ನೀರಾವರಿ ವಿಷಯವಾಗಿ ಬಹಿರಂಗ ಚರ್ಚೆಗೆ ಬನ್ನಿ

ವಿಜಯಪುರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಗಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಶಂಕರಗೌಡ ಪಾಟೀಲ, ಡಿ.ಜಿ. ಬಿರಾದಾರ ಇದ್ದಾರೆ.
ವಿಜಯಪುರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಗಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಶಂಕರಗೌಡ ಪಾಟೀಲ, ಡಿ.ಜಿ. ಬಿರಾದಾರ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿಕೆ
  • ಸಚಿವ ಎಂ.ಬಿ. ಪಾಟೀಲರಿಗೆ ಸವಾಲು
ವಿಜಯಪುರ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿದ್ದು, ರಸ್ತೆ ಮತ್ತು ನೀರಾವರಿ ವಿಷಯವಾಗಿ ಏನೆಲ್ಲ ಪ್ರಗತಿ ಸಾಧಿಸಲಾಗಿದೆ ಎಂಬುದರ ಕುರಿತು ಬೇಕಾದರೆ ಸಚಿವ ಎಂ.ಬಿ. ಪಾಟೀಲರು ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸವಾಲು ಎಸೆದರು.
ನೀರಾವರಿ ಕಾಂಗ್ರೆಸ್ ಕೊಡುಗೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳುತ್ತಿದ್ದಾರೆ. ಆದರೆ ನೀರಾವರಿಗೆ ಬಿಜೆಪಿಯ ಕೊಡುಗೆಯೇ ದೊಡ್ಡದು. ಈ ಹಿಂದೆ ಅಧಿಕಾರದಲ್ಲಿದ್ದ ಯಡಿಯೂರಪ್ಪ ಸರ್ಕಾರ ಕೈಗೊಂಡ ಯೋಜನೆಗಳ ಫಲವಾಗಿ ಅನೇಕ ನೀರಾವರಿ ಕಾಮಗಾರಿಗಳಾಗಿವೆ. ಕೆ.ಎಸ್. ಈಶ್ವರಪ್ಪ ಅವರು ಕೆರೆಗೆ ನೀರು ತುಂಬುವ ಯೋಜನೆ ಜಾರಿಗಳಿಸಿದರು. ಹೀಗಾಗಿ ನೀರಾವರಿ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಚರ್ಚೆಗೆ ಸಿದ್ಧ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಬಲೇಶ್ವರ ಕ್ಷೇತ್ರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೇಂದ್ರ ಸರ್ಕಾರದ ಯೋಜನೆಗಳನ್ನೇ ತಾವು ಮಾಡಿದ್ದಾಗಿ ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ. ಒಂದೇ ಒಂದು ರಸ್ತೆ ಅಲ್ಲಿ ರಾಜ್ಯ ಸರ್ಕಾರ ನಿರ್ಮಿಸಿಲ್ಲ, ಒಂದರ್ಥದಲ್ಲಿ ರಾಜ್ಯ ಸರ್ಕಾರ ದಿವಾಳಿಯಾಗಿದೆ, ಗ್ಯಾರಂಟಿ ಎನ್ನುವುದು ಸಾಧನೆಯಲ್ಲ. ಹೀಗಾಗಿ ಕಾಂಗ್ರೆಸ್‌ನ ಕೊನೆಗಾಲ ವಿಜಯಪುರ ಜಿಲ್ಲೆಯಿಂದಲೇ ಆರಂಭವಾಗಲಿದೆ ಎಂದರು.
ಇನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರ ವಿಷಯದಲ್ಲಾಡಿದ ಮಾತುಗಳನ್ನು ಖಂಡಿಸಿರುವ ಅಂಗಡಿ ಅವರು, ‘ನೀವು ನಿಜವಾದ ಅಂಧಭಕ್ತರು. ರಾಹುಲ್ ಗಾಂಧಿ ಅವರ ಅಂಧ ಭಕ್ತರು’ ಎಂದು ಟೀಕಿಸಿದರು.
ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಇಂಡಿ ಶಾಸಕ ಬುದ್ದಿವಂತ, ಒಳ್ಳೆಯವರು ಎಂಬ ಭಾವನೆ ಇತ್ತು. ಆದರೆ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿರುವುದು
ಸರಿಯಲ್ಲ, ಕಾಲುವೆ ದುರಸ್ತಿ ಕೇಂದ್ರ ಸರ್ಕಾರದ ಹೊಣೆ ಎನ್ನುವುದು ಬಾಲಿಷತನದ ಹೇಳಿಕೆ ಎಂದರು.ಅಭಿವೃದ್ಧಿ ಮಾಡಿಲ್ಲ ಎಂದು ಜನತೆ ಮಾತನಾಡಿಕೊಳ್ಳುವ ಭಾರ ಸಹಿಸಿಕೊಳ್ಳದೇ ವಿವೇಚನೆ ಇಲ್ಲದೇ ಹೇಳಿಕೆ ನೀಡುವಲ್ಲಿ ತೊಡಗಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಡಿ.ಜಿ. ಬಿರಾದಾರ, ಈರಣ್ಣ ರಾವೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net