ಅರಸೀಕೆರೆ: ಶ್ರೀನಿವಾಸ ನಗರ ಬಡಾವಣೆಗೆ ಹೊಂದಿಕೊಂಡಂತಿರುವ ಸರ್ಕಾರಿ ಸೇಂದಿವನ ಹಾಗೂ ಸ್ಮಶಾನದ ಆವರಣದಲ್ಲಿನ ಮರಗಳನ್ನು ಕತ್ತರಿಸಿ ಮಾರಾಟ ಮಾಡಲು ಮುಂದಾಗಿರುವುದು ಗೊತ್ತಾಗಿದೆ. ಯಾರೂ ಇಲ್ಲದ ವೇಳೆಯಲ್ಲಿ ಆಧುನಿಕ ಯಂತ್ರೋಪಕರಣ ಬಳಸಿ ಬೃಹತ್ ನೆರಳಿನ ಮರಗಳನ್ನು ಹನನ ಮಾಡಲಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಮಂಗಳವಾರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ವಲಯ ಅರಣ್ಯಾಧಿಕಾರಿ ಹೇಮಂತ್ ಮಾತನಾಡಿ, ಸರ್ಕಾರಿ ಸೇಂದಿವನ ಹಾಗೂ ಸ್ಮಶಾನದ ಆವರಣದಲ್ಲಿನ ಮರಗಳನ್ನು ಕತ್ತರಿಸಿರುವುದು ತಿಳಿದು ಬಂದಿದೆ. ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದು ಹಾಸನಕ್ಕೆ ಕಳುಹಿಸಿ ಕೊಡಲಾಗಿದೆ. ಜತೆಗೆ ಕೃತ್ಯವೆಸಗಿದ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಡಹಗಲೇ ಮರಗಳ ಮಾರಣ ಹೋಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರಿಂದ ಕೇಳಿ ಬಂದಿದೆ.