ಸಮಾವೇಶ ಯಶಸ್ಸಿಗೆ ಸಹಕರಿಸಿ

ಗುಂಡುರಡ್ಡಿ
ಗುಂಡುರಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಧ್ಯಕ್ಷ ಗುಂಡುರಡ್ಡಿ ಮನವಿ
  • ಅನುಮತಿ ಕೋರಿ ಜಿಲ್ಲಾಧಿಕಾರಿ ಭೇಟಿ ಇಂದು
 ಬಸವಕಲ್ಯಾಣ: ಧರ್ಮ, ಪರಿಸರ ಮತ್ತು ರೈತರ ಕಲ್ಯಾಣದ ಸಂಕಲ್ಪದೊಂದಿಗೆ ಕಲ್ಯಾಣದಲ್ಲಿ ಜೂ.28ರಂದು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡ ಬಸವಾದಿ ಶಿವಶರಣರ ಬೃಹತ್​ ಹಿಂದೂ ಸಮಾವೇಶದ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸದೆ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಸಮಾವೇಶದ ಕಾರ್ಯಾಧ್ಯಕ್ಷ ಗುಂಡುರಡ್ಡಿ ಕಮಲಾಪುರೆ ಮನವಿ ಮಾಡಿದ್ದಾರೆ.
ಪೊಲೀಸ್​ ಇಲಾಖೆ ವರದಿ ಆಧರಿಸಿ ತಹಸೀಲ್ದಾರ್​ರು ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಸೋಮವಾರ ಜಿಲ್ಲಾಧಿಕಾರಿ ಭೇಟಿಯಾಗಿ ಅನುಮತಿ ನೀಡುವಂತೆ ಕೋರಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರನ್ನು ಸಹ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಅನುಮತಿ ನೀಡುವ ವಿಶ್ವಾಸವಿದೆ. ಅಗತ್ಯಬಿದ್ದರೆ ನ್ಯಾಯಲಯದ ಮೊರೆ ಹೋಗುವುದಾಗಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನ್ಹೇರಿ ಶ್ರೀಗಳನ್ನು ಕಲ್ಯಾಣ ಪ್ರವೇಶಿಸಲು ಬಿಡುವುದಿಲ್ಲ ಎಂದು ಕೆಲ ಮಠಾಧೀಶರು ಮತ್ತು ಸಂಘಟನೆಗಳು ನಿತ್ಯ ಹೇಳಿಕೆ ನೀಡುವುದರ ಜತೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿರುವುದು ಹಿಂದೂ ಧರ್ಮದ ಅಭಿಮಾನಿಗಳು ಮತ್ತು ಜನತೆಯಲ್ಲಿ ಗೊಂದಲ ಸೃಷ್ಟಿಸಿದೆ ಎಂದರು.
ಹಿಂದೂಗಳ ಕಾರ್ಯಕ್ರಮವನ್ನು ಹಿಂದುಸ್ತಾನದಲ್ಲಿ ಮಾಡುವುದನ್ನು ಬಿಟ್ಟು ಬೇರೆ ದೇಶದಲ್ಲಿ ಮಾಡಬೇಕೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಮುಕ್ತವಾಗಿ ಚರ್ಚಿಸಿ ಎಲ್ಲರೂ ಸೇರಿ ಕಾರ್ಯಕ್ರಮ ಮಾಡೋಣ. ಈಗಾಗಲೇ ತಡೋಳಾ ಶ್ರೀಗಳು ಎಲ್ಲ ಮಠಾಧೀಶರನ್ನು ಖುದ್ದು ಆಹ್ವಾನ ನೀಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ದೀಪಕ ಗಾಯಕವಾಡ, ಸಂದೀಪ ಪಾಟೀಲ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net