ಪಬ್-ಕ್ಲಬ್​ಗಳಲ್ಲಿ ಮೇಳೈಸುವ ಹಾಡುಗಳಿಗೂ ಕಾಪಿರೈ​ಟ್!

ಪಬ್​ ದೃಶ್ಯ
ಪಬ್​ ದೃಶ್ಯ
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್ ಸೇರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಪ್ರಿಯ ಗಾಯಕರು ಹಾಡಿರುವ ಹಾಡುಗಳನ್ನಾಗಲಿ ಅಥವಾ ಪ್ರತಿಷ್ಠಿತ ಸಾಹಿತಿಗಳು ಬರೆದಿರುವ ಸಾಹಿತ್ಯ ಕೃತಿಗಳನ್ನು ಅನುಮತಿ ಪಡೆಯದೇ ಲೈವ್, ರೆಕಾರ್ಡಿಂಗ್ ಸೇರಿ ಇನ್ನಿತರ ಯಾವುದೇ ಮಾದರಿಯಲ್ಲಿ ಬಳಸುವಂತಿಲ್ಲ. ಒಂದು ವೇಳೆ ನಿಯಮ ಬಾಹಿರವಾಗಿ ಬಳಸಿದಲ್ಲಿ ಅಂತಹವರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಲಿದೆ.

ಹೌದು, ಕಾಪಿರೈಟ್ ಕಾಯ್ದೆ-1957ರ ನಿಯಮಾವಳಿ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ನೋಂದಣಿಯಾಗಿರುವ ದ ಇಂಡಿಯನ್ ಪರ್ಫಾರ್ವಿುಂಗ್ ರೈಟ್ ಸೊಸೈಟಿ ಲಿಮಿಟೆಡ್ (ಐಪಿಆರ್​ಎಸ್) ಮನವಿ ಮೇರೆಗೆ ರಾಜ್ಯದಲ್ಲಿ ಕಾಪಿರೈಟ್ ಆಕ್ಟ್ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ದೆಹಲಿ, ಕೋಲ್ಕತ ಸೇರಿ ಕೆಲ ರಾಜ್ಯಗಳಲ್ಲಿ ಈಗಾಗಲೇ ಕಾಪಿರೈಟ್ ಕಾಯ್ದೆ ಅನುಷ್ಠಾನಕ್ಕೆ ತರಲಾಗಿದೆ. ಧ್ವನಿ ರೆಕಾರ್ಡಿಂಗ್​ಗಳು ಮತ್ತು ನೇರ ಪ್ರದರ್ಶನಗಳಂತಹ ಸಂಗೀತ ಸಂಯೋಜನೆಗಳಿಗೆ ಸಂಬಂಧಿಸಿದ ಸಂಗೀತ ಮತ್ತು ಸಾಹಿತ್ಯ ಕೃತಿಗಳಿಗೆ ಸಂಬಂಧಿಸಿದ ಕೃತಿಸ್ವಾಮ್ಯ ಶೋಷಣೆ, ಬಳಕೆ ಮತ್ತು ರಾಯಲ್ಟಿ ಸಂಗ್ರಹಕ್ಕೆ ಸಂಬಂಧಿಸಿದ ವಿಷಯವನ್ನು ನಿರ್ವಹಿಸಲು ಕೇಂದ್ರ ಸರ್ಕಾರವು ಐಪಿಆರ್​ಎಸ್​ಗೆ ಅಧಿಕಾರ ನೀಡಿದೆ.

19000ಕ್ಕೂ ಹೆಚ್ಚು ಪ್ರಮುಖ ಗೀತರಚನೆಕಾರರು, ಸಂಯೋಜಕರು ಮತ್ತು ಪ್ರಕಾಶಕರು ಐಪಿಆರ್​ಎಸ್​ನಲ್ಲಿ ನೋಂದಣಿಯಾಗಿದ್ದಾರೆ. ನೋಂದಾಯಿತ ಸದಸ್ಯರು ನೀಡುವ ಹಕ್ಕುಗಳ ಆಧಾರದ ಮೇಲೆ ರಾಯಧನವನ್ನು ಸಂಗ್ರಹಿಸುತ್ತಿದೆ. ಸಂಗ್ರಹಿಸಿದ ರಾಯಧನವನ್ನು ಅದರ ಗೀತರಚನೆಕಾರರು, ಸಂಗೀತ ಸಂಯೋಜಕರು ಮತ್ತು ಸಂಗೀತ ಪ್ರಕಾಶಕರಿಗೆ ವಿತರಣೆ ಮಾಡುತ್ತಿದೆ. ಅನುಮತಿ ಇಲ್ಲದೆ ಬಳಕೆ ಹೆಚ್ಚಿರುವುದರಿಂದ ಸಂಯೋಜಕರು, ಲೇಖಕರು ಮತ್ತು ಪ್ರಕಾಶಕರಿಗೆ ಆರ್ಥಿಕ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಐಪಿಆರ್​ಎಸ್ ಸಲ್ಲಿಸಿರುವ ಪ್ರಸ್ತಾವನೆ ಮೇರೆಗೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ 2026ರ ಜ.9ರಂದು ಸರ್ಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಪತ್ರ ರವಾನಿಸಿದೆ. ಬೇರೆ ರಾಜ್ಯಗಳಲ್ಲಿ ರೂಪಿಸಿರುವ ನಿಯಮ ಆಧರಿಸಿ ಕರ್ನಾಟಕದಲ್ಲೂ ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳು, ಜಿಲ್ಲಾ ಎಸ್ಪಿಗಳಿಗಳಿಗೆ ಲಿಖಿತ ಸೂಚನೆ ಕೊಡಲಾಗಿದೆ.

600 ಕೋಟಿ ರೂ. ಸಂಗ್ರಹ

ಸಂಯೋಜಕರು, ಗೀತ ರಚನೆ ಕಾರರು ಮತ್ತು ಸಂಗೀತ ಪ್ರಕಾಶಕರು ಸೇರಿ ಮೂಲ ಮಾಲೀಕರಿಗೆ ಬರಬೇಕಾದ ನ್ಯಾಯಯುತ ರಾಯಧನಕ್ಕಾಗಿ ಐಪಿಆರ್​ಎಸ್ ಕಟ್ಟುನಿಟ್ಟಿನ ನಿಯಮ ಜಾರಿಗೆ ಎಲ್ಲ ರಾಜ್ಯಗಳಿಗೆ ಒತ್ತಾಯಿಸಿದೆ. 2025ರಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ 600 ಕೋಟಿ ರೂ. ರಾಯಲ್ಟಿ ಬಂದಿದೆ.

100 ಮಿಲಿಯನ್ ಹಾಡು ಲಭ್ಯ

ಡಿಜಿಟಲ್ ಪ್ಲಾಟ್​ಫಾಮ್ರ್ ಗಳಲ್ಲಿ 100 ಮಿಲಿಯನ್​ಗಿಂತಲೂ ಹೆಚ್ಚು ಹಾಡುಗಳು ಈಗ ಲಭ್ಯವಿವೆ. ಹಿಂದಿನ 3 ವರ್ಷಗಳಲ್ಲಿ ಐಪಿಆರ್​ಎಸ್ 1000 ಕೋಟಿ ರೂ.ಗಳಿಗಿಂತ ಹೆಚ್ಚು ರಾಯಧನ ಸಂಗ್ರಹಿಸಿದ್ದು, 8200ಕ್ಕೂ ಹೆಚ್ಚು ಸದಸ್ಯರಿಗೆ ವಿತರಿಸಿದೆ.

ಬೇರೆ ರಾಜ್ಯಗಳಲ್ಲಿ ನಿಯಮ ಏನಿದೆ?

  • ಐಪಿಆರ್​ಎಸ್ ಮನವಿ ಮೇರೆಗೆ ದೇಶದ ಹಲವು ರಾಜ್ಯಗಳಲ್ಲಿ ಕಾಪಿರೈಟ್ ಕಾಯ್ದೆ ಜಾರಿ
  • ಮೂಲ ಮಾಲೀಕರ ಅನುಮತಿ ಇಲ್ಲದೆ ಯಾವುದೇ ರೂಪದಲ್ಲಿ ಹಾಡುಗಳ ಬಳಸುವಂತಿಲ್ಲ
  • ಅನುಮತಿ ಇಲ್ಲದೆ ಬಳಕೆ ಮಾಡಿದರೆ ನಿಯಮಾವಳಿ ಪ್ರಕಾರ ಕೇಸ್ ದಾಖಲಿಸಲು ಅವಕಾಶ
  • ಮೂಲ ಮಾಲೀಕರು ಅಥವಾ ಐಪಿಆರ್​ಎಸ್​ನಿಂದ ಅನುಮತಿ ಪಡೆಯುವುದು ಕಡ್ಡಾಯ
  • ಕಾಪಿರೈಟ್ ಕಾಯ್ದೆ 1957ರ ನಿಯಮಾವಳಿ ಅನ್ವಯ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ

ಎಲ್ಲೆಲ್ಲಿ ನಿಯಮ ಅನ್ವಯ?

  • ಸಾರ್ವಜನಿಕ ಸ್ಥಳಗಳು, ವಾಣಿಜ್ಯ ಪ್ರದೇಶ ಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ? ಹೋಟೆಲ್​ಗಳು, ರೆಸ್ಟೋರೆಂಟ್​ಗಳು, ಬಾರ್​ಗಳು, ಡಿಸ್ಕೋಥೆಕ್​ಗಳಲ್ಲಿ ? ಕ್ಲಬ್​ಗಳು, ಅಮ್ಯೂಸ್​ವೆುಂಟ್ ಪಾರ್ಕ್​ಗಳು, ಶಾಪಿಂಗ್ ಮಾಲ್​ಗಳು, ಶೋರೂಂಗಳು
  • ಔತಣಕೂಟ, ಕ್ರೀಡಾಂಗಣ, ಮೈದಾನ ಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು

ಮುಂದೇನು?

ಐಪಿಆರ್​ಎಸ್ ಮನವಿಯಂತೆ ಕಾಪಿರೈಟ್ ಕಾಯ್ದೆ-1957

ಅನುಷ್ಠಾನಕ್ಕೆ ಕ್ರಮ

  • ಸಂಗೀತ, ಸಾಹಿತ್ಯ ಕೃತಿಗಳ ಬಳಕೆಗೆ ಅನುಮತಿ ಪಡೆಯಲು ಪ್ರತ್ಯೇಕ ಮಾರ್ಗಸೂಚಿ
  • ಆಯಾ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳ ಮೇಲೆ ಪೊಲೀಸರ ನಿಗಾ
  • ಪಬ್, ಕ್ಲಬ್​ಗಳಿಗೆ ಭೇಟಿ ಕೊಡುವುದು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಹೊಣೆ ಹಂಚಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net