ಕೆಪಿಎಸ್ ಶಾಲೆಗೆ ಐಐಟಿ ಪ್ರಾಧ್ಯಾಪಕರಿಂದ ಕಂಪ್ಯೂಟರ್ ಸೈನ್ಸ್ ಪಠ್ಯಕ್ರಮ ರಚನೆ

ಕೆಪಿಎಸ್ ಶಾಲೆಗೆ ಐಐಟಿ ಪ್ರಾಧ್ಯಾಪಕರಿಂದ ಪಠ್ಯಕ್ರಮ ರಚನೆ
ಕೆಪಿಎಸ್ ಶಾಲೆಗೆ ಐಐಟಿ ಪ್ರಾಧ್ಯಾಪಕರಿಂದ ಪಠ್ಯಕ್ರಮ ರಚನೆ
Published on

ಪ್ರಮುಖ ಮುಖ್ಯಾಂಶಗಳು

  • ಪಠ್ಯಕ್ರಮ ರಚಿಸುವ ಸಂಬಂಧ ಇತ್ತೀಚೆಗೆ ಐಐಟಿ ಮದ್ರಾಸ್ ಪ್ರಾಧ್ಯಾಪಕರೊಂದಿಗೆ ಚರ್ಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಬಾಂಬೆ ಐಐಟಿ ಅಧಿಕಾರಿಗಳೊಂದಿಗೂ ಚರ್ಚೆ
  • ಮುಂದಿನ ಶೈಕ್ಷಣಿಕ ವರ್ಷದಿಂದ (2026-27) ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಬೋಧಿಸುವುದಾಗಿ ಶಿಕ್ಷಣ ಇಲಾಖೆ ಪ್ರಕಟ
  • ಕಂಪ್ಯೂಟರ್ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವುದು ಮತ್ತು ಅರ್ಹ ಕಂಪ್ಯೂಟರ್ ಸೈನ್ಸ್ ಶಿಕ್ಷಕರನ್ನು ನೇಮಿಸುವುದರ ಬಗ್ಗೆ ಚರ್ಚಿ
ಬೆಂಗಳೂರು: ರಾಜ್ಯ ಸರ್ಕಾರವು ಹೊಸದಾಗಿ ಆರಂಭಿಸುತ್ತಿರುವ 900 ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಕಂಪ್ಯೂಟರ್ ಶಿಕ್ಷಣಕ್ಕಾಗಿ ಮದ್ರಾಸ್ ಮತ್ತು ಬಾಂಬೆ ಐಐಟಿ ತಜ್ಞರಿಂದ ಪಠ್ಯಕ್ರಮ ರಚಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಚಿಂತನೆ ನಡೆಸುತ್ತಿದೆ.
ಕೆಪಿಎಸ್ ಬಗ್ಗೆ ಪರ/ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣಕ್ಕಾಗಿ ಐಐಟಿ ತಜ್ಞರ ಬಳಿ ಚರ್ಚಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಐಐಟಿ ತಜ್ಞರಿಂದ ಪಠ್ಯಕ್ರಮ ರಚಿಸುತ್ತಿರುವುದು ಪ್ರಶಂಸೆಗೂ ಪಾತ್ರವಾಗುತ್ತಿದೆ.
ಪಠ್ಯಕ್ರಮ ರಚಿಸುವ ಸಂಬಂಧ ಇತ್ತೀಚೆಗೆ ಐಐಟಿ ಮದ್ರಾಸ್ ಪ್ರಾಧ್ಯಾಪಕರೊಂದಿಗೆ ಚರ್ಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಬಾಂಬೆ ಐಐಟಿ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಲಾಗುತ್ತದೆ. ಚರ್ಚೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಮುಂದಿನ ಶೈಕ್ಷಣಿಕ ವರ್ಷದಿಂದ (2026-27) ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಬೋಧಿಸುವುದಾಗಿ ಶಿಕ್ಷಣ ಇಲಾಖೆ ಈಗಾಗಲೇ ಪ್ರಕಟಿಸಿದೆ. ಅದರಲ್ಲಿ ಕಂಪ್ಯೂಟರ್ ಸೈನ್ಸ್ ಅನ್ನು ಒಂದು ವಿಷಯವಾಗಿ ಪರಿಚಯಿಸುವ ಉದ್ದೇಶ ಹೊಂದಿದೆ. ಈ ಉಪಕ್ರಮವು ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವುದು ಮತ್ತು ಅರ್ಹ ಕಂಪ್ಯೂಟರ್ ಸೈನ್ಸ್ ಶಿಕ್ಷಕರನ್ನು ನೇಮಿಸುವುದು ಬಗ್ಗೆ ಚರ್ಚಿಸಲಾಗುತ್ತಿದೆ.
ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕಾಗಿ ಪ್ರತ್ಯೇಕ ಶಿಕ್ಷಕರಿಲ್ಲ ಹಾಗೂ ಪಠ್ಯಕ್ರಮ, ಪಠ್ಯಪುಸ್ತಕಗಳಿಲ್ಲ. ಬೆರಳೆಣಿಕೆ ಶಾಲೆಗಳಲ್ಲಿ ಮಾತ್ರ ಕೆಲವು ಎನ್‌ಜಿಒಗಳು ಹಾಗೂ ಎಸ್‌ಡಿಎಂಸಿಗಳು, ದಾನಿಗಳು ಕಂಪ್ಯೂಟರ್ ಶಿಕ್ಷಕರನ್ನು ನೇಮಿತಿ ತರಬೇತಿ ಕೊಡಿಸುತ್ತಿರುವುದನ್ನು ಹೊರತುಪಡಿಸಿ ಉಳಿದಂತೆ ಕಂಪ್ಯೂಟರ್ ಶಿಕ್ಷಣಕ್ಕಾಗಿ ಶಿಕ್ಷಕರಿಲ್ಲ.

ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ

ಈ ವಿಷಯ ಬೋಧನೆಗೆ ವಿಷಯ ಶಿಕ್ಷಕರನ್ನು ನೇಮಿಸಲು ಸಹ ಚಿಂತನೆ ನಡೆಸುತ್ತಿದೆ. ಕಂಪ್ಯೂಟರ್ ಸೈನ್ಸ್ ಬೋಧನೆಗಾಗಿ ನಿರ್ದಿಷ್ಟ ಕೇಡರ್ ಅನ್ನು ರಚಿಸಿ ಕೊರತೆ ನೀಗಿಸಲಾಗುತ್ತಿದೆ. ಇದಕ್ಕಾಗಿ ಅರ್ಹತಾ ಮಾನದಂಡಗಳನ್ನು ಮುಂದಿನ ದಿನಗಳಲ್ಲಿ ನಿಗದಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧನೆ ಮಾಡಲು ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ಪಿಯುಸಿ ಹಾಗೂ ಡಿ.ಇಡಿ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪದವಿ ಹಾಗೂ ಬಿ.ಇಡಿ ಅರ್ಹತೆ ಹೊಂದಿರಬೇಕಿದೆ.
ಕಂಪ್ಯೂಟರ್ ಸೈನ್ಸ್ ಬೋಧನೆಗೆ ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್‌ಗಳ ಪದವಿ (ಬಿಸಿಎ), ಕಂಪ್ಯೂಟರ್ ಸೈನ್ಸ್ ಬಿಎಎಸ್‌ಸಿ ಪದವಿಯನ್ನು ಅರ್ಹತೆ ಪಡೆದಿರಬೇಕು. ಸ್ಥಳೀಯವಾಗಿ ಮಕ್ಕಳ ಭಾಷೆಯನ್ನು ತಿಳಿಯಲು ಮತ್ತು ಕನ್ನಡದಲ್ಲಿಯೂ ಹೇಳಿಕೊಡಲು ಕನ್ನಡ ಪರೀಕ್ಷೆ ಉತ್ತೀರ್ಣರಾಗಿರುವ ಪ್ರಮಾಣಪತ್ರಗಳನ್ನು ಹೊಂದಿರಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರಬೇಕು ಅಥವಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸುವ ಡಿಪ್ಲೊಮಾ ಕೋರ್ಸ್‌ಗಳಾದ ಕಾವ/ರತ್ನದಂತಹ ಕೋರ್ಸ್‌ಗಳಲ್ಲಿ ಉತ್ತೀರ್ಣರಾಗಿರಬೇಕು ಎಂಬ ಅರ್ಹತೆಯನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
"

ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು (ಡಿಎಸ್‌ಇಆರ್‌ಟಿ) ಮುಂದಿನ ವಾರ ಮದ್ರಾಸ್ ಮತ್ತು ಬಾಂಬೆ ಐಐಟಿ ಪ್ರತಿನಿಧಿಗಳೊಂದಿಗೆ ಸಭೆ ಆಯೋಜಿಸಲಾಗಿದೆ. ಚರ್ಚೆಗಳ ಆಧಾರದಲ್ಲಿ ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸರ್ಕಾರಿ ಶಾಲೆಗಳ ಪಠ್ಯಕ್ರಮ ರಚನೆಗೆ ಅತ್ಯುತ್ತಮ ತಂಡವನ್ನು ರಚಿಸಲು ನಾವು ಉತ್ಸುಕರಾಗಿದ್ದೇವೆ.
— - ವಿಕಾಸ್ ಕಿಶೋರ್ ಸೂರಲ್ಕರ್, ಶಾಲಾ ಶಿಕ್ಷಣ ಇಲಾಖೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net