ನಕಲಿ ವೈದ್ಯರಿಗೆ ಕಡಿವಾಣ

cut-down-on-fake-doctors
cut-down-on-fake-doctors
Published on

ಪ್ರಮುಖ ಮುಖ್ಯಾಂಶಗಳು

  • * ಸದ್ಯ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಔಷಧಗಳು ಸರಬರಾಜು ಆಗಿಲ್ಲ.
  • * ಹಣ್ಣುಗಳನ್ನು ಮಾಗಿಸಲು ರಾಸಾಯನಿಕ ಬಳಕೆ ನಿಷಿದ್ಧ
ಬೆಂಗಳೂರು:

ರಾಜ್ಯದಲ್ಲಿ ನಕಲಿ ಔಷಧಗಳ ಜತೆಗೆ ನಕಲಿ ವೈದ್ಯರಿಗೂ ಕಡಿವಾಣ ಹಾಕಲಾಗುವುದು. ಎಲ್ಲೆಡೆ ನಕಲಿ ಹಾವಳಿ ವ್ಯಾಪಕವಾಗಿದ್ದು, ಇದರ ತಡೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯಸೌಧದಲ್ಲಿ ಸೋಮವಾರ ರಾಜ್ಯ ಮತ್ತು ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪರವಾನಗಿ ಇಲ್ಲದವರು ನಕಲಿ ಔಷಧಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಅಂತಹವರನ್ನು ಪತ್ತೆ ಮಾಡಿ, ಕ್ರಮಕೈಗೊಳ್ಳಲಾಗುವುದು. ಸದ್ಯ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಔಷಧಗಳು ಸರಬರಾಜು ಆಗಿಲ್ಲ. ಸರಬರಾಜು ಆಗಿರುವ ಮಾಹಿತಿ ಬಂದರೆ ತನಿಖೆ ನಡೆಸಲಾಗುವುದು. ಜತೆಗೆ ನಿಗದಿತ ಔಷಧದ ಸರಬರಾಜನ್ನೂ ನಿಲ್ಲಿಸಲಾಗುವುದು. ಆಸ್ಪತ್ರೆಗಳು, ಔಷಧ ವಿತರಕರು ಸರಿಯಾಗಿದ್ದರೆ ಜನರಿಗೆ ಸಮಸ್ಯೆಯಾಗುವುದಿಲ್ಲ ಎಂದರು.
ಇದೇ ವೇಳೆ ಪನೀರ್ ಸೇರಿ ಕೃತಕ ಆಹಾರ ಉತ್ಪನ್ನಗಳ ನಿಷೇಧದ ಬಗ್ಗೆ ಮಾತನಾಡಿದ ಸಚಿವರು, ಆಹಾರ ಸುರಕ್ಷತೆ ಇಲಾಖೆ ಆಯುಕ್ತರಿಗೆ ಪನೀರ್ ಸೇರಿ ಕೃತಕ ಆಹಾರ ಉತ್ಪನ್ನಗಳನ್ನು ವರ್ಷದ ಅವಧಿಗೆ ಮಾತ್ರ ನಿಷೇಧಿಸುವ ಅಧಿಕಾರವಿದೆ. ಆದ್ದರಿಂದ ಪ್ರತಿ ವರ್ಷ ಈ ಬಗ್ಗೆ ಆದೇಶ ಹೊರಡಿಸಲಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಶಾಶ್ವತವಾಗಿ ನಿಷೇಧಿಸಲು ಇರುವ ತೊಡಕುಗಳನ್ನು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ರಾಸಾಯನಿಕ ಬಳಕೆ

ಹಣ್ಣುಗಳನ್ನು ಮಾಗಿಸಲು ರಾಸಾಯನಿಕಗಳನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಹಣ್ಣಿಗೆ ರಾಸಾಯನಿಕ ಬಳಕೆ ಮಾಡಬಾರದು. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅಪಾಯಕಾರಿಯಲ್ಲದ ಕೆಲ ರಾಸಾಯನಿಕಗಳನ್ನು ಮಾರಾಟ ಮಾಡಲು ಅವಕಾಶವಿದೆ. ಹಣ್ಣಿನ ವ್ಯಾಪಾರಿಗಳು ಆ ರಾಸಾಯನಿಕ ಬಳಸಿ, ಹಣ್ಣುಗಳನ್ನು ಮಾಗಿಸುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಜನರೂ ಜಾಗೃತರಾಗಬೇಕಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net