ಕ್ಯಾಂಟರ್​ ಡಿಕ್ಕಿಯಾಗಿ ನೃತ್ಯ ಶಿಕ್ಷಕ ಸಾವು / DABASPETE

ದೊಡ್ಡಬಳ್ಳಾಪುರ ರಸ್ತೆಯ ಪೆಮ್ಮನಹಳ್ಳಿ ಬಳಿ ಅಪಘಾತಕ್ಕೀಡಾದ ಕಾರು.
ದೊಡ್ಡಬಳ್ಳಾಪುರ ರಸ್ತೆಯ ಪೆಮ್ಮನಹಳ್ಳಿ ಬಳಿ ಅಪಘಾತಕ್ಕೀಡಾದ ಕಾರು.
Published on
ದಾಬಸ್​ಪೇಟೆ : CRIME ದೊಡ್ಡಬಳ್ಳಾಪುರ ರಸ್ತೆಯ ಪೆಮ್ಮನಹಳ್ಳಿ ಬಳಿ ರಸ್ತೆ ಬದಿ ನಿಂತಿದ್ದ ಕಾರಿಗೆ ಕ್ಯಾಂಟರ್​ ಡಿಕ್ಕಿಯಾಗಿ ತ್ಯಾಮಗೊಂಡ್ಲು ನಿವಾಸಿ, ನೃತ್ಯ ಶಿಕ್ಷಕ ಸುಧೀಂದ್ರ (35) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದಷ್ಟೆ ಸುಧೀಂದ್ರ ಹೊಸ ಕಾರು ಖರೀದಿಸಿದ್ದು, ಅಣ್ಣನಿಗೆ ಕಾರು ತೋರಿಸಿ ದಾಬಸ್​ಪೇಟೆಗೆ ವಾಪಸ್​ ಬರುವಾಗ ಕಾರು ಕೆಟ್ಟಿದೆ. ಆಗ ಸುಧೀಂದ್ರ ಕೆಳಗೆ ಇಳಿದು ಪರಿಶೀಲಿಸುವಾಗ ವೇಗವಾಗಿ ಬಂದ ಕ್ಯಾಂಟರ್​ ಕಾರಿಗೆ ಡಿಕ್ಕಿಯಾಗಿ, ಸುಧೀಂದ್ರ ಮೇಲೂ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಧೀಂದ್ರ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಪಾರ ಅಭಿಮಾನಿ ಬಳಗ ಹೊಂದಿದ್ದರು.ದಾಬಸ್​ಪೇಟೆಯ ಹಲವು ಶಾಲೆಗಳಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದರು ಎನ್ನಲಾಗಿದೆ.ಆಕ್ರೋಶ: ಸಿಎನ್​ಜಿ ಮತ್ತು ಪೆಟ್ರೋಲ್​ ಕಾರು ಇದಾಗಿದ್ದು, ಸಿಎನ್​ಜಿ ಸಂಪರ್ಕ ಕಡಿತಗೊಂಡು ಕೆಟ್ಟು ನಿಂತಿತ್ತು. ಕಾರಿನಲ್ಲಿ ಸಮಸ್ಯೆಯಾಗದಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು.

ಗ್ರಾಪಂ ಸದಸ್ಯನ ಹತ್ಯೆಗೆ ಯತ್ನಿಸಿದ ಆರೋಪಿಗಳ ಸೆರೆ

ನೆಲಮಂಗಲ : ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೆ ಯತ್ನಿಸಿದ್ದ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇಸ್ಲಾಂಪುರದ ನಿವಾಸಿಗಳಾದ ಮುಬಾರಕ್​ (36), ಸಾಧಿಕ್​ (29), ಆಷಿಫ್​ ಖಾನ್​ (34), ನರಸಿಂಹ (30) ಬಂಧಿತರು. ಅ.26ರ ಸಂಜೆ 6.30ರ ವೇಳೆಯಲ್ಲಿ ಗ್ರಾಪಂ ಸದಸ್ಯ ಸಲೀಂ ಪಾಷಾ ಮನೆ ಮುಂದೆ ಗ್ರಾಮಸ್ಥರ ಜತೆ ಮಾತನಾಡುತ್ತಿದ್ದಾಗ ಮುಬಾರಕ್​ನ ಸ್ನೇಹಿತ ಸಾಧಿಕ್​ ಹಾಗೂ ಆತನ ಇಬ್ಬರು ಸ್ನೇಹಿತರು ಸಲೀಂ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಸಲೀಂನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡ ರಚನೆ: ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬ ಮಾರ್ಗದರ್ಶನ ಹಾಗೂ ಡಿವೈಎಸ್​ಪಿ ಜಗದೀಶ್​ ನೇತೃತ್ವದಲ್ಲಿ ಆರಕ್ಷಕ ನಿರೀಕ್ಷಕ ನರೇಂದ್ರಬಾಬು ಒಳಗೊಂಡ ಪೊಲೀಸ್​ ಸಿಬ್ಬಂದಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net