ಪಾಂಡವಪುರ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿರುವ ಮಾಜಿ ಸದಸ್ಯ ಪಾರ್ಥಸಾರಥಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪುರಸಭೆ ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಮಂಜುಳಾ, ನಾಗೇಶ್, ಲಕ್ಷ್ಮೀನಾರಾಯಣ, ಮಹೇಶ್, ವನೀತಾ, ಕೃಷ್ಣ, ಪುಷ್ಪಾ, ಮೇಘನಾ, ಮಣಿಪ್ರಸಾದ್ ಇತರರು ಇದ್ದರು.
Published on:
Copied
Follow Us
ಪಾಂಡವಪುರ:
ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಪುರಸಭೆ ಮಾಜಿ ಸದಸ್ಯ ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪಟ್ಟಣದ 5ನೇ ವಾರ್ಡ್ ಪುರಸಭೆ ಮಾಜಿ ಸದಸ್ಯ ಪಾರ್ಥಸಾರಥಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಪಾಂಡವಪುರ ಪೊಲೀಸ್ ಠಾಣೆಗೆ ಬುಧವಾರ ಸಂಜೆ ದೂರ ನೀಡಿದ್ದಾರೆ.
ಪಟ್ಟಣದ ದೊಡ್ಡಿಬೀದಿಯಲ್ಲಿ ಪುರಸಭೆಗೆ ಸೇರಿದ ಮೂರು ವಾಣಿಜ್ಯ ಮಳಿಗೆಗಳಿದ್ದು, ಈ ಮಳಿಗೆಗಳನ್ನು 2002ರಲ್ಲಿ ಶ್ರೀಕಂಠೇಗೌಡ ಎಂಬುವವರು ಹರಾಜು ಪ್ರಕ್ರಿಯೆಯಲ್ಲಿ ನಿಗದಿಅವಧಿಗೆ ಬಿಡ್ ಪಡೆದುಕೊಂಡಿದ್ದರು. ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಕಳೆದ 2026ರ ಏಪ್ರಿಲ್‌ನಲ್ಲಿ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ನಡೆದು ಮೂರು ಮಳಿಗೆಗಳನ್ನು ಇತರರು ಪಡೆದುಕೊಂಡಿದ್ದರು. ಈ ವಿಚಾರವಾಗಿ ಬುಧವಾರ ಸಂಜೆ ಪುರಸಭೆ ಕಚೇರಿಗೆ ಆಗಮಿಸಿದ್ದ ಮಾಜಿ ಸದಸ್ಯ ಪಾರ್ಥಸಾರಥಿ ಮಳಿಗೆಗೆಳನ್ನು ಮೂಲ ಬಿಡ್‌ದಾರರಿಗೆ ನೀಡಬೇಕೆಂದು ಮುಖ್ಯಾಧಿಕಾರಿಗೆ ತಾಕೀತು ಮಾಡಿದ್ದರು. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು ಮುಖ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಸುದ್ದಿಗೋಷ್ಠಿ ನಡೆಸಿ, ಪುರಸಭೆ ಮಾಜಿ ಸದಸ್ಯ ಪಾರ್ಥಸಾರಥಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಲುವರಾಜು ಎಂಬಾತನೊಂದಿಗೆ ಕಚೇರಿ ಬಂದು ಮಳಿಗೆಗಳ ಮರು ಹರಾಜು ಪ್ರಕ್ರಿಯೆಗೆ ತಡೆ ನೀಡಿ ಮೂಲ ಬಿಡ್ಡುದಾರರಿಗೆ ಮಳಿಗೆ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ಮೂಲ ಬಿಡ್‌ದಾರರಾದ ಶ್ರೀಕಂಠೇಗೌಡ ಅವರನ್ನು ಈ ವಿಚಾರವಾಗಿ ಸಂಪರ್ಕಿಸಲಾಗಿತ್ತು. ಆಗ, ಮಳಿಗೆಗಳನ್ನು ನೀಡುವಂತೆ ನಾವು ಯಾವುದೇ ಅರ್ಜಿ ಸಲ್ಲಿಸಿಲ್ಲ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಪಾರ್ಥಸಾರಥಿ ಅವರು ಮೂರನೇ ವ್ಯಕ್ತಿಯಾದ ಚಲುವರಾಜು ಎಂಬಾತನನ್ನು ಕರೆದುಕೊಂಡು ಬಂದು ಅವರಿಗೆ ಮಳಿಗೆ ನೀಡಬೇಕು ಎಂದು ತಾಕೀತು ಮಾಡಿದರು. ಈ ವಿಚಾರವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದರು.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಕಚೇರಿ ಕೆಲಸ ಕಾರ್ಯ ಸ್ಥಗಿತಗೊಳಿಸಲಾಗವುದು. ಜತೆಗೆ ಇಡೀ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ರಕ್ಷಣೆ ಕೋರಲಾಗಿದೆ ಎಂದು ಹೇಳಿದರು.
ಪುರಸಭೆ ಇಂಜಿನಿಯರ್ ಯಶಸ್ವಿನಿ ಮಾತನಾಡಿ, ಪುರಸಭೆ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು. ಮಾಜಿ ಸದಸ್ಯರು ಯಾವುದನ್ನು ಲೆಕ್ಕಿಸಿದೆ ಅತ್ಯಂತ ಕೀಳು ಮಟ್ಟದ ಭಾಷೆ ಬಳಸುವ ಮೂಲಕ ಮುಖ್ಯಾಧಿಕಾರಿಗಳನ್ನು ನಿಂದಿಸಿದರು. ಅವರ ಭಾಷಾ ಬಳಕೆ ಮಹಿಳಾ ಸಿಬ್ಬಂದಿ ತಲೆ ತಗ್ಗಿಸುವಂತೆ ಮಾಡಿತು..ಈ ರೀತಿ ವರ್ತನೆ ತೋರಿದರೆ ನಾವು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆ ಪುರಸಭೆ ಅಧಿಕಾರಿಗಳಾದ ಮಂಜುಳಾ, ನಾಗೇಶ್, ಲಕ್ಷ್ಮೀನಾರಾಯಣ, ಮಹೇಶ್, ವನೀತಾ, ಕೃಷ್ಣ, ಪುಷ್ಪಾ, ಮೇಘನಾ, ಮಣಿಪ್ರಸಾದ್, ನರಸಿಂಹ ಇತರರು ಇದ್ದರು.