

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ರಾಜ್ಯಾಧ್ಯಂತ ನಡೆದ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನಡುವೆ ಭಾನುವಾರ ನಡೆಯಿತು. ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಭಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿಯಿಂದಾಗಿ ಕೆಲ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೊರ ನಡೆದಿರುವ ಘಟನೆ ನಡೆದಿದೆ.
ನಿಯಮಾನುಸಾರ ಪರೀಕ್ಷೆ ಮುಗಿದ ನಂತರವೇ ಅಭ್ಯರ್ಥಿಗಳು ಕೇಂದ್ರದಿಂದ ಹೊರ ಹೋಗಬೇಕು. ಆದರೆ. ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಅಲ್ಲದೇ ಕಾಂಪೌಂಡ್ ಹಾರಿ ಓಡಿ ಹೋಗಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಆ ಕೇಂದ್ರದಲ್ಲಿ 120 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಾರೆ.