ಬೇಲೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಿ

 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಬೇಲೂರು ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದರು. ಅದೇಶ್, ದೇವರಾಜ್, ಹರ್ಷವರ್ಧನ್, ಸುನಿಲ್ ಬೆಳ್ಳೊಟ್ಟೆ, ರಿಯಾಜ್, ದೇವರಾಜ್, ಮನು, ಸುಷ್ಮಾ, ಆಶಾ, ಉಷಾ ಇದ್ದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಬೇಲೂರು ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದರು. ಅದೇಶ್, ದೇವರಾಜ್, ಹರ್ಷವರ್ಧನ್, ಸುನಿಲ್ ಬೆಳ್ಳೊಟ್ಟೆ, ರಿಯಾಜ್, ದೇವರಾಜ್, ಮನು, ಸುಷ್ಮಾ, ಆಶಾ, ಉಷಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಲೂರು ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು
  • ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು
ಬೇಲೂರು: ಬೇಲೂರು ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ಆರಂಭಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತಲುಪಿದ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಅದೇಶ್ ಮಾತನಾಡಿ, ಪ್ರತಿ ವರ್ಷ ತಾಲೂಕಿನಲ್ಲಿ ಸರಾಸರಿಯಂತೆ ಹೆಚ್ಚು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಶೇಕಡವಾರಿಗಿಂತ ಕಮ್ಮಿ ಮಳೆಯಾಗಿದ್ದರಿಂದ ತಾಲೂಕಿನಲ್ಲಿ ಬರ ಆವರಿಸಿದೆ. ಮಳೆ ಕೊರತೆಯಿಂದಾಗಿ ಜೋಳ, ರಾಗಿ ಹಾಗೂ ಭತ್ತ ಸೇರಿದಂತೆ ಯಾವುದೇ ಬೆಳೆಗಳು ಕೈಗೆ ಸಿಗದೆ ರೈತರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ತಾಲೂಕಿನ ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಇಲ್ಲಿನ ರೈತರಿಗೆ ಮಾಡಿದ ದ್ರೋಹವಾಗಿದೆ. ತಕ್ಷಣವೇ ಸರ್ಕಾರ ಬೇಲೂರು ತಾಲೂಕನ್ನು ತಕ್ಷಣವೇ ಬರ ಪೀಡಿತ ಪಟ್ಟಿಗೆ ಸೇರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುತ್ತೇವೆಂದು ಭರವಸೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಲಿಖಿತ ಆಶ್ವಾಸನೆ ನೀಡುವವರೆಗೂ ಮುಂದುವರಿಯಲಿದೆ. ಸರ್ಕಾರ ತಕ್ಷಣ ಕಣ್ಣು ತೆರೆದು ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಬೆಳೆಗಳೆಲ್ಲ ಒಣಗಿ ಹೋಗಿದ್ದು, ಕೆರೆ-ಕಟ್ಟೆಗಳು, ಕೊಳವೆ ಬಾವಿಗಳಲ್ಲಿ ನೀರಿಲ್ಲ. ಹೀಗಿರುವಾಗ ಯಾವ ಮಾನದಂಡದ ಮೇಲೆ ಸರ್ಕಾರ ಬೇಲೂರನ್ನು ಬರ ಪೀಡಿತ ಪಟ್ಟಿಯಿಂದ ಹೊರಗಿಡಲಾಗಿದೆ ಎಂಬುದಕ್ಕೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಬೇಕು. ತಾಲೂಕಿನ ಭೌಗೋಳಿಕ ಸ್ಥಿತಿಗತಿ ತಿಳಿಯದೆ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಕದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಬೇಲೂರನ್ನು ಬಿಟ್ಟಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಲೂಕಿನ ಜನತೆಗೆ ಎಸಗಿದ ದ್ರೋಹ ಎಂದು ಕಿಡಿಕಾರಿದರು.
ತಾಲೂಕನ್ನು ಬರಪೀಡಿತ ಎಂದು ಘೋಷಿಸಿದರೆ ಜಾನುವಾರುಗಳಿಗೆ ಮೇವು, ಜನರಿಗೆ ಆಹಾರ ಭದ್ರತೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಸಿಗಲಿದೆ. ಕೃಷಿ ಸಂಪೂರ್ಣ ನಷ್ಟದಲ್ಲಿದ್ದು, ಬರ ಪರಿಹಾರ ಸಿಗದಿದ್ದರೆ ತಾಲೂಕಿನ ಜನತೆ ಹೆಂಡತಿ-ಮಕ್ಕಳೊಂದಿಗೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ನಮ್ಮ ಹೋರಾಟಕ್ಕೆ ರೈತ ಸಂಘಟನೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು ಎಂದರು.
ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹರ್ಷವರ್ಧನ್, ತಾಲೂಕು ಉಪಾಧ್ಯಕ್ಷ ಸುನಿಲ್ ಬೆಳ್ಳೊಟ್ಟೆ, ಮುಖಂಡರಾದ ರಿಯಾಜ್, ದೇವರಾಜ್, ಮನು, ಸುಷ್ಮಾ, ಆಶಾ, ಉಷಾ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net