ರಾಯಚೂರು ಉತ್ಸವದಲ್ಲಿ ಎರಡನೇ ದಿನ ಮೇಳೈಸಿದ ಜನಜಂಗುಳಿ

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಹಮ್ಮಿಕೊಂಡ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಎರಡನೇ ದಿನ ಶುಕ್ರವಾರ ಜನರು ಸಾಗರೋಪದಿಯಲ್ಲಿ ಹರಿದುಬಂದರು.
ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಹಮ್ಮಿಕೊಂಡ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಎರಡನೇ ದಿನ ಶುಕ್ರವಾರ ಜನರು ಸಾಗರೋಪದಿಯಲ್ಲಿ ಹರಿದುಬಂದರು.
Published on

ಪ್ರಮುಖ ಮುಖ್ಯಾಂಶಗಳು

  • ಸೂರ್ಯಾಸ್ತದ ಬಳಿಕ ಹೆಚ್ಚಿದ ಮೆರುಗು
  • ಸಾಂಸ್ಕೃತಿಕ ವೇದಿಕೆಗಳತ್ತ ಮಂದಿ ಸವಾರಿ
ರಾಯಚೂರು: ಎಡೆದೊರೆ ನಾಡು ರಾಯಚೂರು ಉತ್ಸವದ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನವಾದ ಶುಕ್ರವಾರ ಜನಸಾಗರವೇ ಹರಿದು ಬಂತು. ಉದ್ಘಾಟನಾ ಸಮಾರಂಭ ನಡೆದ ಕೃಷಿ ವಿವಿ ಸಭಾಂಗಣ ಸೇರಿದಂತೆ ಇತರ ನಾಲ್ಕು ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿ ಕಂಡುಬಂತು.
ಎರಡನೇ ದಿನದಂದು ಜಿಲ್ಲಾಡಳಿತವು ರಾಯಚೂರು ನಗರದ ಅನೇಕ ಕಡೆಗಳಿಂದ ಉತ್ಸವಕ್ಕೆ ಬಂದು ಹೋಗಲು ಶಾಲಾ-ಕಾಲೇಜುಗಳ ಬಸ್ ಮೂಲಕ ಉಚಿತ ಸೇವೆ ಕಲ್ಪಿಸಿತ್ತು. ಇದರೊಂದಿಗೆ ರಾಯಚೂರು ಪರಿಸರದೊಳಗೆ ಸಾರ್ವಜನಿಕರ ಎಲ್ಲ ರೀತಿಯ ವಾಹನಗಳು ಸಂಚರಿಸಲು ಮುಕ್ತ ಅವಕಾಶ ಮಾಡಿಕೊಡಲಾಗಿತ್ತು.
ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಜನರು ಖಾಸಗಿ ವಾಹನಗಳಲ್ಲಿ ಆಗಮಿಸಿದ್ದರು. ಕೆಲವು ಪ್ರೌಢಶಾಲೆಗಳ ಶಿಕ್ಷಕರು ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನು ಕರೆತಂದು ಉತ್ಸವ ವೀಕ್ಷಣೆ ಮಾಡಿಸಿದರು.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಧಿಕಾರಿಗಳು: ಬೆಳಗ್ಗೆಯಿಂದ ಸಂಜೆಯವರೆಗೆ ಬಿರು ಬಿಸಿಲಿದ್ದರಿಂದ ಮಧ್ಯಾಹ್ನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡು ಬರಲಿಲ್ಲ. ಆದರೆ ಸೂರ್ಯಾಸ್ತದ ನಂತರ ಎಲ್ಲ ವೇದಿಕೆಗಳಿಗೆ ಜನರು ನಿಧಾನವಾಗಿ ಬರಲು ಆರಂಭಿಸಿದರು. ರಾತ್ರಿಯಾಗುತ್ತಿದ್ದಂತೆ ಜನಸ್ತೋಮ ಹೆಚ್ಚಾಗುತ್ತಲೇ ಹೋಯಿತು. ಎಲ್ಲ ವೇದಿಕೆಗಳ ಮುಂಭಾಗದಲ್ಲಿ ಜನ ಕಿಕ್ಕಿರಿದು ಸೇರುತ್ತಿರುವುದನ್ನು ನೋಡಿ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಪೊಲೀಸರಿಗೆ ಸವಾಲಾದ ನಿಯಂತ್ರಣ

ಉತ್ಸವದ ಜತೆಗೆ ಕೃಷಿ ಮೇಳ ಹಾಗೂ ಆಹಾರ ಮೇಳ ಸೇರಿದಂತೆ ಒಟ್ಟು 313 ಮಳಿಗೆಗಳಲ್ಲೂ ಜನಜಂಗುಳಿ ಇತ್ತು. ಸಂಜೆ ಜನದಟ್ಟಣೆ ಹೆಚ್ಚಾದ ಕಾರಣ ಸಂಚಾರ ನಿಯಂತ್ರಿಸುವುದು ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಸುರಕ್ಷಾ ಸಿಬ್ಬಂದಿಗೆ ಸವಾಲಾಯಿತು. ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಜನದಟ್ಟಣೆ ನಿಯಂತ್ರಿಸಲು ನೆರವಾದರು.
ದೂರದ ಊರುಗಳಿಂದ ಬಂದಿದ್ದ ಅಧಿಕಾರಿಗಳು ಹಾಗೂ ಕೆಲ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗಾಗಿ ಸುಮಾರು 110 ಸಂಚಾರಿ (ಮೊಬೈಲ್)ಶೌಚಗೃಹಗಳನ್ನು ಉತ್ಸವದ ಆವರಣದಲ್ಲಿ ಇರಿಸಲಾಗಿತ್ತು ಹಾಗೂ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇಂದು ಡಿಸಿಎಂ ಶಿವಕುಮಾರ್ ಆಗಮನ

ಮೂರು ದಿನಗಳ ರಾಯಚೂರು ಜಿಲ್ಲಾ ಉತ್ಸವಕ್ಕೆ ಶನಿವಾರ ತೆರೆ ಬೀಳಲಿದೆ. ನಗರದ ಕೃಷಿ ವಿವಿಯ ಆವರಣದಲ್ಲಿ ಶನಿವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ವಹಿಸಲಿದ್ದಾರೆ. ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಕನ್ನಡ-ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ,
ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಸೇರಿದಂತೆ ಅನೇಕ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದ ನಂತರ ಆಕರ್ಷಕ ಫೈರ್ ಶೋ ನಡೆಯಲಿದೆ. ಬಳಿಕ ಎಂ.ಜೆ.-5 ತಂಡದಿಂದ ನೃತ್ಯ ಪ್ರದರ್ಶನ, ಆಲ್‌ಓಕೆ ತಂಡದಿಂದ ಸಂಗೀತ ಸಂಜೆ ಹಾಗೂ ಖ್ಯಾತ ಗಾಯಕ ವಿಜಯ ಪ್ರಕಾಶ ಅವರಿಂದ ಸಂಗೀತ ರಸದೌತಣ ಕಾರ್ಯಕ್ರಮಗಳು ಜರುಗಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net