ಮೇವನ್ನು ಕತ್ತರಿ, ಸಂಸ್ಕರಿಸಿ ಬಳಸಿ fodder

ಮೇವನ್ನು ಕತ್ತರಿ, ಸಂಸ್ಕರಿಸಿ ಬಳಸಿ fodder
ಮೇವನ್ನು ಕತ್ತರಿ, ಸಂಸ್ಕರಿಸಿ ಬಳಸಿ fodder
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಬಮುಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಸಲಹೆ
ಚನ್ನಪಟ್ಟಣ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ನೀಗಿಸಲು ಸೈಲೇಜ್ ಯಂತ್ರ ಸಹಕಾರಿಯಾಗಿದೆ. ರೈತರು ಈ ಯಂತ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಮುಲ್ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಸಲಹೆ ನೀಡಿದರು. fodder
ತಾಲೂಕಿನ ಹಾರೋಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ರಸಮೇವು ಯಂತ್ರದ ಕಾರ್ಯ ನಿರ್ವಹಣೆ ಬಗ್ಗೆ ಹಾಲು ಉತ್ಪಾದಕ ರೈತರಿಗೆ ಮಾಹಿತಿ ಪ್ರಾತ್ಯಕ್ಷಿಕೆ ನೀಡಿದ ಅವರು, ಬೇಸಿಯಲ್ಲಿ ಮಳೆ ಇಲ್ಲದೆ ಮೇವಿನ ಕೊರತೆ ಉಂಟಾಗುತ್ತದೆ. ಪರಿಣಾಮ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಬೇಸಿಗೆಯಲ್ಲೂ ಹಾಲಿನ ಇಳುವರಿ ಕುಂಠಿತಗೊಳ್ಳದಂತೆ ರೈತರು ಮೇವನ್ನು ಐದಾರು ತಿಂಗಳು ಸಂಗ್ರಹಿಸಿ ಬೇಸಿಗೆಯಲ್ಲಿ ಬಳಸಿಕೊಂಡರೆ ಅನುಕೂಲವಾಗುತ್ತದೆ. ಬೇಸಿಗೆಯಲ್ಲೂ ಮೇವಿನ ಕೊರತೆ ಇಲ್ಲದಂತೆ ಹೈನೋದ್ಯಮದಲ್ಲಿ ಲಾಭ ಪಡೆದು ಪ್ರಗತಿ ಸಾಧಿಸಬೇಕು ಎಂದು ಕರೆನೀಡಿದರು.
ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಸೈಲೇಜ್ ಸಿಸ್ಟಮ್‌ಅನ್ನು ಬಮುಲ್ ಮೂಲಕ ಸಬ್ಸಿಡಿ ದರದಲ್ಲಿ ನೀಡಲು ಮುಂದಾಗಿದ್ದಾರೆ. ಈ ಯಂತ್ರವನ್ನು ಸಂಘದಿಂದ ಖರೀದಿ ಮಾಡಿ ಹಾಲು ಉತ್ಪಾದಕ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಹಾಗಾಗಿ ರೈತರು ಸೈಲೇಜ್ (ರಸಮೇವು) ಯಂತ್ರದ ಸದ್ಬಳಕೆ ಪಡೆಯುವಂತೆ ತಿಳಿಸಿದರು.
ಬಮುಲ್ ಶಿಬಿರ ಉಪ ವ್ಯವಸ್ಥಾಪಕ ಡಾ.ಕಿರಣ್ ಮಾತನಾಡಿ, ರೈತರು ಮಳೆಗಾಲದಲ್ಲಿ ಮೇವನ್ನು ಕೊಯ್ದು ಚಾಪ್‌ಕಟರ್‌ನಲ್ಲಿ ಕತ್ತರಿಸಿ, ಬಳಸಲು ಒಂದು ದಿನವೇ ಬೇಕಾಗುತ್ತದೆ. ಸೈಲೇಜ್ (ರಸಮೇವು) ಯಂತ್ರದ ಮೂಲಕ ಸೈಲೇಜ್ ಮಾಡಿಕೊಂಡರೆ ಆ ಮೇವನ್ನು 6 ತಿಂಗಳವರೆಗೆ ಬಳಸಬಹುದು. ಮೇವು ಕೊಳೆಯುವುದಿಲ್ಲ, ಕೆಡುವುದಿಲ್ಲ. ಈ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ರೈತರಿಗೆ ಸೈಲೇಜ್ ಸಿಸ್ಟಂ ಅನುಕೂಲವಾಗಲಿದೆ. ಇಲ್ಲಿ ಸೈಲೇಜ್ ಮಾಡಿದ 50 ಕೆಜಿ ತೂಕದ ಮೇವನ್ನು ಸಂಗ್ರಹಿಸುವ ಬ್ಯಾಗ್‌ಗೆ ಮಾತ್ರ 50 ರೂ. ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ರೈತರು ತಂದಿದ್ದ ಮೇವನ್ನು ಸೈಲೆಜ್ ಯಂತ್ರಕ್ಕೆ ಹಾಕಿ ರೈತರಿಗೆ ಮೇವು ಸೈಲೇಜ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಈ ವೇಳೆ ಕೃಷಿ ಅಧಿಕಾರಿ ಜಿತೇಂದ್ರಕುಮಾರ್, ಬಮುಲ್ ಶಿಬಿರದ ವಿಸ್ತರಣಾಧಿಕಾರಿಗಳಾದ ಹೊನ್ನಪ್ಪ ಪೂಜಾರಿ, ರಾಜು, ರಾಜೇಶ್, ನಂದಿತಾ, ಝರಿನಾ, ಹಾಲು ಉತ್ಪಾದಕ ರೈತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net