ಮಧುಗಿರಿ: ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಸವಲತ್ತುಗಳನ್ನು ನೀಡುವ ಮೂಲಕ ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕಾಗಿದೆ. ಅಂಗವಿಕಲರಿಗೆ ವಿತರಿಸುವ ಸಲಕರಣೆಗಳಲ್ಲಿ ಗುಣಮಟ್ಟ ಕಾಪಾಡಿ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ಜಿಪಂ ಮತ್ತು ತಾಪಂ ಸಹಯೋಗದೊಂದಿಗೆ ತಾಲೂಕಿನ 134 ಅಂಗವಿಕಲರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ನಂತರ ವಸತಿ ಕೇಂದ್ರದ ಕಾರ್ಯಕರ್ತರು, ಗ್ರಾಮೀಣ ವಿಶೇಷ ಚೇತನ ಪುನರ್ವಸತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಂಚಾಯಿತಿವಾರು ಅಂಗವಿಕಲರ ಮಕ್ಕಳ ಸರ್ವೇ ನಡೆಸಿ ಪಟ್ಟಿ ತಯಾರಿಸಿ ಅದರಲಿ ್ಲಅರ್ಹ ಫಲಾನುಭವಿಗಳನ್ನು ಗುರುತಿಸಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವೀಧರ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯಲ್ಲಿ ಸಲಕರಣೆ ವಿತರಿಸಬೇಕು ಎಂದು ತಿಳಿಸಿದರು.
ತಾಪಂ ಇಒ ಲಕ್ಷ್ಮಣ್ ಮಾತನಾಡಿ, ತಾಲೂಕಿನಲ್ಲಿ ಅಂಗವಿಕಲರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅವರಿಗೆ ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿರುವ ಅಂಗವಿಕಲರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು. ಅವರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು ಎಂದರು.
ತಾಲೂಕಿನ 134 ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಿಸಲಾಯಿತು. 7 ಜನರಿಗೆ ಲ್ಯಾಪ್ಟಾಪ್, ಮೂವರಿಗೆ ತ್ರಿಚಕ್ರ ಬೈಕ್, ಒಂದು ಬ್ಯಾಟರಿ ಚಾಲಿತ ವೀಲ್ಚೇರ್, 8 ತ್ರೀಚಕ್ರ ಬೈಸಿಕಲ್, 53 ವೀಲ್ಚೇರ್, 34 ಶ್ರವಣ ಯಂತ್ರ, 28 ಎಂಆರ್ ಕಿಟ್ ವಿತರಿಸಲಾಯಿತು.