ಆರ್​ಟಿಐ ಅರ್ಜಿ ಬಾಕಿ ಹಿನ್ನೆಲೆ ಆಯಾ ಜಿಲ್ಲೆಯಲ್ಲೇ ವಿಲೇವಾರಿಗೆ ಚಿಂತನೆ: ರುದ್ರಣ್ಣ ಹರ್ತಿಕೋಟೆ | RTI

ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸುದ್ದಿಗೋಷ್ಠಿ
ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸುದ್ದಿಗೋಷ್ಠಿ
Published on
ಬೀದರ್: ಮಾಹಿತಿ ಹಕ್ಕು ಕಾಯ್ದೆಯಡಿ(RTI) ಸಲ್ಲಿಕೆಯಾಗುವ ದ್ವಿತೀಯ ಹಂತದ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಆಯಾ ಜಿಲ್ಲೆಯಲ್ಲೇ ಅರ್ಜಿ ವಿಲೇವಾರಿ ಮಾಡುವ ಚಿಂತನೆ ಇದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ತಿಳಿಸಿದರು. 
ಬೀದರ್​ನಲ್ಲಿ ಇಂದು(ನ. 29) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಆರ್​ಟಿಐ ಅರ್ಜಿಗಳು ಬಾಕಿಯಿವೆ. ಅವುಗಳನ್ನು ತ್ವರಿತ ವಿಲೇವಾರಿ ಮಾಡುವ ಸಂಬಂಧ ಚಳಿಗಾಲದ ವಿಧಾನಮಂಡಲ ಅಧಿವೇಶನ ಬಳಿಕ ಬೆಳಗಾವಿಗೆ ಭೇಟಿ ನೀಡಿ ಯಾವ ರೀತಿ ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಎನ್ನು ಕುರಿತಾದ ವರದಿಯನ್ನು ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗುವುದು ಹೇಳಿದರು.
ಕಳೆದ ಮಾರ್ಚ್​ನಲ್ಲಿ ಆಯೋಗದ ಮುಂದೆ 55,143 ಅರ್ಜಿ ವಿಲೇವಾರಿ ಬಾಕಿಯಿದ್ದವು. ಈವರೆಗೆ ಯುದ್ದೋಪಾದಿಯಲ್ಲಿ ಕೆಲಸ ಮಾಡಿ 19 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 36,206 ಅರ್ಜಿಗಳು ಬಾಕಿಯಿವೆ. ಮಾರ್ಚ್​ ಬಳಿಕ ಮತ್ತೆ ಹೊಸದಾಗಿ 6 ಸಾವಿರ ಅರ್ಜಿಗಳಿವೆ. ಅದರಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಗೆ ಸೇರಿದ ಅರ್ಜಿಗಳೇ ಹೆಚ್ಚು ಇವೆ. ನಂತರದ ಸ್ಥಾನದಲ್ಲ ಕಂದಾಯ ಮತ್ತು ನಗರಾಭಿವೃದ್ದಿ ಇಲಾಖೆ ಅರ್ಜಿಗಳಿವೆ ಎಂದಿದ್ದಾರೆ.
ಸದ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 7948 ದ್ವಿತೀಯ ಮೇಲ್ಮನವಿ ಅರ್ಜಿಗಳು ಬಾಕಿಯಿವೆ. ಕೊಡಗು ಕೊನೆಯ ಸ್ಥಾನದಲ್ಲಿದ್ದು, ಬೀದರ್ ಜಿಲ್ಲೆಯಲ್ಲಿ 383 ಅರ್ಜಿಗಳು ಬಾಕಿಯಿದ್ದು 27ನೇ ಸ್ಥಾನದಲ್ಲಿದೆ. ಬಾಕಿ ಪ್ರಕರಣಗಳನ್ನು ಆಯಾ ಜಿಲ್ಲೆಯಲ್ಲಿ ವಿಲೇವಾರಿ ಮಾಡಿ ಜನರಿಗೆ ತ್ವರಿತವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆಯೋಗ ಚಿಂತನೆ ನಡೆಸಿದೆ ಎಂದು ಹೇಳಿದರು. 

ಬೀದರ್ ಜಿಲ್ಲೆಯ 106 ಅಧಿಕಾರಿಗಳಿಗೆ ದಂಡ

ಕಳೆದ 20 ವರ್ಷದಲ್ಲಿ ರಾಜ್ಯದಲ್ಲಿ 10,735 ಪ್ರಕರಣದಲ್ಲಿ ಅಧಿಕಾರಿಗಳಿಗೆ 10.16 ಕೋಟಿ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 2.70 ಕೋಟಿ ರೂ. ಮಾತ್ರ ವಸೂಲಿಯಾಗಿದೆ. ಬೀದರ್ ಜಿಲ್ಲೆಯಲ್ಲಿ 106 ಅಧಿಕಾರಿಗಳಿಗೆ 9.26 ಲಕ್ಷ ದಂಡ ವಿಧಿಸಿದ್ದು, ಇದರಲ್ಲಿ ಏಳು ಅಧಿಕಾರಿಗಳು ಮಾತ್ರ 87 ಸಾವಿರ ರೂ. ದಂಡ ಕಟ್ಟಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಸಂಬಂದಿಸಿದ ಅಧಿಕಾರಿಗಳಿಂದ ದಂಡ ಮೊತ್ತವನ್ನು ವಸೂಲಿ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೆಡಿಪಿ ಸಭೆಯಲ್ಲಿ ಚರ್ಚೆ

ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಆರ್​ಟಿಐ ಅರ್ಜಿಗಳ ಸಂಖ್ಯೆ ತಗ್ಗಿಸಲು, ಮತ್ತು ವಿಲೇವಾರಿ ಮಾಡುವ ಸಂಬಂಧ ಚರ್ಚಿಸಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಆಯೋಗ ಪತ್ರ ಬರೆದಿದೆ ಎಂದು ತಿಳಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net