ಐಪಿಎಲ್​​​​ ಕ್ರೇಜ್​ಗೆ ಲಕ್ಷ ಲಕ್ಷ ಕಳ್ಕೊಂಡ ಟೆಕ್ಕಿ; ಚಿನ್ನಸ್ವಾಮಿ ಸ್ಟೇಡಿಯಂನ ಸೂಪರ್ವೈಸರ್​ ಎಂದು ಪಂಗನಾಮ..IPL Ticket Scam Bengaluru

IPL Ticket Scam Bengaluru
IPL Ticket Scam Bengaluru
Published on

ಪ್ರಮುಖ ಮುಖ್ಯಾಂಶಗಳು

  • ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ
  • ಆರ್​ಸಿಬಿ ಟಿಕೆಟ್​​ಗಾಗಿ ಒದ್ದಾಡುತ್ತಿದ್ದ ಟೆಕ್ಕಿಗೆ 1.46 ಲಕ್ಷ ರೂ. ವಂಚಿಸಿದ ಇನ್​ಸ್ಟಾಗ್ರಾಂ ಬಳಕೆದಾರ
  • ಕ್ರೀಡಾಂಗಣದ ಅಧಿಕಾರಿ ಎಂದು ಹೇಳಿಕೊಂಡು ವಿಐಪಿ ಟಿಕೆಟ್ ಮತ್ತು ಫುಡ್ ಕೂಪನ್ ಕೊಡಿಸುವ ಆಮಿಷ
ಬೆಂಗಳೂರು: ಆರ್​ಸಿಬಿ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ ಎಂದರೆ ಸಾಕು ಕ್ರೀಡಾ ಪ್ರೇಮಿಗಳು ಹೇಗಾದರೂ ಸರಿ ಟಿಕೆಟ್​ ಪಡೆದುಕೊಂಡು ಬಿಡಬೇಕು ಎನ್ನುವ ಗುಂಗಿನಲ್ಲಿರುತ್ತಾರೆ. ಎಷ್ಟೇ ಖರ್ಚಾದರೂ ಸರಿ, ಬ್ಲಾಕ್ ಟಿಕೆಟ್ ಆದರೂ ಸರಿ ಎಂದು ಸಾವಿರಾರು ರೂಪಾಯಿ ಖರ್ಚು ಮಾಡಲು ಮುಂದಾಗುತ್ತಾರೆ. ಆದರೆ, ಈ ಹುಚ್ಚು ಅಭಿಮಾನದಿಂದಾಗಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು( Bengaluru techie) 1.46 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಇನ್​ಸ್ಟಾಗ್ರಾಂನಲ್ಲಿ ಟಿಕೆಟ್​ ಕೊಡಿಸುವ ವಿಚಾರಕ್ಕೆ ಪರಿಚಯವಾದ ವಂಚಕ ಸುಮಿತ್​ ಬಿಸ್ವಾಲ್​ ಎಂಬಾತನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಹಣ ಪಡೆದು ಪರಾರಿಯಾಗಿರುವ ವಂಚಕನ ಹುಡುಕಾಟ ಮುಂದುವರೆಸಿದ್ದಾರೆ.
ಭಾನುವಾರ ಏ.5ರಂದು Chennai Super Kings ಹಾಗೂ Royal Challengers Bengaluru ನಡುವಣ ಪಂದ್ಯ ಏರ್ಪಟ್ಟಿದೆ. ಈ ಹೈವೋಲ್ಟೇಜ್​ ಪಂದ್ಯದ ಟಿಕೆಟ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಪಡೆಯಲು ಬೆಂಗಳೂರಿನ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬರೊಬ್ಬರಿ 1.46 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.

ದೂರಿನಲ್ಲಿ ಏನಿದೆ?

ಬೆಂಗಳೂರಿನ ನಾರಾಯಣ ಪುರ ನಿವಾಸಿಯಾದ ಸಂತ್ರಸ್ತ ಟೆಕ್ಕಿ ಮಹದೇವಪುರ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಹೀಗಿದೆ,
ಇನ್​ಸ್ಟಾಗ್ರಾಂನಲ್ಲಿ ಟಿಕೆಟ್​ ಮಾರಾಟ ಮಾಡುವವರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಸುಮಿತ್​ ಬಿಸ್ವಾಲ್​ ಎಂಬ ವ್ಯಕ್ತಿ ಪರಿಚಯನಾದ. ನಾನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಕೌಂಟರ್‌ನಲ್ಲಿ ಸೀನಿಯರ್ ಸೂಪರ್ವೈಸರ್ ಎಂದು ಸುಳ್ಳು ಹೇಳಿಕೊಂಡಿದ್ದ ವಂಚಕ, ಟಿಕೆಟ್‌ಗಳ ಜೊತೆಗೆ ವಿಐಪಿ ಸೌಲಭ್ಯಗಳು, ಫುಡ್ ಕೂಪನ್‌ಗಳು ಮತ್ತು ಐಡಿ ಕಾರ್ಡ್‌ಗಳನ್ನು ಕೊಡಿಸುವುದಾಗಿ ನಂಬಿಸಿದ್ದ ಎನ್ನಲಾಗಿದೆ.
ಸಂತ್ರಸ್ತ ಯುವಕನಿಗೆ ನಂಬಿಸುವ ಸಲುವಾಗಿ ವಂಚಕ ಕನ್ಫರ್ಮೇಷನ್​ ಇಮೇಲ್​ ಅನ್ನು ಕಳುಹಿಸಿದ್ದಾನೆ. ಇದನ್ನು ನಂಬಿದ ಆತ ಎರಡು ಟಿಕೆಟ್‌ಗಳಿಗೆ ತಲಾ 3,700 ರೂ. ಕೇಳಿದ್ದ ಆತ, ನಂತರ 'ರಿಫಂಡಬಲ್ ಸೆಕ್ಯೂರಿಟಿ ಡೆಪಾಸಿಟ್', ಹೆಚ್ಚುವರಿ ಐಡಿ ಕಾರ್ಡ್ ಮತ್ತು ಫುಡ್ ಕೂಪನ್‌ಗಳ ಹೆಸರಿನಲ್ಲಿ ಹಂತಹಂತವಾಗಿ ಹಣವನ್ನು ಪಾವತಿ ಮಾಡಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗೇಟ್​ ಬಳಿ ಟಿಕೆಟ್ ಕೊಡ್ತೇನೆ ಎಂದಿದ್ದ ಆಸಾಮಿ

ಇಷ್ಟಕ್ಕೆ ನಿಲ್ಲದೆ ವಂಚಕನು ಸಂತ್ರಸ್ತ ಯುವಕನ ಬಳಿ ಮತ್ತೆ ಮತ್ತೆ ಹಣವನ್ನು ಕೇಳಿದ್ದಾನೆ ಹಾಕಿಸಿಕೊಂಡಿದ್ದಾನೆ. ತನ್ನ ಖಾತೆಯಲ್ಲಿ ಹಣ ಖಾಲಿಯಾದ ನಂತರ, ಸಂತ್ರಸ್ತ ತನ್ನ ತಾಯಿ ಖಾತೆಯಿಂದಲೂ ಹಣವನ್ನು ವರ್ಗಾಯಿಸಿದ್ದಾನೆ. ಭಾನುವಾರ ಕ್ರೀಡಾಂಗಣದ ಗೇಟ್​ ಸಂಖ್ಯೆ 10ರ ಬಳಿ ಟಿಕೆಟ್​ ಕಲೆಕ್ಟ್​ ಮಾಡಿಕೊಳ್ಳಲು ಹೇಳಿದ್ದ ಆತ. ಕರೆಗೆ ಸಿಗದಂತೆ ಹಣದೊಂದಿಗೆ ಮಾಯವಾಗಿದ್ದಾನೆ ಎಂದು ಟೆಕ್ಕಿ ದೂರು ನೀಡಿದ್ದಾನೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net