ತಂದೆ-ತಾಯಿಯ ಮರುಮೈತ್ರಿಗೆ ಮಗಳೇ ಸೇತುವೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕರಣವೊಂದರಲ್ಲಿ ಹೈಕೋರ್ಟ್​ ಅವಲೋಕನ
  • ವಿಚ್ಛೇದನ ಬೇಡ, ಹೆಂಡತಿ-ಮಗು ಸಾಕು ಎಂದ ಗಂಡ

ಬೆಂಗಳೂರು: 

ಮನಸ್ತಾಪ ಮತ್ತು ಭಿನ್ನಾಭಿಪ್ರಾಯಗಳಿಂದ ದೂರಾಗಿ ವಿಚ್ಛೇದನದ ಹೊಸ್ತಿಲಲ್ಲಿ ನಿಂತಿರುವ ದಂಪತಿಯನ್ನು ಮತ್ತೆ ಒಂದಾಗಿಸಲು, ಅವರಿಬ್ಬರ ಪ್ರೀತಿಯ ಸಂಕೇತವಾಗಿರುವ ಮಗುವೇ ಸೇತುವೆಯಾಗಬಲ್ಲದು ಎಂದು ಹೈಕೋರ್ಟ್​ ಪ್ರಕರಣವೊಂದರಲ್ಲಿ ಅವಲೋಕನ ಮಾಡಿದೆ.

ಏಳು ವರ್ಷದ ಅಂಗವಿಕಲ ಹೆಣ್ಣುಮಗುವಿನ ಕಸ್ಟಡಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಗುವಿನ ಪಾಲನೆಯ ಸಂಪೂರ್ಣ ಹಕ್ಕನ್ನು ತಂದೆಗೆ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ವಿಶೇಷ ಕಾಳಜಿ ಬೇಕಿರುವ ಕಾರಣ ಮಗುವಿಗೆ ತಾಯಿಯ ನಿರಂತರ ಆರೈಕೆ ಮತ್ತು ಪ್ರೀತಿ ಅಗತ್ಯವಾಗಿದೆ. ತಂದೆಯು ಒಬ್ಬಂಟಿಯಾಗಿ ವಾಸಿಸುತ್ತಿರುವ ಕಾರಣ ಮಗು ತಾಯಿಯ ಬಳಿಯೇ ಇರುವುದು ಸೂಕ್ತವಾಗಿದೆ ಎಂದು ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ:

ಮೈಸೂರು ಮೂಲದ ಮಹಿಳೆಯು ಮಹಾರಾಷ್ಟ್ರದ ವ್ಯಕ್ತಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ವೈವಾಹಿಕ ಮನಸ್ತಾಪಗಳ ಕಾರಣ ವಿಚ್ಛೇದನ ಕೋರಿ ಮಹಿಳೆ ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ್ದ ನ್ಯಾಯಾಲಯ, ಮಗುವಿನ ಕಸ್ಟಡಿ ಕೋರಿದ್ದ ತಂದೆಯ ಅರ್ಜಿಯನ್ನು ಪುರಸ್ಕರಿಸಿತ್ತು. ಈ ಆದೇಶವನ್ನು ಮಹಿಳೆ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಆದರೆ, ವಿಚ್ಛೇದನದ ಮನವಿಯನ್ನು ಕೈಬಿಟ್ಟು, ಕೇವಲ ಮಗಳ ಕಸ್ಟಡಿಗಾಗಿ ಮಾತ್ರ ವಾದಿಸಿದ್ದರು.  

ℹ️

ಒಂದಾಗಲಿ ಎಂದು ಹಾರೈಕೆ 

ಸ್ವತಃ ವಾದ ಮಂಡಿಸಿದ್ದ ಪತಿಯು ನನಗೆ ವಿಚ್ಛೇದನ ಬೇಡ, ನನ್ನ ಹೆಂಡತಿ ಮತ್ತು ಮಗು ನನ್ನೊಂದಿಗೆ ಇರಬೇಕೆಂಬುದೇ ನನ್ನ ಬಯಕೆ. ಮಗುವಿನ ಹಿತಕ್ಕಾಗಿ ಹಾಗೂ ಸುಖಿ ದಾಂಪತ್ಯಕ್ಕಾಗಿ ಕಾಯುತ್ತೇನೆ, ಮಗುವಿನ ಕಸ್ಟಡಿಯನ್ನು ನನಗೆ ನೀಡಿದರೆ ಮಹಾರಾಷ್ಟ್ರಕ್ಕೆ ಮರಳಿ, ಅಲ್ಲಿ ಕುಟುಂಬಸ್ಥರ ಸಹಾಯದಿಂದ ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದರು. ಈ ಹೇಳಿಕೆಯ ಬಗ್ಗೆ ಹೈಕೋರ್ಟ್​ ಮೆಚ್ಚುಗೆ ವ್ಯಕ್ತಪಡಿಸಿದೆಯಾದರೂ, 7 ವರ್ಷದ ಹೆಣ್ಣುಮಗುವಿಗೆ ತಾಯಿಯ ಆರೈಕೆ ಅತ್ಯಗತ್ಯ ಎಂದು ಪಾಲನೆಯ ಹಕ್ಕನ್ನು ತಾಯಿಗೆ ನೀಡಿದೆ. ಮಗುವಿನ ಭೇಟಿ ಮತ್ತು ವಿಡಿಯೋ ಕರೆ ಮಾಡುವ ಹಕ್ಕುಗಳನ್ನು ತಂದೆಗೆ ನೀಡಿದ್ದು, ಮಾಸಿಕ 25 ಸಾವಿರ ರೂ. ಜೀವನಾಂಶ ಪಾವತಿಸಲು ತಿಳಿಸಿದೆ. ಈ ಮಗುವಿನ ಕಾರಣದಿಂದಾಗಿ ದಂಪತಿಯು ತಮ್ಮ ಮನಸ್ತಾಪ ಮರೆತು ಒಂದಾಗಲಿ ಎಂದು ನಾವು ಬಯಸುತ್ತೇವೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net