ನೇರಳೆ ಹಣ್ಣಿಗೆ ಡಿಮಾಂಡ್​

Demand for purple fruit
Demand for purple fruit
Published on
ನಾಗರಾಜ್​ ಕೆ.ಎಚ್​. ತೊಂಡೆಬಾವಿ
ಬಿಸಿಲಿನ ಧಗೆಯಿಂದ ಬಳಲುತ್ತಿರುವ ಜನರಿಗೆ ತಂಪೆರೆಯುವ ಮತ್ತು ಆರೋಗ್ಯ ವರ್ಧಕವಾಗಿರುವ ನೇರಳೆ ಹಣ್ಣಿಗೆ ನಗರದಲ್ಲಿ ಬೇಡಿಕೆ ಕಂಡುಬಂದಿದೆ. ಪ್ರಕೃತಿಯ ಕೊಡುಗೆಯಾಗಿರುವ ಈ ಹಣ್ಣು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದ್ದು ವ್ಯಾಪಾರ ಜೋರಾಗಿ ನಡೆಯುತ್ತಿದೆ.
"

ನಾವು ಮಾರುಕಟ್ಟೆಯಿಂದ ಹಣ್ಣು ತಂದು ಮಾರಾಟ ಮಾಡುತ್ತಿದ್ದೇವೆ. ಮಳೆ ಬರುತ್ತಿರುವ ಕಾರಣ ಹಣ್ಣಿನ ಇಳುವರಿ ಕಡಿಮೆಯಾಗಿದೆ, ಹಾಗಾಗಿ ಬೆಲೆ ಹೆಚ್ಚಿದೆ. ಗ್ರಾಹಕರಿಂದ ಬೇಡಿಕೆ ಇದ್ದರೂ, ನಮಗೆ ಅಲ್ಪ ಲಾಭವೇ ಸಿಗುತ್ತಿದೆ.

> ಶಿವಕುಮಾರ್​, ವ್ಯಾಪಾರಿ


ಸಾಮಾನ್ಯವಾಗಿ ಏಪ್ರಿಲ್​ನಿಂದ ಜೂನ್​ ತಿಂಗಳವರೆಗೆ ಲಭ್ಯವಿರುವ ನೇರಳೆ ಹಣ್ಣು, ಮಳೆಗಾಲದ ಆರಂಭದವರೆಗೂ ಮಾರುಕಟ್ಟೆಯಲ್ಲಿ ರಾರಾಜಿಸುತ್ತದೆ. ಈ ಬಾರಿ ಮಳೆಗಾಲದ ಕಾರಣ ಹಣ್ಣಿನ ಲಭ್ಯತೆ ಕೊಂಚ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಕೆ.ಜಿ.ಗೆ 100 ರೂಪಾಯಿಗಳಿದ್ದ ದರ, ಇದೀಗ 160 ರಿಂದ 180 ರೂ.ಗೆ ತಲುಪಿದೆ.
"

ನಾವು ಪ್ರತಿ ವರ್ಷ ಈ ಹಣ್ಣನ್ನು ತಪ್ಪದೇ ಸೇವಿಸುತ್ತೇವೆ. ಇಂದಿನ ದಿನಗಳಲ್ಲಿ ಫಾಸ್ಟ್​ಫುಡ್​ಗಳಿಗೆ ಮೊರೆ ಹೋಗುತ್ತಿರುವ ಮನುಷ್ಯ, ಇಂತಹ ಆರೋಗ್ಯಕರ ಹಣ್ಣುಗಳ ಸೇವನೆಯ ಕಡೆಗೆ ಗಮನ ಹರಿಸುವುದು ಉತ್ತಮ.

> ಲಕ್ಷಿ$್ಮಪತಿ, ಗ್ರಾಹಕ


ಆರೋಗ್ಯದ ದೃಷ್ಟಿಯಿಂದ ಉತ್ತಮ: ನೇರಳೆ ಹಣ್ಣು ಸಿಹಿ ಮತ್ತು ಸ್ವಲ್ಪ ಕಹಿ ಮಿಶ್ರಿತವಾಗಿರುವುದು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಅತ್ಯುಪಯುಕ್ತವಾಗಿದೆ. ಇದರಲ್ಲಿ ವಿಟಮಿನ್​ಗಳು, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಆಂಟಿ ಆಕ್ಸಿಡೆಂಟ್​ಗಳು ಸಮೃದ್ಧವಾಗಿವೆ. ಮಧುಮೇಹ ರೋಗಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಜತೆಗೆ ಜೀರ್ಣಕ್ರಿಯೆ ಸುಧಾರಣೆ, ರೋಗನಿರೋಧಕ ಶಕ್ತಿ ಹೆಚ್ಚಳ, ತೂಕ ನಿಯಂತ್ರಣ ಹಾಗೂ ಚರ್ಮದ ಆರೋಗ್ಯಕ್ಕೂ ಇದು ರಾಮಬಾಣವಾಗಿದೆ. ನೇರಳೆ ಬೀಜ, ಎಲೆ ಮತ್ತು ತೊಗಟೆ ಕೂಡ ಆಯುರ್ವೇದದಲ್ಲಿ ಔಷಧ ಗುಣಗಳಿಗಾಗಿ ಬಳಸಲ್ಪಡುತ್ತದೆ.
ನಗರದ ವೇಮನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನಾಗಯ್ಯರೆಡ್ಡಿ ವೃತ್ತ, ಬಜಾರ್​ ರಸ್ತೆ ಮತ್ತು ಗಾಂಧಿ ವೃತ್ತಗಳಲ್ಲಿ ನೇರಳೆ ಹಣ್ಣಿನ ಮಾರಾಟ ಭರದಿಂದ ಸಾಗಿದೆ. ಒಟ್ಟಾರೆಯಾಗಿ, ರುಚಿಯ ಜತೆಗೆ ಆರೋಗ್ಯವನ್ನೂ ನೀಡುವ ನೇರಳೆ ಹಣ್ಣು ಪ್ರಸ್ತುತ ಆರೋಗ್ಯ ಪೂರಕವಾಗಿ ಜನರ ಮೆಚ್ಚುಗೆ ಪಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net