ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ಪ್ರತಿನಿತ್ಯ 9000 ಕ್ಯೂಸೆಕ್ ನೀರು ಬಿಡುವಂತೆ CWRC ಶಿಫಾರಸು!

ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ಪ್ರತಿನಿತ್ಯ 9000 ಕ್ಯೂಸೆಕ್ ನೀರು ಬಿಡುವಂತೆ CWRC ಶಿಫಾರಸು!
ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ಪ್ರತಿನಿತ್ಯ 9000 ಕ್ಯೂಸೆಕ್ ನೀರು ಬಿಡುವಂತೆ CWRC ಶಿಫಾರಸು!
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ
  • CWRC ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ
  • ಈ ಹಿಂದೆ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಲಾಗಿತ್ತು
  • ಮುಂದಿನ ಕಾನೂನು ಹೋರಾಟದ ಬಗ್ಗೆ ರಾಜ್ಯ ಸರ್ಕಾರ ಚಿಂತನೆ
ನವದೆಹಲಿ/ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ಪ್ರತಿನಿತ್ಯ 9000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ( CWRC ) ಶಿಫಾರಸು ಮಾಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ ಸಿಡಬ್ಲ್ಯುಆರ್​ಸಿ ಈ ಶಿಫಾರಸನ್ನು ಮಾಡಿದೆ. ಈ ಹಿಂದೆ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚಿಸಲಾಗಿತ್ತು. ಆದರೆ, ಇದೀಗ 9 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಆದಾಗ್ಯೂ, ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಮಳೆಯ ಕೊರತೆಯ ನಡುವೆಯೂ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲು ಸೂಚಿಸಿರುವುದು ರೈತರು ಹಾಗೂ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.
ಈ ಆದೇಶದ ಕುರಿತು ಮುಂದಿನ ಕಾನೂನು ಹೋರಾಟ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಇದರ ಬೆನ್ನಲ್ಲೇ, CWRC ನೀಡಿರುವ ಈ ಶಿಫಾರಸಿನ ಕುರಿತು ಚರ್ಚಿಸಲು ನಾಳೆ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿನಿಧಿಗಳು ಯಾವ ರೀತಿಯ ವಾದ ಮಂಡಿಸಲಿದ್ದಾರೆ ಮತ್ತು ಪ್ರಾಧಿಕಾರವು ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸುಪ್ರಿಂ ಕೋರ್ಟ್​ನಲ್ಲಿ ವಿಚಾರಣೆ ಮುಂದೂಡಿಕೆ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ತಮಿಳುನಾಡು ಸರ್ಕಾರದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳಲಾಯಿತು. ಕಳೆದ ವಿಚಾರಣೆಯ ವೇಳೆ ನೀಡಿದ್ದ ನಿರ್ದೇಶನದಂತೆ, ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಹರಿದು ಹೋದ ನೀರಿನ ಅಂಕಿ-ಅಂಶಗಳನ್ನು ನ್ಯಾಯಪೀಠದ ಮುಂದೆ ಮಂಡಿಸಿತು.
ವಿಚಾರಣೆ ವೇಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಗೆ ಸರಿಯಾಗಿ ನಿರ್ದೇಶನ ನೀಡುತ್ತಿಲ್ಲ ಎಂದು ತಮಿಳುನಾಡು ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, "ಹಾಗಿದ್ದರೆ ನೀವು CWMA ಬಳಿ ಹೋಗಿ, ಇಲ್ಲಿ ಯಾಕೆ ಬಂದಿದ್ದೀರಾ?" ಎಂದು ತಮಿಳುನಾಡಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಮಿಳುನಾಡು ಪರ ವಕೀಲರು, ನಾಳೆ CWMA ಸಭೆ ಇದೆ, ನಾವು ಅವರ ಬಳಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ನಾವು ಈಗಾಗಲೇ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಟ್ಟಿದ್ದೇವೆ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. "ನೀರು ಬಿಟ್ಟಿದ್ದಾರೆ ಅಂದ್ಮೇಲೆ ಇನ್ಯಾವ ಸಮಸ್ಯೆ?" ಎಂದು ಪ್ರಶ್ನಿಸಿದ ನ್ಯಾಯಪೀಠ, ಈ ಕುರಿತು ಹೆಚ್ಚಿನ ಪರಿಶೀಲನೆಗಾಗಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿ ಆದೇಶಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net