ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಡ್ಡಗಾಲು: ಒಂದೇ ಒಂದು ಇಟ್ಟಿಗೆಯನ್ನೂ ಇಡಲು ಬಿಡಲ್ಲ ಎಂದು ಅಧ್ಯಕ್ಷ ಟ್ಯಾಗೋರ್ ಎಚ್ಚರಿಕೆ! | Mekedatu Dam

ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಡ್ಡಗಾಲು: ಒಂದೇ ಒಂದು ಇಟ್ಟಿಗೆಯನ್ನೂ ಇಡಲು ಬಿಡಲ್ಲ ಎಂದು ಅಧ್ಯಕ್ಷ ಟ್ಯಾಗೋರ್ ಎಚ್ಚರಿಕೆ! | Mekedatu Dam
Published on: 

ಬೆಂಗಳೂರು: ರಾಜ್ಯದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು (Mekedatu Dam) ಯೋಜನೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಮುಖ ನಾಯಕರ ನಡುವೆ ಬಹಿರಂಗ ಭಿನ್ನಮತ ಭುಗಿಲೆದ್ದಿದ್ದು, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ ನೀಡುವಂತೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಮಾಣಿಕ್ಕಂ ಟ್ಯಾಗೋರ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಸಿಎಂ ಡಿಕೆಶಿ ಅವರು ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಅಂತಿಮ ಅನುಮೋದನೆ ನೀಡಬೇಕು ಎಂದು ಹೇಳಿರುವುದನ್ನು ಟ್ಯಾಗೋರ್ ತಮ್ಮ ಎಕ್ಸ್ ಖಾತೆಯ ಮೂಲಕ ಖಂಡಿಸಿದ್ದಾರೆ.

ಸಿಎಂ ಡಿಕೆಶಿ ನಿಲುವು, ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ವಿರುದ್ಧವಾಗಿದೆ ಎಂದಿರುವ ಟ್ಯಾಗೋರ್, ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ತಮಿಳುನಾಡು ಕೆಳಹಂತದ ರಾಜ್ಯವಾಗಿರುವುದರಿಂದ, ನಮ್ಮ ರಾಜ್ಯದ ಒಪ್ಪಿಗೆಯಿಲ್ಲದೆ ಈ ಯೋಜನೆಗೆ ಅನುಮತಿ ನೀಡುವುದು ಕಾನೂನುಬಾಹಿರ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪೋಸ್ಟ್; ವಿಚಾರಣೆಗೆ ಹಾಜರಾಗುವಂತೆ ಟಿಎಂಸಿ ನಾಯಕ ಅಭಿಷೇಕ್​ ಬ್ಯಾನರ್ಜಿಗೆ ನೋಟಿಸ್ | Abhishek Banerjee
ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಡ್ಡಗಾಲು: ಒಂದೇ ಒಂದು ಇಟ್ಟಿಗೆಯನ್ನೂ ಇಡಲು ಬಿಡಲ್ಲ ಎಂದು ಅಧ್ಯಕ್ಷ ಟ್ಯಾಗೋರ್ ಎಚ್ಚರಿಕೆ! | Mekedatu Dam

ಈ ಯೋಜನೆಯು ತಮಿಳುನಾಡಿನ ಕೆಳ ಜಿಲ್ಲೆಗಳ ರೈತರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಟ್ಯಾಗೋರ್, ಕೇಂದ್ರ ಸರ್ಕಾರವು ಮೇಕೆದಾಟು ಅಣೆಕಟ್ಟಿಗೆ ಒಂದೇ ಒಂದು ಇಟ್ಟಿಗೆಯನ್ನೂ ಇಡಲು ಕರ್ನಾಟಕಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಸ್ಥಳೀಯ ಕಾಂಗ್ರೆಸ್ ಘಟಕವು ಈ ಯೋಜನೆಯ ವಿರುದ್ಧ ಎಲ್ಲ ಹಂತಗಳಲ್ಲೂ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ಯೋಜನೆಯನ್ನು ತಡೆಯಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್​ಗೂ ಮನವಿ ಮಾಡಿದ್ದಾರೆ.

ಸಿಎ ಡಿಕೆಶಿ ಪ್ರತಿಕ್ರಿಯೆ ಹೀಗಿತ್ತು!

ಮತ್ತೊಂದೆಡೆ, ತಮಿಳುನಾಡು ಕೈ ನಾಯಕನ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಇದನ್ನು ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಮಾತನಾಡಿದ್ದ ಶಿವಕುಮಾರ್, ಈ ಕುಡಿಯುವ ನೀರಿನ ಯೋಜನೆಗೆ ಬಾಕಿ ಇರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನಿಗದಿಪಡಿಸಿರುವ 177 ಟಿಎಂಸಿ ನೀರಿನ ಪಾಲನ್ನು ನೀಡಲು ರಾಜ್ಯ ಬದ್ಧವಾಗಿದೆ ಎಂದು ಭರವಸೆ ನೀಡಿರುವ ಅವರು, ಬರಗಾಲದ ಸಮಯದಲ್ಲಿ ಈ ಸಮತೋಲನ ಜಲಾಶಯವು ತಮಿಳುನಾಡಿಗೂ ನೆರವಾಗಲಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಈ ವಿಚಾರವಾಗಿ ಕೇವಲ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿರುವ ಸಿಎಂ, ವಿರೋಧ ವ್ಯಕ್ತಪಡಿಸುವ ಬದಲು ತಮಿಳುನಾಡಿನ ನಾಯಕರು ನಿಯೋಗದೊಂದಿಗೆ ಬರಲಿ, ಅವರನ್ನು ಅಣೆಕಟ್ಟು ನಿರ್ಮಾಣದ ಸ್ಥಳಕ್ಕೆ ಕರೆದುಕೊಂಡು ಹೋಗಿ ಯೋಜನೆಯ ವಾಸ್ತವಾಂಶ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ವಿವರಿಸಲು ತಾವು ಸಿದ್ಧರಿರುವುದಾಗಿ ಆಹ್ವಾನ ನೀಡಿದ್ದಾರೆ.

ವಿವಾದದ ಹಿನ್ನೆಲೆ

ಕನಕಪುರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆಯು ಪ್ರಮುಖವಾಗಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಗುರಿ ಹೊಂದಿದೆ. ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಯೋಜನೆಗೆ ಬೆಂಬಲ ಸೂಚಿಸಿದ್ದರೆ, ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಇದರಿಂದ ತಮ್ಮ ಪಾಲಿನ ನೀರಿಗೆ ತೊಂದರೆಯಾಗಲಿದೆ ಎಂದು ನಿರಂತರವಾಗಿ ವಿರೋಧಿಸುತ್ತಾ ಬಂದಿವೆ. ಮುಂದಿನ ದಿನಗಳಲ್ಲಿ ಈ ವಿವಾದ ಎಲ್ಲಿಗೆ ಹೋಗಿ ತಲುಪುತ್ತದೆಯೋ ಕಾದು ನೋಡಬೇಕಿದೆ(ಏಜೆನ್ಸೀಸ್​).