ಜಲಧಾರೆ ಕಾಮಗಾರಿ ಪೂರ್ಣಗೊಳಿಸಿ

ಬಸವನಬಾಗೇವಾಡಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ಡಿ.ಸಿ ಆನಂದ ಕೆ., ಸಿಇಒ ರಿಷಿ ಆನಂದ, ಎ.ಸಿ. ಗುರುನಾಥ ದಡ್ಡೆ, ಬಿ.ಎ. ಸೌದಾಗರ, ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ಡಿ.ಸಿ ಆನಂದ ಕೆ., ಸಿಇಒ ರಿಷಿ ಆನಂದ, ಎ.ಸಿ. ಗುರುನಾಥ ದಡ್ಡೆ, ಬಿ.ಎ. ಸೌದಾಗರ, ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವಾನಂದ ಪಾಟೀಲರಿಂದ ಅಧಿಕಾರಿಗಳಿಗೆ ತರಾಟೆ
  • ಪ್ರಗತಿ ಪರಿಶೀಲನಾ ಸಭೆ
ಬಸವನಬಾಗೇವಾಡಿ: ಜಲಧಾರೆ ಯೋಜನೆಯ ಕೃಷ್ಣಾ ನದಿಯಿಂದ ನೀರು ಸರಬರಾಜು ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ ಇನ್ನೂ ಜನರಿಗೆ ನೀರು ಪೂರೈಕೆ ಮಾಡುವುದು ಯಾವಾಗ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿದ್ರೆ ಮಾಡುತ್ತಿದ್ದೀರಾ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ವಿಜಯಪುರ ರಸ್ತೆಯ ಪುರಸಭೆ ಸಭಾಭವನದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಧಾರೆ ಯೋಜನೆಯಲ್ಲಿ ಜಿಲ್ಲೆಯ ಇಂಡಿ, ವಿಜಯಪುರ, ಬಸವನಬಾಗೇವಾಡಿ ತಾಲೂಕಿನ 702 ಗ್ರಾಮೀಣ ಜನವಸತಿಗಳು ಹಾಗೂ 5 ನಗರಗಳಾದ ಇಂಡಿ, ಚಡಚಣ, ಮನಗೂಳಿ, ನಿಡಗುಂದಿ, ಮತ್ತು ಕೋಲ್ಹಾರ, ಪ್ರದೇಶದಲ್ಲಿ ಇರುವ ಜನರಿಗೆ ಸುಮಾರು 1,636 ನೂರು ಕೋಟಿ ಜಲಧಾರೆ ಯೋಜನೆ 2025ಕ್ಕೆ ಪೂರ್ಣಗೊಂಡು ಜನರಿಗೆ ನೀರು ನೀಡಬೇಕಾಗಿತ್ತು.
ಆದರೆ 2026 ಮುಗಿಯುವ ಹಂತ ಬಂದರೂ ಕೃಷ್ಣ ನದಿಯಿಂದ ನೀರು ಎತ್ತುವ ಕಾಮಗಾರಿ ಮುಗಿದಿಲ್ಲ. ಬರುವ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಸವನಬಾಗೇವಾಡಿ ತಾಲೂಕು ಮತ್ತು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯಥೆ ಆಗಬಾರದು. ಜನರಿಗೆ ಸಮರ್ಪಕ ನೀರು ಪೂರೈಕೆ ಮಾಡಬೇಕು. ಜೆಜೆಎಂ ಹಾಗೂ ಬಹುಹಳ್ಳಿ ಕುಡಿಯುವ ನೀರು ಮತ್ತು ಜಲಧಾರೆ ಯೋಜನೆಯಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕೊಲ್ಹಾರ, ಮತ್ತು ರೊಣಿಹಾಳ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಒಂದು ವಾರದಲ್ಲಿ ಸರಿಪಡಿಸಿ, ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಪಿಡಿಒಗಳು ಗ್ರಾಮದ ಪ್ರಮುಖ ರಸ್ತೆಗಳ ಮೇಲೆ ಚರಂಡಿ ನೀರು ಹರಿದರೂ ಚರಂಡಿ ಸ್ವಚ್ಛಗೊಳಿಸುತ್ತಿಲ್ಲ. ತಾಲೂಕಿನ ಡೋಣೂರ ಗ್ರಾಮದಲ್ಲಿ ಜಾತ್ರೆ ಇದೆ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಮಠಾಧೀಶರು ಧರ್ಮಸಭೆ ನಡೆದಿದೆ ಆ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ, ಪೌಡರ್ ಸಿಂಪಡಣೆ ಯಾವ ವ್ಯವಸ್ಥೆಯು ಇಲ್ಲ ಹೀಗಾದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಈ ಮೊದಲು ಅಖಂಡ ಬಸವನಬಾಗೇವಾಡಿ ತಾಲೂಕಿನ ಒಬ್ಬ ತಹಸೀಲ್ದಾರ್, ತಾ.ಪಂ ಇಒ 180 ಹಳ್ಳಿಯ ಸಮಸ್ಯೆಯನ್ನು ಪರಿಶೀಲನೆ ಮಾಡಿ ಇತ್ಯರ್ಥ ಮಾಡುತ್ತಿದ್ದರು. ನೀವೇನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕೂಡಗಿ ಗ್ರಾಮದಲ್ಲಿ 101 ಎಕರೆ ಕೆರೆ ಅಕ್ಕಪಕ್ಕದ ಬಳಿ ಇರುವ ಜನರು ಮನೆ ನಿರ್ಮಾಣ ಮಾಡುತ್ತಿದ್ದಾರೆ ಪಿಡಿಒ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಅಕ್ರಮ ಮನೆ ನಿರ್ಮಾಣ ತಡೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಸವನಬಾಗೇವಾಡಿ ತಾಲೂಕು ಮತ್ತು ಮತಕ್ಷೇತ್ರದ ಮನಗೂಳಿ ಪಟ್ಟಣ ತೆಲಗಿ ಸೇರಿ ಅನೇಕ ಕಡೆ ಅಕ್ರಮವಾಗಿ ನಿವೇಶನ, ಗುಂಟೆ ಪ್ಲಾಟ್ ನಿರ್ಮಾಣ ಮಾಡುತ್ತಿದ್ದಾರೆ. ಯಾವ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ. ಅಧಿಕೃತ ಪಟ್ಟಣ ಮತ್ತು ಗ್ರಾ.ಪಂ ಪರವಾನಗಿ ಪಡೆದು ನಿವೇಶನ ನಿರ್ಮಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ, ತಕ್ಷಣ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಆನಂದ ಕೆ, ಸಿಇಒ ರಿಷಿ ಆನಂದ, ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ, ತಾ.ಪಂ ಇಒ ವೆಂಕಟೇಶ್ ವಂದಾಲ, ಕೊಲ್ಹಾರ, ನಿಡಗುಂದಿ ತಹಸೀಲ್ದಾರ, ತಾ.ಪಂ.ಇಒ ಮನಗೂಳಿ, ಕೊಲ್ಹಾರ ಪ.ಪಂ.ಅಧ್ಯಕ್ಷ ಉಪಾಧ್ಯಕ್ಷ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net