ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಗಣಕೀಕರಣ ಪ್ರಕ್ರಿಯೆ ಮುಕ್ತಾಯಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದ್ದು, ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,13,879 ಮತದಾರರ ಗಣಕೀಕರಣ ಪೂರ್ಣಗೊಂಡಿದೆ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 2,36,667 ಮತದಾರರಿದ್ದು, ಎಲ್ಲರಿಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೂಲಕ ಗಣತಿ ನಮೂನೆ ವಿತರಿಸಲಾಗಿತ್ತು. ಜೂ.30ರಿಂದ ಆ.8ರವರೆಗೆ ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಹಾಗೂ ಗಣಕೀಕರಣ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಿದರು.
ಒಟ್ಟು 2,13,879 ಗಣತಿ ನಮೂನೆಗಳ ಗಣಕೀಕರಣ ನಡೆದಿದ್ದು, 350 ನಮೂನೆಗಳು ಆನ್‌ಲೈನ್ ಮೂಲಕ ಮತದಾರರಿಂದ ಸಲ್ಲಿಕೆಯಾಗಿವೆ. ಪರಿಶೀಲನೆ ವೇಳೆ 22,788 ಎಎಸ್‌ಡಿಡಿ ಹಾಗೂ ಸಂಗ್ರಹಿಸಲಾಗದ ಗೈರು ಮತದಾರರನ್ನು ಗುರುತಿಸಲಾಗಿದೆ. ಅಲ್ಲದೆ 9,135 ಶಾಶ್ವತ ವಲಸಿಗರು, 10,579 ಮೃತಪಟ್ಟಿರುವವರು, 2,249 ಪುನರಾವರ್ತಿತ ಮತದಾರರು ಹಾಗೂ 52 ಇತರ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
291ಕ್ಕೆ ಏರಿದ ಮತಗಟ್ಟೆಗಳ ಸಂಖ್ಯೆ: ಕ್ಷೇತ್ರದಲ್ಲಿ ಈವರೆಗೆ 283 ಮತಗಟ್ಟೆಗಳು ಇದ್ದು, 1,200ಕ್ಕಿಂತ ಹೆಚ್ಚು ಮತದಾರರಿರುವ 9 ಮತಗಟ್ಟೆಗಳನ್ನು ವಿಭಜಿಸಿ, ಒಟ್ಟು 291 ಮತಗಟ್ಟೆಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಹೆಂಟಗೆರೆ (41ಎ), ಸಾಲಗೇರಿ (45ಎ), ಅಬ್ಬೂರು ಮಾಚಗೌಡನಹಳ್ಳಿ (65ಎ), ಸಂತೆಮರೂರು (76ಎ), ಹಂಡ್ರಂಗಿ (172ಎ), ಕಡುವಿನ ಹೊಸಹಳ್ಳಿ (275ಎ) ಹಾಗೂ ಮಧುರನಹಳ್ಳಿ (280ಎ) ಸೇರಿದಂತೆ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೆಂದಿಣ್ಣೆ ಕಾವಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೊಸ ಮತಗಟ್ಟೆಯನ್ನು ಸ್ಥಳಾಂತರಿಸಿ ಕಾರ್ಯಾರಂಭ ಮಾಡಲಾಗಿದೆ ಎಂದು ಹೇಳಿದರು.