ನೋಡಬನ್ನಿ ನಾಡಹಬ್ಬ!

ಕರುನಾಡಿನ ಸಾಂಸ್ಕೃತಿಕ ಸಿರಿತನ, ಪಾರಂಪರಿಕ ವೈಭವವನ್ನು ಬಿಂಬಿಸುವ ಮೈಸೂರು ದಸರಾ ಇಡೀ ವಿಶ್ವದಲ್ಲೇ ಪ್ರಸಿದ್ಧವಾದದ್ದು. ಪ್ರತಿ ವರ್ಷದಂತೆ ಈ ವರ್ಷವೂ ನಾಡಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಾನುವಾರ ಚಾಲನೆ ದೊರೆಯಲಿದೆ. ಈ ಸಲದ ವಿಶೇಷಗಳು ಏನಿರುತ್ತವೆ ಎಂಬುದರ ಪಕ್ಷಿನೋಟ ಇಲ್ಲಿದೆ.
ನೋಡಬನ್ನಿ ನಾಡಹಬ್ಬ!
Published on: 

ಕರುನಾಡಿನ ಸಾಂಸ್ಕೃತಿಕ ಸಿರಿತನ, ಪಾರಂಪರಿಕ ವೈಭವವನ್ನು ಬಿಂಬಿಸುವ ಮೈಸೂರು ದಸರಾ ಇಡೀ ವಿಶ್ವದಲ್ಲೇ ಪ್ರಸಿದ್ಧವಾದದ್ದು. ಪ್ರತಿ ವರ್ಷದಂತೆ ಈ ವರ್ಷವೂ ನಾಡಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಾನುವಾರ ಚಾಲನೆ ದೊರೆಯಲಿದೆ. ಈ ಸಲದ ವಿಶೇಷಗಳು ಏನಿರುತ್ತವೆ ಎಂಬುದರ ಪಕ್ಷಿನೋಟ ಇಲ್ಲಿದೆ.

ಮೊದಲ ಬಾರಿಗೆ ಕಂಬಳ

ಕೆಲವರ ವಿರೋಧದ ನಡುವೆಯೂ ಇದೇ ಮೊದಲ ಬಾರಿಗೆ ದಸರಾದಲ್ಲಿ ಕರಾವಳಿಯ ಕಂಬಳ ಕ್ರೀಡೆ ಮೇಳೈಸಲಿದೆ. ಅಕ್ಟೋಬರ್​ 18, 19ರಂದು ನಡೆಯುವ ಇದರಲ್ಲಿ ಹಿರಿಯ ದರ್ಜೆಯ 150ರಿಂದ 160 ಜೋಡಿ ಕೋಣಗಳ ಓಟದ ರೋಚಕತೆ ಕಣ್ತುಂಬಿಕೊಳ್ಳಬಹುದು. ಸಾತಗಳ್ಳಿ ಸಮೀಪ 145 ಮೀಟರ್​ ಉದ್ದದ ಟ್ರ್ಯಾಕ್​ ಇದಕ್ಕಾಗಿ ನಿರ್ಮಿಸಲಾಗಿದೆ. ಅಂದಾಜು 8 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಸಾಂಸ್ಕೃತಿಕ ವೈಭವ

ಮೈಸೂರು ಅರಮನೆ ಅಂಗಳದಲ್ಲಿ ಶಾಸ್ತ್ರೀಯ ಸಂಗೀತ ಸುಧೆ ಹರಿಯಲಿದೆ. ಈ ಸಲ ಚಲನಚಿತ್ರೋತ್ಸವ ಕೈಬಿಡಲಾಗಿದೆ. ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ, ಪುಸ್ತಕ ಮೇಳ, ಲಲಿತಕಲೆ & ಕರಕುಶಲ ಮೇಳ, ವಿವಿಧ ಕ್ರೀಡಾಕೂಟ, 3 ತಿಂಗಳ ವಸ್ತುಪ್ರದರ್ಶನ, ರಂಗೋಲಿ ಸ್ಪರ್ಧೆ, ಕವಿಗೋಷ್ಠಿ, ಮಹಿಳಾ ದಸರಾ, ಯೋಗ ದಸರಾ, ಮಕ್ಕಳ ದಸರಾ, ಪಾರಂಪರಿಕ ನಡಿಗೆ, ಸೈಕಲ್​ ಸವಾರಿ, ರೈತ ದಸರಾ, ಕೃಷಿ ವಸ್ತು ಪ್ರದರ್ಶನ, ಮುದ್ದು ಪ್ರಾಣಿಗಳ ಪ್ರದರ್ಶನ, ಯೋಗ ಚಾರಣ ಇವೆಲ್ಲವೂ ಇರಲಿವೆ.

ಯುವ ದಸರಾದಲ್ಲಿ ಸಂಗೀತದಲೆ

ಸಂಗೀತದ ಅಲೆಯಲ್ಲಿ ತೇಲಿಸುವ "ಯುವ ದಸರಾ' ಅ.13ರಿಂದ 5 ದಿನ ನಡೆಯಲಿದ್ದು, ನೃತ್ಯ ನಿರ್ದೇಶಕ, ನಟ ಪ್ರಭುದೇವ ಉದ್ಘಾಟಿಸಲಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​, ಗಾಯಕರಾದ ಶಂಕರ್​ & ಎಹಸಾನ್​ & ಲಾಯ್​, ಬಹುಭಾಷಾ ಗಾಯಕ ಸಿಡ್​ ಶ್ರೀರಾಮ್​, ಗಾಯಕಿ ಜಾಸ್ಮಿನ್​ ಸ್ಯಾಂಡ್ಲಾಸ್​ ಅವರ ಸಂಗೀತ ಸಂಜೆ ಕಾರ್ಯಕ್ರಮಗಳಿವೆ.

ಕ್ರೀಡಾ ಕಲರವ

28 ಕ್ರೀಡೆಗಳು ಇರಲಿದ್ದು, 4500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಏಷ್ಯನ್​ ಕ್ರೀಡಾಕೂಟದ ಪದಕ ವಿಜೇತೆ ಪ್ರಣವಿ ಎಸ್​. ಅರಸ್​, ಕಾಮನ್​ವೆಲ್ತ್​ ಗೇಮ್ಸ್​ ಪದಕ ವಿಜೇತೆ ಕೆ.ಎಸ್​. ಶಿಲ್ಪಾ ಅವರು ಸ್ಪರ್ಧಿಗಳಿಗೆ ಉತ್ಸಾಹ ತುಂಬಲಿದ್ದಾರೆ.

ಬೆಳಕು & ಬೆರಗು

ಅತ್ಯಾಕರ್ಷಕ ದೀಪಾಲಂಕಾರಕ್ಕಾಗಿ ವಿಭಿನ್ನ ಪ್ರಯೋಗಕ್ಕೆ ಸೆಸ್ಕ್​ ಮುಂದಾಗಿದೆ. ಈ ಬಾರಿ 123 ವೃತ್ತ, 146 ಕಿ.ಮೀ. ರಸ್ತೆ, ಪ್ರಮುಖ ಸ್ಥಳಗಳಲ್ಲಿ 80 ವಿಶಿಷ್ಟ ಆಕೃತಿಗಳು ಬೆಳಕಿನಲ್ಲಿ ಮಿಂಚಲಿವೆ. ವಿದ್ಯುತ್​ ಕೊರತೆ ಸಂದರ್ಭದಲ್ಲೂ 21 ದಿನ ದೀಪಾಲಂಕಾರಕ್ಕೆ 3,106 ಕಿಲೋವಾಟ್​ ವಿದ್ಯುತ್​ ಬಳಸಲಾಗುತ್ತಿದೆ. 9.5 ಕೋಟಿ ರೂ. ವೆಚ್ಚವಾಗಲಿದೆ.

ಖಾಸಗಿ ದರ್ಬಾರ್​

ರಾಜವಂಶಸ್ಥರೂ ಸಿದ್ಧತೆ ಮಾಡಿಕೊಂಡಿದ್ದು, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಖಾಸಗಿ ದರ್ಬಾರ್​ ನಡೆಸುವ ಮೂಲಕ ಆಳರಸರ ಗತಕಾಲದ ವೈಭವ ಮೆಲುಕು ಹಾಕಲಿದ್ದಾರೆ.

ಜಂಬೂ ಸವಾರಿ ಮೆರುಗು

ಅ.21ರಂದು ನಡೆಯುವ ಜನಾಕರ್ಷಕ ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಭೂ, ವಾಯು, ನೌಕಾದಳದ 3 ತಂಡಗಳು, ಸಿನಿ ಕಲಾವಿದರು, ಹೊರರಾಜ್ಯ ಸ್ತಬ್ಧಚಿತ್ರಗಳು ಪ್ರಥಮ ಬಾರಿಗೆ ಭಾಗಿಯಾಗುತ್ತಿವೆ. ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತಿನೊಂದಿಗೆ ದಸರೆಗೆ ತೆರೆ ಬೀಳಲಿದೆ.

ಡ್ರೋನ್​ ಶೋ

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆಸ್ಕ್​ ವತಿಯಿಂದ ಅ. 17, 18, 20, 21ರಂದು ಡ್ರೋನ್​ ಶೋ ಏರ್ಪಡಿಸಲಾಗಿದ್ದು, 3500 ಡ್ರೋನ್​ ಬಳಸಿ ರಾಷ್ಟ್ರೀಯ ಪಕ್ಷಿ ನವಿಲಿನ ಚಿತ್ರಣವನ್ನು ಆಗಸದಲ್ಲಿ ಮೂಡಿಸಿ, ಗಿನ್ನೆಸ್​ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ನಂದಿ, ಹಾರುವ ಚಿಟ್ಟೆ, ನವಿಲು, ವಿಷ್ಣು ಚಕ್ರ, ಹಾರುತ್ತಿರುವ ಪಾರಿವಾಳ, ಹಿಮ ಕರಡಿ ಮತ್ತಿತರ ಆಕೃತಿಗಳು ನಭದಲ್ಲಿ ಮಿನುಗಲಿವೆ.

ಅಂಬಾರಿ ಆನೆ ಯಾರು...?

ಈ ಸಲ ಇದುವರೆಗೂ ಅಂಬಾರಿ ಆನೆ ಅಂತಿಮವಾಗಿಲ್ಲ. ಪ್ರಶಾಂತ್​ ಮತ್ತು ಧನಂಜಯ್​ ಆನೆಗಳ ಪೈಕಿ ಒಂದು ಅಂಬಾರಿ ಹೊರಲಿದ್ದು, ಅದು ಯಾವುದು ಎಂಬುದು ಇನ್ನೂ ಕೌತುಕ. ಹಿಂದಿನ ಅಂಬಾರಿ ಆನೆ ಅಭಿಮನ್ಯು ಮತ್ತು ಇತರ 13 ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ.

6 ಸಾವಿರ ಪೊಲೀಸರು

ಭದ್ರತೆಗೆ ಆರು ಸಾವಿರ ಪೊಲೀಸರನ್ನು ನಿಯೋಜಿಸಿ, 35 ಸಾವಿರ ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ.

ಏರ್​​ ಶೋ

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಮೂಡಿಸುವ "ವೈಮಾನಿಕ ಪ್ರದರ್ಶನ' ನಡೆಸಿಕೊಡಲು ಭಾರತೀಯ ವಾಯು ದಳ ಸಜ್ಜಾಗಿದೆ. ಸೂರ್ಯ ಕಿರಣ್​ ಏರೋಬ್ಯಾಟಿಕ್​ ತಂಡ ಹೈಲೈಟ್​. ಆದರೆ, ಸಾರಂಗ್​ ಹೆಲಿಕಾಪ್ಟರ್​ ತಂಡಕ್ಕೆ ಈ ಸಲ ಅವಕಾಶ ಸಿಕ್ಕಿಲ್ಲ.

ಮಂಗಳೂರು ಸಿದ್ಧ

ಶಕ್ತಿಸ್ವರೂಪಿಣಿ ದುರ್ಗಾದೇವಿಯ ಆರಾಧನೆಯ ಶರನ್ನವರಾತ್ರಿ ಅ. 11ಕ್ಕೆ ಆರಂಭಗೊಳ್ಳಲಿದ್ದು, ಮಂಗಳೂರು ದಸರಾಕ್ಕೆ ಸಿದ್ಧಗೊಂಡಿದೆ. ಕರಾವಳಿಯ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ದೇವಿಯ ಅಲಂಕಾರ, ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳ ಮೂಲಕ ಉತ್ಸವದ ಸಂಭ್ರಮ ಕಳೆಗಟ್ಟಲಿದೆ.

ಮಂಜುನಾಥ ತಿಮ್ಮಯ್ಯ ಬೋವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net