

ರಾಯಚೂರು ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನದ ಪ್ರಕಟಣೆಗೆ ಒತ್ತಾಯಿಸಿ ಸಿಐಟಿಯು ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ಮಾಡಿದರು.
ರಾಜ್ಯದಲ್ಲಿನ ಅನುಸೂಚಿತ, ಸೂಚಿ ತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯವಾಗುವ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಏಪ್ರಿಲ್ 2025 ರಲ್ಲಿ ಪ್ರಕಟಿಸಿದೆ. ಈ ಅಧಿಸೂಚನೆಗಳಿಗೆ ಕಾರ್ಮಿಕ ಸಂಘಟನೆಗಳು, ಮಾಲೀಕರ ಸಂಘಟನೆಗಳು ಮತ್ತು ಇತರರು ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸಿದ್ದು, ಕನಿಷ್ಟ ವೇತನ ಸಲಹಾ ಮಂಡಳಿಯು ಇದರ ಕುರಿತು ಎರಡು ಸುತ್ತುಗಳ ಚರ್ಚೆಯನ್ನು ನಡೆಸಿದೆ.
ಕನಿಷ್ಠ ವೇತನ ಸಲಹಾ ಮಂಡಳಿಯು ತಮ್ಮ ಅಭಿಪ್ರಾಯವನ್ನು 2025 ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿ ಹಲವು ತಿಂಗಳು ಕಳೆದರೂ ವೈಜ್ಞಾನಿಕವಾಗಿ ಹಾಗೂ ಕಾನೂನು ಬದ್ಧವಾದ ಕನಿಷ್ಟವೇತನದ ಅಂತಿಮ ಪ್ರಕಟಣೆ ಹೊರಡಿಸಿಲ್ಲವೆಂದು ದೂರಿದರು.
ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳು ವರ್ಷಗಳು ಕಳೆದಿದೆ ಈ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆಯನ್ನು ಸರ್ಕಾರವು ಮಾಡದಿರುವುದು ನ್ಯಾಯಸಮ್ಮತವಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗ ಕ್ಕೆ ಆರ್ಥಿಕ ಸ್ವಾವಲಂಬನೆಯನ್ನು ಖಾತರಿ ಪಡಿಸುವ ಕನಿಷ್ಠವೇತನದ ಪ್ರಕಟಣೆಯನ್ನು ಕೂಡಲೇ ರಾಜ್ಯ ಸರ್ಕಾರವು ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕದ ಅಸಂಘಟಿತ, ಸಣ್ಣ, ಮಧ್ಯಮ ಉತ್ಪಾದನಾ ಘಟಕಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಲ್ಲಿ ಭರವಸೆಯನ್ನು ಮೂಡಿಸಿದ ಸರ್ಕಾರದ ಕನಿಷ್ಠವೇತನದ ಪುನರ್ ವಿಮರ್ಶೆ ಪ್ರಕ್ರಿಯೆಯಾಗಿಯೆ ಉಳಿದಿದೆ. ಕನಿಷ್ಠವೇತನವನ್ನು ರಾಜ್ಯ ಸರ್ಕಾರ ಕೂಡಲೇ ಘೋಷಣೆ ಮಾಡಿ ಕಾರ್ಮಿಕರ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಹೆಚ್. ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣ ಬಸವ, ಶಬ್ಬಿರ್, ಗಿರಿಯಪ್ಪ ಪೂಜಾರಿ, ಶರ್ಫುದ್ದಿನ್ ಪೋತ್ನಾಳ, ಮಹ್ಮದ್ ಹನಿಫ್, ಅನ್ವರ್ ಪಾಷಾ ಸೇರಿದಂತೆ ಅನೇಕ ಕಾರ್ಮಿಕರು ಇದ್ದರು.