ಸವಾಲು ಎದುರಿಸಲು ಧೈರ್ಯ ಅತ್ಯಗತ್ಯ: ಸಚಿವ ಎಂ.ಬಿ. ಪಾಟೀಲ್ ಅಭಿಮತ

 ಸಚಿವ ಎಂ.ಬಿ. ಪಾಟೀಲ್
ಸಚಿವ ಎಂ.ಬಿ. ಪಾಟೀಲ್
Published on
ಕುಪ್ಪಂ: ಸಮಕಾಲೀನ ಜಗತ್ತಿನ ಜಟಿಲತೆ ಮತ್ತು ಅದು ಒಡ್ಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಧೈರ್ಯ ಅತ್ಯಗತ್ಯ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರೇರಣಾ-2026’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ನಿಜವಾದ ಬೌದ್ಧಿಕ ಆಸ್ತಿಯ ನಿರ್ಮಾಣ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸುತ್ತಿದೆ. ವಿಜ್ಞಾನಿ ರಾಮಜಿ ರಾಘವನ್ ಸ್ಥಾಪಿಸಿರುವ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಶನ್ ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ. 172 ಎಕರೆ ವಿಶಾಲ ಜಾಗದಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಫೌಂಡೇಶನ್, ಜ್ಞಾನವನ್ನು ಸೃಷ್ಟಿಸುತ್ತ, ಗ್ರಾಮಾಂತರ ಪ್ರದೇಶದೊಂದಿಗೆ ಬೆಸೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಈವರೆಗೆ ಐಟಿ ಹಬ್ ಆಗಿತ್ತು. ಈಗ ಡೀಪ್ ಟೆಕ್ ತಂತ್ರಜ್ಞಾನ ಧಾರೆಗಳ ತಾಣವಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಗಳಿಗಾಗಿ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿಭಾವಂತ ಯುವಜನರ ಕೈಯಲ್ಲಿದೆ. ಕರ್ನಾಟಕವು ತಂತ್ರಜ್ಞಾನ, ಏರೋಸ್ಪೇಸ್ ಮುಂತಾದ ವಲಯಗಳಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ 900 ಜಿಸಿಸಿ ಕೇಂದ್ರಗಳಿವೆ. ಬಂಡವಾಳ ಹೂಡಿಕೆಗೆ ಅಗತ್ಯವಾದ ಪರಿಸರ ವ್ಯವಸ್ಥೆ ನಮ್ಮಲ್ಲಿದೆ ಎಂದು ಸಚಿವರು ಹೇಳಿದರು.
10 ಕೋಟಿ ಸಸಿ ನೆಡಲು ಗುರಿ:
ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್ ಮತ್ತು ಸೆಮಿಕಂಡಕ್ಟರ್ ಸೌಲಭ್ಯ ಗ್ರಾಮೀಣ ಮಕ್ಕಳಿಗೂ ಸಿಗಬೇಕು. ಉದ್ಯಮಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು. ಕೇವಲ ಯಂತ್ರೋಪಕರಣಗಳಿಂದ ಪ್ರಯೋಜನವಿಲ್ಲ. ಇದರ ಜತೆಗೆ ಹೊಸತನ್ನು ಸಾಧಿಸುವ ಛಲವಿರಬೇಕು. ವಿಜಯಪುರ ಜಿಲ್ಲೆಯಲ್ಲಿ ನಾನು ಕೋಟಿ ವೃಕ್ಷ ಅಭಿಯಾನ ಶುರು ಮಾಡಿದ್ದು ಹೀಗೆ. ಈಗ ನಾವು ಐದು ಕೋಟಿ ಗಿಡ ನೆಟ್ಟು, ಪೋಷಿಸಿದ್ದೇವೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಖ್ಯೆ ಹತ್ತು ಕೋಟಿ ತಲುಪಲಿದೆ. ಇದರಿಂದಾಗಿ ಬರಪೀಡಿತ ಪ್ರದೇಶದಲ್ಲಿ ಹಸಿರು ಹೊದಿಕೆ ಸೃಷ್ಟಿಯಾಗಿದೆ. ಹಿಂದೆ ನೀರಾವರಿ ಸಚಿವನಾಗಿದ್ದಾಗ 3 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೆ ಎಂದು ಸಚಿವರು ವಿವರಿಸಿದರು.
ಪ್ರತಿಷ್ಠಾನದ ಸಂಸ್ಥಾಪಕ ರಾಮಜಿ ರಾಘವನ್, ಟಿ.ಎಸ್. ಸುರೇಶ್ ಸೇರಿ ಸಾವಿರಾರು ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net