ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಆವರಣದಲ್ಲಿ ಜೆಡಿಎಸ್ನಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಮುಖಂಡ ಡಾ.ವಿಜಯಕುಮಾರ್, ನಗರಸಭಾ ಸದಸ್ಯ ತ.ನ.ಪ್ರಭುದೇವ್, ಜೆಡಿಎಸ್ ಮಹಿಳಾ ಘಟಕದ ಮುಖಂಡರಾದ ದೇವರಾಜಮ್ಮ, ಪ್ರಭಾ ನಾಗರಾಜ್, ಕೆಂಪರಾಜು, ಅಂಜನ್ಗೌಡ, ನಾಗರಾಜು, ಆಶಾಗೌಡ, ಪ್ರವಿಣ್ ಇದ್ದರು.
Published on:
Copied
Follow Us
ದೊಡ್ಡಬಳ್ಳಾಪುರ : ದೇಶದ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಅವಕಾಶ ಕೊಡದ ಕಾಂಗ್ರೆಸ್ ಮಹಿಳಾ ವಿರೋಧಿ ಎಂಬುದನ್ನು ಸಾಬೀತು ಮಾಡಿಕೊಂಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಆಕ್ರೋಶ ಹೊರಹಾಕಿದರು.
ಮಹಿಳಾ ಮೀಸಲಾತಿ ಜಾರಿ ವಿರೋಧಿಸಿರುವ ಕಾಂಗ್ರೆಸ್ ವಿರುದ್ಧ ಜೆಡಿಎಸ್ನಿಂದ ತಾಲೂಕು ಕಚೇರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಯಾವುದೇ ಮಸೂದೆ ಜಾರಿಯಾಗಬೇಕಾದರೆ ಬಹುಮತದ ಅವಶ್ಯಕತೆ ಇರುತ್ತದೆ. ಆದರೆ, ಈ ಬಾರಿ ಮಹಿಳಾ ಸಬಲೀಕರಣ ಹಾಗೂ ಸಮಾನತೆಗೆ ಪ್ರತಿಕವಾದ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸುವಲ್ಲಿ ಎನ್ಡಿಎ ಸರ್ಕಾರ ಮುಂದಾಗಿತ್ತು. ಆದರೆ, ಈ ಮಸೂದೆ ಜಾರಿಯಾಗಲು ಬಹುಮತ ಸೂಚಿಸದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷದ ನಡೆ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಗುಡುಗಿದರು.
30 ವರ್ಷಗಳಲ್ಲಿ ಯಾವುದೇ ಸರ್ಕಾರ ಕೈಗೊಳ್ಳದ ವಿಶೇಷ ಮಸೂದೆಯನ್ನು ಎನ್ಡಿಎ ಸರ್ಕಾರ ಮಾಡಲು ಮುಂದಾಗಿದೆ. ಇಂತಹ ಸಮಯದಲ್ಲಿ ಪಕ್ಷಾತಿತವಾಗಿ ಬಹುಮತ ಸೂಚಿಸಬೇಕಿತ್ತು. ಆದರೆ, ಕಾಂಗ್ರೆಸ್ ನಿರ್ಧಾರ ಸರಿಯಿಲ್ಲ. ಮಹಿಳೆಯರ ಹಕ್ಕನ್ನು ಕುಸಿದುಕೊಳ್ಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ನಡೆ ಖಂಡಿಸಿ ಇಂದು ತಾಲೂಕಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ ಎಂದರು.
ಜೆಡಿಎಸ್ ಮುಖಂಡ ಹರೀಶ್ಗೌಡ ಮಾತನಾಡಿ, ಮಹಿಳೆಯರು ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಲು ಈ ಮಸೂದೆಯು ಸಹಕಾರಿಯಾಗಿದೆ. ಅಲ್ಲದೆ ಮೀಸಲಾತಿ ಮೂಲಕ ಹಲವು ಪ್ರತಿಭಾನ್ವಿತ ಹೆಣ್ಣು ಮಕ್ಕಳು ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಆದರೆ, ಇಂತಹ ಉತ್ತಮ ಮಸೂದೆಯನ್ನು ಕಾಂಗ್ರೆಸ್ ಒಪ್ಪದೇ ಇರುವುದು ವಿಪರ್ಯಾಸ. ಕೇವಲ ಮತ ಪಡೆಯಲು ನಾವು ಮಹಿಳೆಯರ ಪರ ಎಂದು ಹೇಳುವ ಕಾಂಗ್ರೆಸ್ ದೇಶದ ಮಹಿಳೆಯರಿಗೆ ಅನುಕೂಲವಾಗುವ ಮಸೂದೆಯನ್ನೇ ಜಾರಿ ಮಾಡಲು ಬಿಟ್ಟಿಲ್ಲ. ಇದರಿಂದ ಪಕ್ಷದ ಮನಸ್ಥಿತಿ ಎಂಥದ್ದು ಎಂದು ತಿಳಿಯುತ್ತದೆ. ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿ. ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗುವ ಈ ಮಸೂದೆ ಜಾರಿಗೆ ಸಹಕರಿಸಲಿ ಎಂಬುದೇ ನಮ್ಮ ಉದ್ದೇಶ ಎಂದರು.
ಮಾನವ ಸರಪಳಿ ರಚನೆ : ಜೆಡಿಎಸ್ ಕಾರ್ಯಕರ್ತರು ಹಾಗೂ ಪ್ರಮುಖರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ನಂತರ ಕಾಲ್ನಡಿಗೆ ಜಾಥಾ ಮೂಲಕ ತಾಲೂಕು ಕಚೇರಿಗೆ ತಲುಪಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.