ದಿತ್ವಾಹ್ ಸೈಕ್ಲೋನ್ ಹಿನ್ನೆಲೆ: ಥಂಡಿಗೆ ನಲುಗಿದ ಕರುನಾಡು-Cyclone

cold weather
cold weather
Published on

ಪ್ರಮುಖ ಮುಖ್ಯಾಂಶಗಳು

  • ದಿತ್ವಾಹ್ ಸೈಕ್ಲೋನ್‌ನಿಂದ ಕರುನಾಡಲ್ಲಿ ಥಂಡಿ ವಾತಾವರಣ
  • ಮುಂದಿನ 4 ದಿನ ಇದೇ ಮೋಡ ಕವಿದ ವಾತಾವರಣ
  • ಬೆಂಗಳೂರು ಸೇರಿ ಹಲವೆಡೆ ಸರಾಸರಿ 2-3 ಡಿ.ಸೆ. ಉಷ್ಣಾಂಶ ಕುಸಿತ
ಬೆಂಗಳೂರು:ದಿತ್ವಾಹ್ ಸೈಕ್ಲೋನ್‌ನಿಂದ ಕರುನಾಡಲ್ಲಿ ಥಂಡಿ ವಾತಾವರಣ ನಿರ್ಮಾಣವಾಗಿದ್ದು, ಜನರು ಗಢಗಢ ನಡುಗುವಂತಾಗಿದೆ.
ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನ ಇದೇ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.ವಿಜಯಪುರ ಮತ್ತು ಬೀದರ್‌ನಲ್ಲಿ ಕನಿಷ್ಠ ತಾಪಮಾನದಲ್ಲಿ ಶನಿವಾರ 12 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿ ಆವರಿಸಿದೆ. ಇದರಿಂದಾಗಿ ಜನರು, ರಾತ್ರಿ ವೇಳೆ ಹೊರಗಡೆ ಸಂಚರಿಸುವುದನ್ನೂ ಕಡಿಮೆ ಮಾಡಿದ್ದಾರೆ. ಇದೀಗ ಸೈಕ್ಲೋನ್‌ನಿಂದ ಇನ್ನಷ್ಟು ವಿಪರೀತ ಥಂಡಿ ವಾತಾವರಣ ಉಂಟಾಗಿದೆ.ಬೆಳಗಾವಿ, ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಧಾರವಾಡ, ಗಂಗಾವತಿ, ಹೊನ್ನಾವರ, ವಿಜಯಪುರ, ರಾಯಚೂರು, ಮಂಡ್ಯ ಮತ್ತು ಮೈಸೂರು ಸೇರಿ ರಾಜ್ಯದ ಹಲವು ಜಿಲ್ಲೆಗಳ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ಹಗಲಿನಲ್ಲಿ ವಿಪರೀತ ಶೀತಗಾಳಿಯಿಂದಾಗಿ ಜನರು ಬೆಚ್ಚಗಿನ ಉಡುಪು ಮೋರೆಹೋಗಿದ್ದರು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಸೈಕ್ಲೋನ್‌ನಿಂದ ತಮಿಳುನಾಡು, ಕರಾವಳಿ ಆಂಧ್ರಪ್ರದೇಶ,ರಾಯಲಸೀಮಾ, ತೆಲಂಗಾಣದಲ್ಲಿ ಮುಂದಿನ 4 ದಿನ ವ್ಯಾಪಕವಾಗಿ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು, ಬೆಂ,ಗ್ರಾಮಾಂತರ, ಬೆಂ.ದಕ್ಷಿಣ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ,ಡಿ.3ರವರೆಗೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ. ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮೋಡಗಳು ಮುಸುಕಿದ ವಾತಾವರಣ ಇದೆ.ದಿನದಿಂದ ದಿನಕ್ಕೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.
- ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net