತ್ತಿತು...’ ಇತ್ಯಾದಿ. ನೀರನ್ನು ಉಗ್ಗುವ ಪ್ರಕ್ರಿಯೆಗೆ ‘ನೀರುಗ್ಗು’ ಸರಿಯೆನಿಸುತ್ತದೆ. ಸೂಚಿಸಿದವರು: ಸುದರ್ಶನ ಭಟ್ಟ, ಸಂಜೀವ ಮತ್ತಿಕೊಪ್ಪ, ರಾಜೇಂದ್ರ ಕಳಸಣ್ಣವರ, ಎನ್.ಆರ್. ರಮೇಶ್, ಯಶೋದಾ ಎಂ. ಗೋಪಿ ಮತ್ತು ಟಿ.ಸಿ. ಸರಳಕುಮಾರಿ. ‘ನೀರೊತ್ತು’ (ಮೋಹನ್ ಅಂಕೋಲಾ, ಮಹಾಂತೇಶ ಇಂಚಲ, ವಿ.ಪಿ. ಹೆಗಡೆ, ಸಂತೋಷರಾವ್ ಕಡಬ, ಮಂಜುನಾಥ ಡಿ.ಎಸ್., ಜಯಲಕ್ಷ್ಮಿ ಅಡಿಗ), ‘ನೀರ್ತಳ್ಳು’ (ಗಿರೀಶ ಕೆ.ಎಸ್., ವಿನಾಯಕ ಕಾಮತ್) ಸಹ ಸೂಕ್ತವೇ. ‘ಕಕ್ಕಸಿನಲ್ಲಿ ಫ್ಲಷ್ ಮಾಡಲಿಕ್ಕೆ ಮರೆಯಬೇಡ’ ಎನ್ನಬೇಕಾದಲ್ಲಿ ‘ನೀರ್ತಳ್ಳಲಿಕ್ಕೆ ಮರೆಯಬೇಡ’ ಎನ್ನಬಹುದು. ‘ನೀರ್ಜಡಿ’ (ಅನಂತರಾಮಯ್ಯ ಅಮೃತಹಳ್ಳಿ), ‘ನೀರಟ್ಟು’ (ಪಿ.ಜೆ. ರಾಘವೇಂದ್ರ) ಸಹ ಇದೇ ಕಾರಣದಿಂದ ಮಾನ್ಯ. ಇನ್ನೊಂದು ಸಾಧ್ಯತೆ ಪ್ರವಾಹ ಎಂಬರ್ಥದ ಹೊನಲು ಪದದಿಂದ. ಪ್ರವಾಹ ಹರಿಯುವಂತೆ ಮಾಡುವುದನ್ನು ‘ಹೊನಲಿಸು’ ಎನ್ನಬಹುದು. ಸೂಚಿಸಿದವರು: ದೀಪ್ತಿ ಖಟಾವಕರ್ ಮತ್ತು ಸಂಜೀವ ಜೋಶಿ. ಉದಾಹರಣೆಯಾಗಿ ‘ಈ ತೊಟ್ಟಿಯಲ್ಲಿ ತುಂಬಿರುವ ಕೊಳೆಯನ್ನು ಹೊನಲಿಸಬೇಕಿದೆ’.
ಕೊನೆಯದಾಗಿ Township. ಮಧ್ಯಯುಗದ ಇಂಗ್ಲಿಷ್ನಲ್ಲಿದು tounship ಎಂದು ಬರೆಯಲ್ಪಡುತ್ತಿತ್ತಂತೆ; a village and the belonging to it, area of land occupied by a community ಎಂಬ ಅರ್ಥವಿತ್ತಂತೆ. ಅಂದರೆ ಪ್ರಾಚೀನ ಯುರೋಪ್ನಲ್ಲಿ ಪ್ರಾಂತ ವಿಭಾಗಗಳಾದ ಊರು ಅಥವಾ ಹಳ್ಳಿ ಎಂಬರ್ಥದ ಮ್ಯಾನರ್, ಪ್ಯಾರಿಷ್ ಮೊದಲಾದುವುಗಳಲ್ಲಿ ವಾಸವಾಗಿದ್ದ ಜನಪಂಗಡ. ಅಮೆರಿಕ, ಕೆನಡಾ ದೇಶಗಳಲ್ಲಿ ಸ್ಥಳೀಯ ಆಡಳಿತಾಧಿಕಾರಗಳುಳ್ಳ, ಸುಮಾರು 36 ಚದರ ಮೈಲುಗಳಷ್ಟು ವಿಸ್ತೀರ್ಣದ, ಕೌಂಟಿ(ಜಿಲ್ಲೆ)ಗಳ ಭಾಗವನ್ನು ಟೌನ್ಶಿಪ್ ಎನ್ನುವುದಿದೆ. ಆಸ್ಟ್ರೇಲಿಯಾದಲ್ಲಾದರೆ ಪಟ್ಟಣ ಕಟ್ಟಲು ಗೊತ್ತುಪಡಿಸಿದ ನಿವೇಶನ ಎಂಬರ್ಥದಲ್ಲಿ ಬಳಕೆ. ಅಂತೂ ಇದರ ಅರ್ಥವ್ಯಾಪ್ತಿ ಪ್ರಪಂಚದಾದ್ಯಂತ ಒಂದೇ ಆಗಿಲ್ಲದಿರುವುದು ಸ್ಪಷ್ಟ. ಭಾರತದಲ್ಲಿ ದೊಡ್ಡದೊಡ್ಡ ಕಾರ್ಖಾನೆಗಳ ಪಕ್ಕದಲ್ಲಿ ಕಾರ್ವಿುಕರಿಗೆ ವಸತಿ ಮತ್ತು ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ನಿರ್ವಿುಸುವ ಪುಟ್ಟ ಪಟ್ಟಣವನ್ನು ಟೌನ್ಶಿಪ್ ಎಂದು ಕರೆಯಲಾಗುತ್ತದೆ. ಸರಕಾರಿ ಸ್ವಾಮ್ಯದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು, ವಿದ್ಯುದುತ್ಪಾದನಾ ಕೇಂದ್ರಗಳು, ಗಣಿಗಳೆಲ್ಲ ಸಾಮಾನ್ಯವಾಗಿ ನಗರ ಪ್ರದೇಶದಿಂದ ದೂರದಲ್ಲಿರುವುದರಿಂದ ಅಲ್ಲಿ ಮಾರುಕಟ್ಟೆ, ಆಸ್ಪತ್ರೆ, ಶಾಲೆ, ಉದ್ಯಾನ, ಧಾರ್ವಿುಕ ಕೇಂದ್ರ, ಕ್ರೀಡಾಂಗಣ ಮುಂತಾಗಿ ಎಲ್ಲ ಸೌಲಭ್ಯಗಳುಳ್ಳ ಟೌನ್ಶಿಪ್ ಇರುತ್ತದೆ. ಪ್ರಮಾಣದಲ್ಲಿ ಚಿಕ್ಕದು ಎನ್ನುವುದನ್ನು ಬಿಟ್ಟರೆ ಅದೊಂದು ಪರಿಪೂರ್ಣ ನಗರವೇ. ಈ ದೃಷ್ಟಿಯಿಂದ ಅನ್ನಪೂರ್ಣ ಹೇಮಚಂದ್ರ ಸೂಚಿಸಿರುವ ‘ಪೂರ್ಣಪುರ’ ಪದ ಅತಿಸೂಕ್ತವೆನಿಸುತ್ತದೆ. ‘ಪುಟ್ಟಪಟ್ಟಣ’ (ಪ್ರಭಾ ಸುರೇಶ್, ಬೊ.ನಾ. ಕೃಷ್ಣಮೂರ್ತಿ) ಸಹ ಚೆನ್ನಾಗಿದೆ. ಉಳಿದಂತೆ ‘ಉಪನಗರ’ ಎಂಬ ಈಗಾಗಲೇ ಪರಿಚಿತ ಪದವನ್ನೇ ಸೂಚಿಸಿ ನೂರಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ: ಅನಿತಾ ಕಿಶೋರ್, ಜಿ.ಎಚ್. ಸಂಕಪ್ಪ, ಎಂ.ಡಿ.ಶ್ರೀನಿವಾಸಮೂರ್ತಿ, ಪಿ. ವಾಣಿ ಮೈಸೂರು, ಎಚ್.ಜಿ.ಜಗದೀಶ್, ಎನ್.ಟಿ. ಹೆಗಡೆ, ನಂದಿನಿ ಹಾಸನ, ಗಿರೀಶ ಫಡ್ಕೆ, ವಿಶ್ವನಾಥ ಪ್ರಭು, ಶೀಲಾ ಜಿ.ಪಿ., ಸುರೇಶ ನಾಯಕ್, ಜಯಶಂಕರ್ ಬೆಂಗಳೂರು, ಹಿ.ಶಾ. ಸುಬ್ರಹ್ಮಣ್ಯ, ಸರಿತಾ ಸಂಗಂ, ಸಾವಿತ್ರಿ ಬೇಡಕಿಹಾಳ, ಶಕುಂತಲಾ ಯು. ಹೊನ್ನಾಳಿ, ಭಾರತಿ ಆರ್.ಭಟ್, ಆನಂದರಾಮ ಮಡಿ, ಕಂಪಲಾಪುರ ಎಸ್.ಮೂರ್ತಿ, ಸೋನಲ್ ಪೈ, ಗೋಪಾಲಕೃಷ್ಣ ಹೆಮ್ಮಿಗೆ, ಶಶಿಕಲಾ ನರೇಂದ್ರನಾಥ, ಕುಶಲ್ ಭಾರದ್ವಾಜ್, ಸತೀಶ ಭಟ್, ಶೋಭಾ ಪಿ. ಭಟ್ಟ, ಡಾ.ಎನ್.ಎಂ.ತುಳಪುಳೆ ಮುಂತಾದವರು. ಮುಖ್ಯನಗರಕ್ಕೆ ಹೊಂದಿಕೊಂಡಂತೆ ಇದ್ದರೆ ಉಪನಗರ ಸರಿಯೇ. ಕನ್ನಡದ ಪತ್ರಿಕೆಗಳು ಟೌನ್ಶಿಪ್ ಬದಲಿಗೆ ಉಪನಗರವೆಂದೋ ಪೂರ್ಣಪುರವೆಂದೋ ಬರೆಯುವ ಮನಸ್ಸು ಮಾಡಬೇಕಷ್ಟೇ, ‘ಟ್ರಾಫಿಕ್ ಜಾಮ್ ಬದಲಿಗೆ ‘ಸಂಚಾರಸಿಕ್ಕು’ ಎಂದೇ ಬರೆಯುವ ವಿಜಯವಾಣಿ ಪತ್ರಿಕೆಯ ಶ್ಲಾಘನೀಯ ಕ್ರಮದಂತೆ.
ಈ ವಾರದ ಮೂರು ಪದಗಳು:
1. Benchmark: ಬೆಂಚಿನ ಮೇಲೆ ಮೂಡಿಸಿದ ಗುರುತು ಎಂದು ಅಕ್ಷರಶಃ ಅನುವಾದ ಮಾಡಿದರೆ ಸರಿಯೆನಿಸದು. ಬೇರಾವ ಪದ ಸೂಕ್ತವಾಗಬಹುದು?
2. Homestay: ಗಿಜಿಗುಡುವ ನಗರದಿಂದ ಕೆಲದಿನಗಳ ಮಟ್ಟಿಗೆ ದೂರವಿದ್ದು ಮನಸ್ಸಿಗೆ ಪ್ರಫುಲ್ಲತೆ ತರಲೊಂದು ವಿಹಾರತಾಣ. ಇದನ್ನು ಕನ್ನಡದಲ್ಲಿ ಏನನ್ನೋಣ?
3. Tamper: ಅಕ್ರಮವಾಗಿ ಮತ್ತು ಅಧಿಕಾರವಿಲ್ಲದೆ ದುರುದ್ದೇಶದಿಂದಲೇ ತನಗೆ ಬೇಕಾದಂತೆ ಬದಲಾಯಿಸುವ ಪ್ರಕ್ರಿಯೆ. ಇದಕ್ಕೊಂದು ಕನ್ನಡ ಪದ ಬೇಕು.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
-(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)